CCL 2026: ಮೂರು ಪಂದ್ಯ ಗೆದ್ದ ಬುಲ್ಡೋಜರ್ಸ್; ಸೆಮಿಫೈನಲ್‌ನಲ್ಲಿ ಕಿಚ್ಚನ ಪಡೆಗೆ ಎದುರಾಳಿ ಯಾರು?
ಸಿಸಿಎಲ್-12 ಕ್ರಿಕೆಟ್ ಟೂರ್ನಿ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡ್ತಿದೆ. ಎರಡು ವಾರಾಂತ್ಯಗಳಲ್ಲಿ ಲೀಗ್ ಹಂತದ ಪಂದ್ಯಗಳು ನಡೆದವು. ಒಟ್ಟು 8 ತಿಂಗಳಾಗಿ ಭಾರತೀಯ ಚಿತ್ರರಂಗದ ತಾರೆಯರು ಮೈದಾನಕ್ಕೆ ಇಳಿದಿದ್ದರು. ಗ್ರೂಪ್ ಸ್ಟೇಜ್‌ನಲ್ಲಿ ಒಟ್ಟು 12 ಪಂದ್ಯಗಳು ನಡೆದವು. ಅಂತಿಮವಾಗಿ 4 ತಂಡಗಳು ಸೆಮಿಫೈನಲ್ ಹಂತಕ್ಕೆ ಹೋಗಿವೆ.
ವೈಜಾಗ್ ಹಾಗೂ ಕೊಯಂಬತ್ತೂರಿನಲ್ಲಿ ಲೀಗ್ ಹಂತದ ಪಂದ್ಯಗಳು ನಡೆದವು. ಕೊಯಂಬತ್ತೂರಿನ ಮೈದಾನದಲ್ಲಿ ಇದೇ ಶನಿವಾರ ಹಾಗೂ ಭಾನುವಾರ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಆಡಿದ 3 ಪಂದ್ಯಗಳನ್ನು ಗೆದ್ದು ಕರ್ನಾಟಕ ಬುಲ್ಡೋಜರ್ಸ್ ತಂಡ ಟ್ರೋಫಿ ಗೆಲ್ಲುವ ಹುಮ್ಮಸ್ಸು ಹೆಚ್ಚಿಸಿಕೊಂಡಿದೆ. ಇನ್ನು ಸೆಮಿಫೈನಲ್‌ನಲ್ಲಿ ಕಿಚ್ಚನ ಪಡೆಗೆ ಚೆನ್ನೈ ಕಿಂಗ್ಸ್ ಎದುರಾಳಿ ಆಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದ್ದ ಚೆನ್ನೈ ಕಿಂಗ್ಸ್ ತಂಡ ಕೊನೆಯ ಪಂದ್ಯದಲ್ಲಿ ಮುಂಬೈ ಹೀರೊಸ್ ಎದುರು ಗೆಲುವಿನ ನಗೆಬೀರಿತು. ರನ್ ರೇಟ್ ಕಾರಣದಿಂದ ಚೆನ್ನೈ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಲಭಿಸಿದೆ. ತಲಾ 3 ಪಂದ್ಯಗಳನ್ನು ಗೆದ್ದು ಕರ್ನಾಟಕ ಬುಲ್ಡೋಜರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ 2 ಸ್ಥಾನ ಪಡೆದುಕೊಂಡಿವೆ. ಕೇರಳ ಸ್ಟೈಕರ್ಸ್ 2 ಪಂದ್ಯ ಗೆದ್ದು 3ನೇ ಸ್ಥಾನ ಪಡೆದಿದೆ. ಇನ್ನು ಚೆನ್ನೈ 4ನೇ ಸ್ಥಾನದಲ್ಲಿದೆ.
ಮೊದಲ ಸ್ಥಾನ ಪಡೆದ ಕಿಚ್ಚನ ಪಡೆ 4ನೇ ಸ್ಥಾನದಲ್ಲಿರುವ ಚೆನ್ನೈ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ. ಅದೇ ರೀತಿ 2ನೇ ಸ್ಥಾನದಲ್ಲಿರುವ ಬೆಂಗಾಲ್ ಟೈಗರ್ಸ್ 4ನೇ ಸ್ಥಾನದಲ್ಲಿ ಚೆನ್ನೈ ತಂಡಕ್ಕೆ ಎದುರಾಗಲಿದೆ. ಕಳೆದ ಬಾರಿಯ ಚಾಂಪಿಯನ್ ಪಂಜಾಬ್ ದೆ ಶೇರ್, ತೆಲುಗು ವಾರಿಯರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ತಂಡಗಳು ತಲಾ ಒಂದು ಪಂದ್ಯಗಳನ್ನು ಮಾತ್ರ ಗೆದ್ದವು. ಆದರೆ ರನ್‌ರೇಟ್ ಅದೃಷ್ಟದಿಂದ ಚೆನ್ನೈ ಸೆಮಿಫೈನಲ್ ಅವಕಾಶ ಪಡೆಯಿತು.

ಜನವರಿ 31ರಂದು 2ನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ಕಿಂಗ್ಸ್ ತಂಡಗಳು ಅಖಾಡಕ್ಕೆ ಇಳಿಯಲಿವೆ. ಕೋಯಂಬತ್ತೂರಿನ ಎಸ್‌ಎನ್‌ಆರ್ ಕಾಜೇಜು ಮೈದಾನದಲ್ಲಿ ಸಂಜೆ 6 ಗಂಟೆಗೆ ಪಂದ್ಯ ಆರಂಭವಾಗಲಿದೆ. ಅದೇ ದಿನ ಮಧ್ಯಾಹ್ನ 2 ಗಂಟೆಗೆ ಮೊದಲ ಸೆಮಿಫೈನಲ್ ಪಂದ್ಯ ಜರುಗಲಿದೆ. 2 ಪಂದ್ಯಗಳಲ್ಲಿ ಗೆದ್ದ ತಂಡಗಳು ಭಾನುವಾರ(ಫೆಬ್ರವರಿ 1) ಫೈನಲ್ ಪಂದ್ಯ ಆಡಲಿವೆ. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲೇ ಸಂಜೆ 6 ಗಂಟೆಗೆ ಅಂತಿಮ ಹಣಾಹಣಿ ಏರ್ಪಡಲಿದೆ.
11 ಟೂರ್ನಿಗಳಲ್ಲಿ 2 ಬಾರಿ ಕಿಚ್ಚನ ಪಡೆ ಸಿಸಿಎಲ್ ಟ್ರೋಫಿ ಎತ್ತಿ ಹಿಡಿದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ತಂಡ ಅದ್ಭುತ ಫಾರ್ಮ್‌ನಲ್ಲಿದ್ದು ಚಾಂಪಿಯನ್ ಆಗುವ ಭರವಸೆ ಮೂಡಿದೆ. ಹಾಲಿ ಚಾಂಪಿಯನ್ ಪಂಜಾಬ್ ದೆ ಶೇರ್ ವಿರುದ್ಧ ಮೊದಲ ಪಂದ್ಯದಲ್ಲಿ ಸುದೀಪ್ ಪಡೆ 31 ರನ್‌ಗಳಿಂದ ಗೆದ್ದಿತ್ತು.
ಮೊನ್ನೆ ಶುಕ್ರವಾರ ನಡೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ 9 ವಿಕೆಟ್‌ಗಳ ಗೆಲುವ ಸಾಧಿಸಿತ್ತು. ಪ್ರಬಲ ತಂಡದ ವಿರುದ್ಧ ಅದ್ಭುತ ಪ್ರದರ್ಶನ ನೀಡಿತ್ತು. ಇನ್ನು ಕೊನೆಯ ಪಂದ್ಯದಲ್ಲಿ ಭೋಜ್‌ಪುರಿ ದಬಾಂಗ್ಸ್ ವಿರುದ್ಧ 18 ರನ್‌ಗಳಿಂದ ತಂಡ ಗೆದ್ದು ಬೀಗಿದೆ. ವಯಸ್ಸು 50 ದಾಟಿದ್ರು ಕಿಚ್ಚ ಸುದೀಪ್ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಕೀಪರ್ ಆಗಿ ಸೊಗಸಾಗಿ ಕ್ಷೇತ್ರರಕ್ಷಣೆ ಮಾಡುವ ಜೊತೆ ಬ್ಯಾಟ್ ಹಿಡಿದು ಅಬ್ಬರಿಸುತ್ತಿದ್ದಾರೆ.
ಮೈದಾನದಲ್ಲಿ ಕಿಚ್ಚನ ಹುಡುಗರ ಸೆಲೆಬ್ರೇಷನ್ ಕೂಡ ಜೋರಾಗಿ ನಡೀತಿದೆ. ಸ್ವತಃ ಸುದೀಪ್ ಬಿಂದಾಸ್ ಆಗಿ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದಾರೆ. ಸುದೀಪ್ ಡ್ಯಾನ್ಸ್ ಮಾಡುತ್ತಿರುವ ವೀಡಿಯೋಗಳು ವೈರಲ್ ಆಗ್ತಿದೆ.


Click it and Unblock the Notifications











