ಯಶ್ ಉದ್ದ ಕೂದಲು, ಗಡ್ಡಕ್ಕೆ ಕತ್ತರಿ ಹಾಕಿದ ವ್ಯಕ್ತಿ 'ಟಾಕ್ಸಿಕ್' ಕಥೆ ಬಗ್ಗೆ ಏನಂದ್ರು?
ರಾಕಿಂಗ್ ಸ್ಟಾರ್ ಯಶ್ ಹೊಸ ಹೇರ್‌ಸ್ಟೈಲ್ ಸಖತ್ ವೈರಲ್ ಆಗುತ್ತಿದೆ. ಮುಖೇಶ್ ಅಂಬಾನಿ ಮಗನ ಮದುವೆಗೆ ವಿಭಿನ್ನ ಲುಕ್‌ನಲ್ಲಿ ರಾಕಿಭಾಯ್ ಎಂಟ್ರಿ ಕೊಟ್ಟಿದ್ದರು. ಅರೇ ಉದ್ದ ಕೂದಲು, ಗಡ್ಡ ಟ್ರಿಮ್ ಆಗಿದ್ಯಲ್ಲ, ಹೊಸ ಲುಕ್ ಸೂಪರ್ ಎಂದು ಫೋಟೊಗಳನ್ನು ವೈರಲ್ ಮಾಡಿದ್ದರು.
'ಟಾಕ್ಸಿಕ್' ಚಿತ್ರದಲ್ಲಿ ಯಶ್ ಇದೇ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಹೊಸ ಹೇರ್‌ಸ್ಟೈಲ್ ಹಿಂದಿನ ರೂವಾರಿ ಯಾರು ಎನ್ನುವುದು ಇದೀಗ ರಿವೀಲ್ ಆಗಿದೆ. ಖ್ಯಾತ ಸೆಲೆಬ್ರೆಟಿ ಹೇರ್‌ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಈ ಬಾರಿ ಯಶ್ ಕೂದಲಿಗೆ ಕತ್ತರಿ ಹಾಕಿದ್ದಾರೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಖ್ಯಾತ ತಾರೆಯರನ್ನು ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಹೊಸದಾಗಿ ತೋರಿಸಿ ಅಲೆಕ್ಸ್ ವಿಜಯಕಾಂತ್ ಕಮಾಲ್ ಮಾಡಿದ್ದಾರೆ. ಇದೀಗ ಯಶ್ ಹೇರ್‌ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ. "ಅಂದು ನಾವು ಹೋಟೆಲ್ ತಲುಪುವ ಮುನ್ನ ಯಶ್ ಹೊಸ ಹೇರ್‌ಸ್ಟೈಲ್ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಸಾಕಷ್ಟು ಚರ್ಚೆ ಆಯಿತು.
'ಟಾಕ್ಸಿಕ್' ಸಿನಿಮಾ ಸ್ಕ್ರಿಪ್ಟ್ ಕೇಳಿ ಅದರಿಂದ ಪ್ರೇರಣೆಗೊಂಡು ಈ ಹೇರ್ ಸ್ಟೈಲ್ ಟ್ರೈ ಮಾಡಿದ್ದು. ನಾನು ಸ್ಕ್ರಿಪ್ಟ್ ಅನ್ನು ಕೇಳಿದಾಗ, ಶಾರ್ಟ್ ಹೇರ್‌ಸ್ಟೈಲ್ ಪಾತ್ರಕ್ಕೆ ಸೂಕ್ತ ಎನಿಸಿತು. ನಾವು ಅವರ ಪಾತ್ರ ಮತ್ತು ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಕಸ್ಟಮೈಸ್ ಮಾಡಿದ ಪಾಂಪಡೋರ್ ಸ್ಟೈಲ್ ಚೆನ್ನಾಗಿರುತ್ತದೆ ಎಂದು ನಿರ್ಧರಿಸಿದೆವು. ಯಶ್ ಹೊಸ ಹೇರ್‌ಸ್ಟೈಲ್ ಅನ್ನು ಸ್ಟೈಲಿಶ್ ಪಾಂಪಡೋರ್, ಸ್ಕ್ರಿಪ್ಟ್‌ಗೆ ತಕ್ಕಂತೆ ಕೊಂಚ ಬದಲಿಸಿದ್ದೇವೆ" ಎಂದಿದ್ದಾರೆ.
ಹೊಸ ಲುಕ್‌ನಲ್ಲಿ ತಮ್ಮನ್ನು ತಾವು ನೋಡಿಕೊಂಡು "ಯಶ್ ನನ್ನನ್ನು ತಬ್ಬಿಕೊಂಡರು. ಅಲೆಕ್ಸ್ ನೀವು ಸಾಧಿಸಿದಿರಿ" ಎಂದು ಬೆನ್ನು ತಟ್ಟಿದ್ದಾಗಿ ಅಲೆಕ್ಸ್ ವಿವರಿಸಿದ್ದಾರೆ. 'KGF' ಸರಣಿ ಸಮಯದಿಂದಲೂ ಯಶ್ ಉದ್ದನೆಯ ಕೂದಲು, ಗಡ್ಡ ಲುಕ್ ಕಾಪಾಡಿಕೊಂಡು ಬಂದಿದ್ದರು. ಸಾಕಷ್ಟು ಜನ ಯಾವಾಗ ಇದಕ್ಕೆ ಕತ್ತರಿ ಹಾಕುತ್ತೀರಾ ಎಂದು ಕೇಳುತ್ತಾ ಬಂದಿದ್ದರು. ಆಗ ಯಶ್ ನಕ್ಕು ಸುಮ್ಮನಾಗುತ್ತಿದ್ದರು. ಕೊನೆಗೂ ಹೊಸ ಅವತಾರದಲ್ಲಿ ದರ್ಶನ ಕೊಟ್ಟು ಹುಬ್ಬೇರಿಸಿದ್ದಾರೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭಕ್ಕೆ ಪತ್ನಿ ಸಮೇತ ಯಶ್ ಹಾಜರಾಗಿದ್ದರು. ನಟ ಯಶ್‌ಗೆ ಮುಖೇಶ್ ಅಂಬಾನಿ 2 ಕೋಟಿ ರೂ. ಮೌಲ್ಯದ ಕೈಗಡಿಯಾರ ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇನ್ನು 'ಟಾಕ್ಸಿಕ್' ಚಿತ್ರಕ್ಕೆ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಬಗ್ಗೆ ಯಾವುದೇ ಹೊಸ ಅಪ್‌ಡೇಟ್ ಸಿಕ್ಕಿಲ್ಲ.
'ಟಾಕ್ಸಿಕ್' ಡ್ರಗ್ಸ್ ಮಾಫಿಯಾ ಕುರಿತ ಕಥೆ ಎನ್ನಲಾಗ್ತಿದೆ. ಚಿತ್ರದಲ್ಲಿ ಯಶ್ ಸ್ಟೈಲಿಶ್ ಡಾನ್ ಆಗಿ ನಟಿಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಚಿತ್ರದಲ್ಲಿ 60, 70ರ ದಶಕದ ಕಥೆ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ತಾರಾಗಣದಲ್ಲಿ ನಯನತಾರಾ, ಕೈರಾ ಅದ್ವಾನಿ ಕುಡ ಇದ್ದಾರೆ ಎನ್ನುವ ಚರ್ಚೆ ನಡೀತಿದೆ. ಆದರೆ ಅಧಿಕೃತವಾಗಿ ಚಿತ್ರತಂಡ ಮಾತ್ರ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ 'ಟಾಕ್ಸಿಕ್' ಚಿತ್ರ ನಿರ್ಮಿಸುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











