ಸಿಸಿಎಲ್ ಪಂದ್ಯದಲ್ಲಿ ದರ್ಶನ್ ಬೌಲಿಂಗ್; 6 ಎಸೆತಕ್ಕೆ ಎಷ್ಟು ರನ್, ಎಷ್ಟು ವಿಕೆಟ್?
ಸಿನಿಮಾ ತಾರೆಯರ ಕ್ರಿಕೆಟ್ ಹಬ್ಬ ಶುರುವಾಗಿದೆ. ಸಿಸಿಎಲ್ ಸೀಸನ್ 11 ಕಳೆ ಕಟ್ಟಿದೆ. ಪ್ಯಾನ್ ಇಂಡಿಯಾ ಕ್ರಿಕೆಟ್ ಟೂರ್ನಿ ಬಹಳ ಕುತೂಹಲ ಕೆರಳಿಸಿದೆ. 7 ವಿವಿಧ ಚಿತ್ರರಂಗದ ತಾರೆಯರು ಕ್ರಿಕೆಟ್ ಮೈದಾನಕ್ಕೆ ಇಳಿಯುತ್ತಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಮೈದಾನದಲ್ಲಿ ಸಾಕಷ್ಟು ಸುಂದರ ಕ್ಷಣಗಳನ್ನು ಅಭಿಮಾನಿಗಳಿಗೆ ಕೊಟ್ಟಿದೆ.
ಒಂದ್ಕಾಲದಲ್ಲಿ ಸುದೀಪ್ ಹಾಗೂ ದರ್ಶನ್ ಆತ್ಮೀಯ ಸ್ನೇಹಿತರಾಗಿದ್ದರು. ಆಗ ಕಿಚ್ಚನ ಜೊತೆ ದರ್ಶನ್ ಮೈದಾನಕ್ಕಿಳಿದ ಬ್ಯಾಟ್ ಬೀಸಿದ್ದರು. ಬೌಲಿಂಗ್ ಮಾಡಿದ್ದರು. ಬೌಂಡರಿ ಸಿಕ್ಸರ್ ಬಾರಿಸಿದ್ದಾಗ ಇಬ್ಬರು ಖುಷಿಪಟ್ಟಿದ್ದರು. ಕುಣಿದು ಕುಪ್ಪಳಿಸಿದ್ದರು. ಎದುರಾಳಿ ತಂಡದ ವಿಕೆಟ್ ಬಿದ್ದಾಗ ಮೈದಾನದಲ್ಲೇ ಕುಣಿದು ಸಂಭ್ರಮಿಸಿದ್ದರು. ಸ್ನೇಹದಲ್ಲಿ ಬಿರುಕು ಮೂಡಿದ ಬಳಿಕ ಇಬ್ಬರೂ ದೂರಾಗಿದ್ದರು.

ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕೂಡ ಅಭಿಮಾನಿಗಳು ದರ್ಶನ್ ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಸೀಸನ್ ಬಂದಿದೆ. ಈ ಬಾರಿ ಕೂಡ ದರ್ಶನ್ ಮೈದಾನಕ್ಕೆ ಇಳಿಯುತ್ತಿಲ್ಲ. ಆದರೆ ದರ್ಶನ್ ಈ ಹಿಂದೆ ಆಡಿದ್ದ ಪಂದ್ಯಗಳ ಸುಂದರ ಕ್ಷಣಗಳನ್ನು ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದೆ.
ನಟ ದರ್ಶನ್ ಬ್ಯಾಟ್ ಹಿಡಿದು ಕ್ರೀಸ್‌ನಲ್ಲಿ ರನ್ ಗಳಿಸಿದ್ದು ಮಾತ್ರವಲ್ಲ ಒಮ್ಮೆ ಒಂದು ಓವರ್ ಬೌಲಿಂಗ್ ಸಹ ಮಾಡಿದ್ದರು. ಬೆಂಗಾಲ್ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ದರ್ಶನ್ ಒಂದು ಓವರ್ ಎಸೆದಿದ್ದರು. ಸುದೀಪ್ ಹುರಿದುಂಬಿಸಿ ಚೆಂಡನ್ನು ದರ್ಶನ್ ಕೈಗೆ ಕೊಟ್ಟಿದ್ದರು. ಪ್ರೇಕ್ಷಕರ ಗ್ಯಾಲರಿಯಿಂದ ದರ್ಶನ್‌ಗೆ ಭಾರೀ ಬೆಂಬಲ ಸಿಕ್ಕಿತ್ತು. ದರ್ಶನ್, ದರ್ಶನ್ ಎನ್ನುವ ಕೂಗು ಮುಗಿಲು ಮುಟ್ಟಿತ್ತು.
ಮೀಡಿಯಂ ಪೇಸ್ ಬೌಲರ್ ದರ್ಶನ್ ಮೊದಲ ಎಸೆತದಲ್ಲಿ ಡಿಫ್ ಪಾಯಿಂಟ್‌ನಲ್ಲಿ ಒಂದು ರನ್ ಕೊಟ್ಟಿದ್ದರು. ಎರಡನೇ ಎಸೆತಕ್ಕೆ ಯಾವುದೇ ರನ್ ಕೊಡಲಿಲ್ಲ, 3ನೇ ಎಸೆತದಲ್ಲಿ ಮತ್ತೊಂದು ಸಿಂಗಲ್. 4 ಎಸೆತಕ್ಕೆ ಯಾವುದೇ ರನ್ ಇಲ್ಲ, 5ನೇ ಎಸೆತದಲ್ಲಿ 2 ರನ್. ದರ್ಶನ್ ಎಸೆದ ಕೊನೆಯ ಎಸೆತದಲ್ಲಿ ಬ್ಯಾಟರ್ ಗುಡ್ ಲೆಂಗ್ತ್ ಎಸೆತವನ್ನು ಮಿಡ್ ಆನ್ ಕಡೆಗೆ ತಳ್ಳಲು ನೋಡಿದರು. ಆದರೆ ಚೆಂಡು ಬ್ಯಾಟಿನ ಅಂಚಿಗೆ ತಾಗಿ ಬೌಂಡರಿ ಗೆರೆ ದಾಟಿತ್ತು.

ಒಟ್ಟಾರೆ ದರ್ಶನ್ 6 ಎಸೆತಗಳಲ್ಲಿ ಯಾವುದೇ ವಿಕೆಟ್ ಇಲ್ಲದೇ 8 ರನ್ ನೀಡಿದ್ದರು. ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ತರುಣ್ ಸುಧೀರ್ ಜೊತೆ ಸೇರಿ ದರ್ಶನ್ ಒಂದು ರನ್ ಔಟ್ ಸಹ ಮಾಡಿದ್ದರು. ಅದು ಕೂಡ ಅಭಿಮಾನಿಗಳ ನೆನಪಿನಲ್ಲಿ ಉಳಿದುಬಿಟ್ಟಿದೆ. 6ನೇ ಸನಂಬರ್ ಜೆರ್ಸಿ ತೊಟ್ಟು ದರ್ಶನ್ ಮೈದಾನಕ್ಕೆ ಇಳಿಯುತ್ತಿದ್ದರು. ಅದು ಈಗ ನೆನಪು ಮಾತ್ರ ಎನ್ನುವಂತಾಗಿದೆ.
ಸೆಲೆಬ್ರೆಟಿಗಳೆಲ್ಲಾ ಮೈದಾನಕ್ಕೆ ಇಳಿದು ಕ್ರಿಕೆಟ್ ಆಡಿದರೂ ರಜನಿಕಾಂತ್, ಚಿರಂಜೀವಿ, ಶಾರುಖ್ ಖಾನ್, ಆಮೀರ್ ಖಾನ್, ಹೃತಿಕ್ ರೀತಿಯ ತಾರೆಯರು ಕ್ರೀಡಾಂಗಣಕ್ಕೆ ಬರುವುದಿಲ್ಲ. ಮಾಲಿವುಡ್ ನಟ ಮೋಹನ್ ಲಾಲ್ ತಂಡವನ್ನು ಹುರಿದುಂಬಿಸಲು ಬರ್ತಾರೆ. ರೆಬಲ್ ಸ್ಟಾರ್ ಅಂಬರೀಶ್ ಸಹ ಬರುತ್ತಿದ್ದರು. ಸಲ್ಮಾನ್ ಖಾನ್ ಬೌಂಡರಿ ಲೈನ್‌ನಲ್ಲಿ ನಿಂತು ತಮ್ಮ ಮುಂಬೈ ಹೀರೋಸ್ ತಂಡವನ್ನು ಬೆಂಬಲಿಸುತ್ತಿದ್ದರು. ಈ ಬಾರಿ ಭದ್ರತೆ ಕಾರಣಕ್ಕೆ ಸಲ್ಲು ಮೈದಾನಕ್ಕೆ ಬರುವುದು ಅನುಮಾನ ಎನ್ನಲಾಗ್ತಿದೆ.
ಸದ್ಯ ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿ ಮತ್ತೆ ಶುರುವಾಗಿದೆ. ಯಾರು ಈ ಬಾರಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಕಾದು ನೋಡಬೇಕಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ 3ನೇ ಬಾರಿ ಚಾಂಪಿಯನ್ ಆಗುವ ಹುಮ್ಮಸ್ಸಿನಲ್ಲಿದೆ.


Click it and Unblock the Notifications











