ಧನಂಜಯ್- ಧನ್ಯ ಆರತಕ್ಷತೆ; ಉಪೇಂದ್ರ, ಧ್ರುವ, ಸುಕುಮಾರ್ ಸೇರಿ ಹಲವರು ಭಾಗಿ
ನಟ ಧನಂಜಯ್ ಹಾಗೂ ಧನ್ಯತಾ ಜೋಡಿಯ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು, ಅಭಿಮಾನಿಗಳು ಹಾಜರಾಗಿ ಜೋಡಿಗೆ ಶುಭ ಹಾರೈಸಿದ್ದಾರೆ. ಗುಲಾಬಿ ಬಣ್ಣದ ಕಾಸ್ಟ್ಯೂಮ್ಸ್‌ನಲ್ಲಿ ಧನು-ಧನ್ಯಾ ಮಿಂಚಿದರು.
ಅದ್ಧೂರಿ ವೇದಿಕೆಯಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 6 ಗಂಟೆಗೆ ಶುರುವಾದ ರಿಸೆಪ್ಷನ್ ರಾತ್ರಿ 10 ಗಂಟೆಗೆ ಮುಕ್ತಾಯವಾಯಿತು. ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಹಾಜರಾಗಿ ಶುಭ ಹಾರೈಸಿದರು. ಅತಿಥಿಗಳು, ಅಭಿಮಾನಿಗಳಿಗೆ ಭರ್ಜರಿ ಊಟದ ವ್ಯವಸ್ಥೆ ಸಹ ಆಗಿತ್ತು.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಶಾಸಕ ಶಿವಲಿಂಗೇಗೌಡ, ಸಚಿವ ಜಮೀರ್ ಅಹ್ಮದ್, ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ ಯದುವೀರ್, ಮಾಜಿ ಸಂಸದ ಶ್ರೀರಾಮುಲು ಸೇರಿದಂತೆ ರಾಜಕೀಯ ಮುಖಂಡರು ಆಗಮಿಸಿ ಧನು-ಧನ್ಯಾಗೆ ಶುಭ ಕೋರಿದರು.
ಕನ್ನಡ ಸಿನಿಮಾ ತಾರೆಯರಾದ ನೀನಾಸಂ ಸತೀಶ್, ಸೃಜನ್ ಲೋಕೇಶ್, ಉಪೇಂದ್ರ ದಂಪತಿ, ಧ್ರುವ ಸರ್ಜಾ ದಂಪತಿ, ನಟಿ ಸಪ್ತಮಿ ಗೌಡ, ನಟ ಅಜಯ್ ರಾವ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ಅವಿನಾಶ್- ಮಾಳವಿಕ ಅವಿನಾಶ್ ದಂಪತಿ, ನಟ ಶ್ರೀಮುರಳಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟಿಯರಾದ ಶ್ರದ್ಧಾ ಶ್ರೀನಾಥ್, ಶೃತಿ ಹರಿಹರನ್, ನಿಧಿ ಸುಬ್ಬಯ್ಯ ಸೇರಿದಂತೆ ಹಲವರು ಈ ಮದುವೆ ಆರತಕ್ಷತೆಗೆ ಸಾಕ್ಷಿಯಾದರು. ಅದ್ಧೂರಿ ವೇದಿಕೆಯಲ್ಲಿ ಸಾಕಷ್ಟು ಅಭಿಮಾನಿಗಳು ದೂರದಿಂದಲೇ ಜೋಡಿಗೆ ಶುಭ ಹಾರೈಸಿದರು.
ತೆಲುಗು ಚಿತ್ರ ನಿರ್ದೇಶಕ ಸುಕುಮಾರ್ ಸಹ ಧನಂಜಯ್ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ತೆಲುಗಿನ 'ಪುಷ್ಪ' ಸರಣಿ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಆ ಚಿತ್ರದಲ್ಲಿ ಜಾಲಿ ರೆಡ್ಡಿ ಪಾತ್ರದಲ್ಲಿ ಧನು ನಟಿಸಿದ್ದು ಗೊತ್ತೇಯಿದೆ. ಇನ್ನು ಆರತಕ್ಷತೆಗೂ ಮುನ್ನ ಹೋಟೆಲ್‌ನಲ್ಲಿ ಧನಂಜಯ್ ಅವರನ್ನು ಭೇಟಿ ಮಾಡಿದ್ದರು. ಆರತಕ್ಷತೆ ಮುಗಿದ ಬಳಿಕ ಧನಂಜಯ್ ಹಾಗೂ ಧನ್ಯ ಮಾತನಾಡಿ ಎಲ್ಲರಿಗೂ ಧನ್ಯವಾದ ತಿಳಿಸಿದರು.
ನಾಳೆ(ಫೆಬ್ರವರಿ) ಬೆಳಗ್ಗೆ 8.20 ರಿಂದ 10 ಗಂಟೆ ನಡುವಿನ ಶುಭ ಮುಹೂರ್ತದಲ್ಲಿ ಧನ್ಯಾ ಕೊರಳಿಗೆ ಧನಂಜಯ್ ಮಾಂಗಲ್ಯಧಾರಣೆ ಮಾಡಲಿದ್ದಾರೆ. ನಾಳೆ ಮದುವೆ 20 ಸಾವಿರ ಜನ ಭಾಗಿ ಆಗುವ ನಿರೀಕ್ಷೆಯಿದೆ. ಭಾನುವಾರ ಆಗಿರುವುರಿಂದ ಈ ಸಂಖ್ಯೆ ಹೆಚ್ಚಬಹುದು. ಸಾಕಷ್ಟು ಗಣ್ಯರು ಇವತ್ತಿನ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿ ಆಗಿಲ್ಲ. ಅವರೆಲ್ಲರೂ ನಾಳೆ ಧಾರೆ ಮುಹೂರ್ತಕ್ಕೆ ಆಗಮಿಸಲಿದ್ದಾರೆ.


Click it and Unblock the Notifications











