ಮತ್ತೆ ಬರುತ್ತಿದೆ CCL; ಯಾವಾಗ ಶುರು, ಎಷ್ಟು ತಂಡಗಳು? ಇಲ್ಲಿದೆ ಮಾಹಿತಿ

ಭಾರತದ ಎಲ್ಲಾ ಪ್ರಮುಖ ಚಿತ್ರರಂಗಗಳು ಸೇರಿ ಆಡುವ ಜನಪ್ರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪುನಃ ಬರುತ್ತಿದೆ. 2011ರಲ್ಲಿ ಆರಂಭವಾದ ಈ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2018 ಒಂದು ವರ್ಷವನ್ನು ಹೊರತುಪಡಿಸಿ 2019ರವರೆಗೂ ಎಲ್ಲಾ ವರ್ಷವೂ ನಡೆದಿತ್ತು. ಬಳಿಕ ಎಲ್ಲೆಡೆ ಕೊರೊನಾ ವೈರಸ್ ಭೀತಿ ಉಂಟಾದ ಕಾರಣ ಈ ಲೀಗ್ 2020, 2021 ಹಾಗೂ 2022 ಈ ಮೂರು ವರ್ಷಗಳಲ್ಲಿ ನಡೆಯಲಿಲ್ಲ. ಹೀಗೆ ಮೂರು ವರ್ಷಗಳ ಕಾಲ ಬ್ರೇಕ್ ಬಿದ್ದಿದ್ದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಈ ವರ್ಷ ನಡೆಯಲಿದೆ.
ಫೆಬ್ರವರಿ 18ರಂದು ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಯಲಿದ್ದು, ಒಟ್ಟು ಎಂಟು ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ. ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್, ಕರ್ನಾಟಕ ಬುಲ್ಡೋಜರ್ಸ್, ಕೇರಳ ಸ್ಟ್ರೈಕರ್ಸ್, ಚೆನ್ನೈ ರೈನೋಸ್, ಪಂಜಾಬ್ ದೆ ಶೇರ್ ಹಾಗೂ ಮುಂಬೈ ಹೀರೊಸ್ ತಂಡಗಳು ಕಣಕ್ಕೆ ಇಳಿಯಲಿವೆ.
ಫೆಬ್ರವರಿ 18ರಂದು ಗ್ರೂಪ್ ಸ್ಟೇಜ್ ಪಂದ್ಯಗಳು ಆರಂಭವಾಗಲಿದ್ದು, ಈ ಪಂದ್ಯಗಳು ಮಾರ್ಚ್ 12ರ ತನಕ ನಡೆಯಲಿವೆ. ಬಳಿಕ ಮಾರ್ಚ್ 18ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಮಾರ್ಚ್ 19ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಇನ್ನು ಗ್ರೂಪ್ ಹಂತದಲ್ಲಿ ಪ್ರತಿ ತಂಡಕ್ಕೆ ನಾಲ್ಕು ಪಂದ್ಯಗಳು ಇರಲಿದ್ದು, ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿರುವ ತಂಡಗಳು ಸೆಮಿಫೈನಲ್ ಸುತ್ತಿಗೆ ಲಗ್ಗೆ ಇಡಲಿವೆ.
ಇನ್ನು ಮೂರು ವರ್ಷಗಳ ಬಳಿಕ ಈ ಟೂರ್ನಿ ನಡೆಯಲಿದ್ದು, ಬಹಳ ದಿನಗಳ ಬಳಿಕ ತಮ್ಮ ನೆಚ್ಚಿನ ನಟರು ಮೈದಾನಕ್ಕಿಳಿದು ಕ್ರಿಕೆಟ್ ಆಡುವುದನ್ನು ಸಿನಿ ರಸಿಕರು ನೋಡಬಹುದಾಗಿದೆ. ಅಲ್ಲದೇ ಸದ್ಯಕ್ಕೆ ಪ್ಯಾನ್ ಇಂಡಿಯಾ ಟ್ರೆಂಡ್ ನಡೆಯುತ್ತಿದ್ದು, ಎಲ್ಲಾ ಚಿತ್ರರಂಗಗಳ ಚಿತ್ರಗಳ ಬಗ್ಗೆ ವಿವಿಧೆಡೆ ಚರ್ಚೆಗಳು ನಡೆಯುತ್ತಿರುವುದರಿಂದ ಕಳೆದ ಆವೃತ್ರಿಗಳಿಗಿಂತ ಈ ಬಾರಿಯ ಆವೃತ್ತಿ ಹೆಚ್ಚು ಕ್ರೇಜ್ ಹೊಂದಿರಲಿದೆ ಹಾಗೂ ವಿಭಿನ್ನವಾಗಿಯೂ ಸಹ ಇರಲಿದೆ ಎನ್ನಬಹುದು. ಇನ್ನು ಕೊನೆಯ ಬಾರಿಗೆ ಈ ಟೂರ್ನಿ ನಡೆದಾಗ ಮುಂಬೈ ಹೀರೊಸ್ ತಂಡ ನಮ್ಮ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದಿತ್ತು.


Click it and Unblock the Notifications











