ಸಿಎಸ್‌ಕೆ ವಿರುದ್ಧ ಸೋತ ಆರ್‌ಸಿಬಿ; ರೇಗಿಸೋಕೆ ಬರಬೇಡಿ ಎಂದ ಸಿಂಪಲ್ ಸುನಿ
ನಿನ್ನೆ ( ಏಪ್ರಿಲ್ 17 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಬ್ಬರಿಸಿದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗೆಲ್ಲಲು 227 ರನ್‌ಗಳ ಗುರಿಯನ್ನು ನೀಡಿತ್ತು. ಈ ಕಠಿಣ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಈ ಮೂಲಕ 8 ರನ್‌ಗಳ ಅಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನ್ನು ಅನುಭವಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ಪರ ಡಿವಾನ್ ಕಾನ್ವೆ, ಶಿವಂ ದುಬೆ ಹಾಗೂ ಅಜಿಂಕ್ಯಾ ರಹಾನೆ ಅಬ್ಬರಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಅಬ್ಬರಿಸಿ ಬಹುತೇಕ ಗೆಲುವಿನ ಸನಿಹಕ್ಕೆ ತಂಡವನ್ನು ಕೊಂಡೊಯ್ದಿದ್ದರು. ಇನ್ನೇನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲಿದೆ ಎಂದು ಎಲ್ಲರೂ ಊಹಿಸಿದ್ದಾಗಲೇ ಈ ಇಬ್ಬರು ಔಟ್ ಆದರು. ಬಳಿಕ ಕಣಕ್ಕಿಳಿದ ಆಟಗಾರರು ತಂಡವನ್ನು ಗೆಲ್ಲಿಸುವಲ್ಲಿ ಸಫಲರಾಗಲಿಲ್ಲ.
ಹೀಗೆ ಈ ಪಂದ್ಯ ಮುಗಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇತ್ತಂಡಗಳ ಅಭಿಮಾನಿಗಳ ನಡುವೆ ಟ್ರೋಲ್ ಕಿತ್ತಾಟ ಶುರುವಾಗಿದೆ. ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಟೀಕೆಗಳ ಸುರಿಮಳೆಗೈದಿದ್ದಾರೆ. ಹೌದು, ಇಂಡಿಯನ್ ಪ್ರೀಮಿಯರ್ ಲೀಗ್‌ನ ಸೌತ್ ಡರ್ಬಿ ಎಂದೇ ಖ್ಯಾತಿಯನ್ನು ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಮುಕ್ತಾಯಗೊಂಡ ಬಳಿಕ ಈ ರೀತಿಯ ಟೀಕೆ ಹಾಗೂ ಕಿತ್ತಾಟ ಸರ್ವೇ ಸಾಮಾನ್ಯ.

ಕೇವಲ ಅಭಿಮಾನಿಗಳು ಮಾತ್ರವಲ್ಲದೇ ತಂಡಗಳೂ ಸಹ ತಮ್ಮ ಅಧಿಕೃತ ಖಾತೆಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದುಕೊಂಡು ಕಿತ್ತಾಡುತ್ತವೆ. ಅಲ್ಲದೇ ಎರಡೂ ರಾಜ್ಯಗಳ ಸಿನಿಮಾ ಕಲಾವಿದರೂ ಸಹ ಈ ಚರ್ಚೆಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಈ ಪೈಕಿ ಕನ್ನಡದ ನಿರ್ದೇಶಕ ಸಿಂಪಲ್ ಸುನಿ ಕೂಡ ಒಬ್ಬರು. ಸುನಿ ಈ ಪಂದ್ಯ ಮುಕ್ತಾಯವಾದ ಬಳಿಕ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, "ಶುಭಾಶಯಗಳು #csk ಈ ಮ್ಯಾಚ್ "ಧೋನಿ "ಗೆ.. ಖುಷಿಪಡಿ..ವಿಶಲ್ ಹೊಡಿ ಆದ್ರೆ ರೇಗಿಸೋಕೆ ಮಾತ್ರ ಬರಬೇಡಿ.. #RCBvsCSK ನಮ್ ಹುಡುಗ್ರು ಒಳ್ಳೆ ಫೈಟ್ ಕೊಟ್ರು.. ಕೊನೇಲಿ ಏನಾಯ್ತೋ,, ಮ್ಯಾಚ್ ಬಿಟ್ರು..." ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ನಮ್ಮ ತಂಡದ ಆಟಗಾರರು ಚೆನ್ನಾಗಿ ಆಡಿದ್ದಾರೆ, ರೇಗಿಸೋಕೆ ಬರದೇ ನಿಮ್ಮ ಖುಷಿಯನ್ನು ಸಂಭ್ರಮಿಸಿ ಎಂದು ಸಿಂಪಲ್ ಸುನಿ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ಇನ್ನು ಈ ಪಂದ್ಯ ಆರಂಭವಾಗುವುದಕ್ಕೆ ಮುನ್ನವೇ ಸಿಂಪಲ್ ಸುನಿ ಈ ಪಂದ್ಯವನ್ನು ನೀವು ಗೆಲ್ಲಲೇಬೇಕು ಎಂದು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದರು.
ಹೌದು, ಏಪ್ರಿಲ್ 11ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಾಗ ಟ್ವೀಟ್ ಮಾಡಿದ್ದ ಸಿಂಪಲ್ ಸುನಿ ಮುಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಬೇಕಾದ್ರೂ ಸೋಲಿ, ಆದರೆ ಚೆನ್ನೈ ಸೂಪರ್ ವಿರುದ್ಧದ ಪಂದ್ಯವನ್ನು ಮಾತ್ರ ನೀವು ಗೆಲ್ಲಲೇಬೇಕು ಎಂದು ಬರೆದುಕೊಂಡಿದ್ದರು. ಆದರೆ ಸುನಿ ಕನಸು ನನಸಾಗಲಿಲ್ಲ.


Click it and Unblock the Notifications











