ರಿಷಬ್ ಶೆಟ್ಟಿ 'ಕಾಂತಾರ- 1' ಸೆನ್ಸಾರ್ ಆಯ್ತಾ? ಸಿನಿಮಾ ನೋಡಿದವರು ಏನಂದ್ರು?
ಹೊಂಬಾಳೆ ಫಿಲ್ಮ್ಸ್ ಮಹತ್ವಾಕಾಂಕ್ಷೆಯ ಸಿನಿಮಾ 'ಕಾಂತಾರ- 1' ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಪ್ರಭಾಸ್, ಹೃತಿಕ್ ರೋಷನ್, ಶಿವಕಾರ್ತಿಕೇಯನ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಡಿಜಿಟಲ್ ಆಗಿ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಅಕ್ಟೋಬರ್ 2ರಂದು ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ.
ಈಗಾಗಲೇ 'ಕಾಂತಾರ- 1' ಸಿನಿಮಾ ಸೆನ್ಸಾರ್ ಕೆಲಸಗಳನ್ನು ಪೂರೈಸಿದ್ದು ಅಂತಿಮ ಹಂತದ ಸಿದ್ಧತೆಗಳು ನಡೀತಿದೆ. 30 ದೇಶಗಳಲ್ಲಿ ದೊಡ್ಡದಾಗಿ ಸಿನಿಮಾ ಬಿಡುಗಡೆ ಪ್ಲ್ಯಾನ್ ನಡೀತಿದೆ. ಭರ್ಜರಿ ಬೆಲೆ ಥಿಯೇಟ್ರಿಕಲ್ ರೈಟ್ಸ್, ಓಟಿಟಿ, ಸ್ಯಾಟಲೈಟ್ ರೈಟ್ಸ್ ಮಾರಾಟವಾಗಿದೆ. ಬಿಡುಗಡೆಗೂ ಮುನ್ನ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸೇಫ್ ಆಗಿದೆ. ಸಿನಿಮಾ ಯಾವ ರೀತಿಯ ಓಪನಿಂಗ್ ಪಡೆಯುತ್ತದೆ? ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಚರ್ಚೆ ಈಗಾಗಲೇ ಶುರುವಾಗಿದೆ.

ಸಿನಿಮಾ ಸೆಟ್ಟೇರಿದ ಸಮಯದಲ್ಲಿ ಸಣ್ಣ ಗ್ಲಿಂಪ್ಸ್ ಮಾತ್ರ ಬಿಡುಗಡೆಯಾಗಿತ್ತು. ಬಳಿಕ 3 ಪೋಸ್ಟರ್ ಹಾಗೂ ಒಂದೇ ಮೇಕಿಂಗ್ ವಿಡಿಯೋ ಮಾತ್ರ ಬಂದಿದೆ. ಚಿತ್ರದ ಕಥೆ, ಪಾತ್ರವರ್ಗದ ಬಗ್ಗೆ ಕುತೂಹಲ ಮುಂದುವರೆದಿದೆ. ಟ್ರೈಲರ್‌ನಲ್ಲಿ ಅದಕ್ಕೆಲ್ಲಾ ಉತ್ತರ ಸಿಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಈಗಾಗಲೇ ಸೆನ್ಸಾರ್ ಮಂಡಳಿ ಸದಸ್ಯರು ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ್ದಾರೆ ಎನ್ನಲಾಗ್ತಿದೆ.
ಬಲ್ಲ ಮೂಲಗಳ ಪ್ರಕಾರ 'ಕಾಂತಾರ- 1' ಸಿನಿಮಾ ನೋಡಿ ಸೆನ್ಸಾರ್ ಮಂಡಳಿ ಸದಸ್ಯರು ಖುಷಿಯಾಗಿದ್ದಾರೆ. ಸಿನಿಮಾ ಮುಗಿದ ಬಳಿಕ ಚಪ್ಪಾಳೆ ತಟ್ಟಿ ತಂಡವನ್ನು ಅಭಿನಂದಿಸಿದ್ದು ಸಿನಿಮಾ ದೊಡ್ಡದಾಗಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗ್ತಿದೆ. ಸೆನ್ಸಾರ್ ಮಂಡಳಿ ಸದಸ್ಯರ ಪ್ರತಿಕ್ರಿಯೆ ಕಂಡು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕೂಡ ಖುಷಿಯಾಗಿದೆ.

ಟ್ರೈಲರ್ ಬಿಟ್ಟರೆ ಚಿತ್ರದ ಹಾಡುಗಳು ಬಿಡುಗಡೆ ಆಗುವುದು ಅನುಮಾನ ಎನ್ನಲಾಗ್ತಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳು ಇದ್ದು ಟ್ರೈಲರ್ ಬಿಡುಗಡೆ ಮಾಡಿ ನೇರವಾಗಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಮನಸ್ಸು ಮಾಡಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸಿನಿಮಾ ಬಿಡುಗಡೆ ಇನ್ನು 10 ದಿನಗಳು ಮಾತ್ರ ಬಾಕಿಯಿದೆ. ಹಾಗಾಗಿ ಅಪ್ಪಿ ತಪ್ಪಿ ಒಂದು ಲಿರಿಕಲ್ ವೀಡಿಯೋ ಮಾತ್ರ ಬಿಡುಗಡೆ ಆಗಬಹುದು ಎನ್ನುವ ಊಹಾಪೋಹ ಶುರುವಾಗಿದೆ.
ತಿಂಗಳ ಹಿಂದೆ 'ಕಾಂತಾರ- 1' ಚಿತ್ರದ ಸಣ್ಣ ಟೀಸರ್ ಬಿಡುಗಡೆಗೆ ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಅದನ್ನು ಸೆನ್ಸಾರ್ ಕೂಡ ಮಾಡಿಸಿದ್ದರು. ಬಳಿಕ ಬೇಡ ಎಂದು ಸುಮ್ಮನಾಗಿದ್ದರು. ಬಳಿಕ ಪಿತೃಪಕ್ಷ ಆರಂಭವಾದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಪ್ರಮೋಷನ್ ಮಾಡುವುದು ಬೇಡ ಎಂದು ತೀರ್ಮಾನಿಸಿದ್ದರು. ಇವತ್ತು(ಸೆಪ್ಟೆಂಬರ್ 21) ಅಮಾವಾಸ್ಯೆ. ನಾಳೆಯಿಂದ ನವರಾತ್ರಿ ಆರಂಭವಾಗಲಿದೆ. ನವರಾತ್ರಿಯ ಸಂಭ್ರಮದಲ್ಲೇ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ಸೆಪ್ಟೆಂಬರ್ 22ರಂದು ಮಧ್ಯಾಹ್ನ 12.45ಕ್ಕೆ 5 ಭಾಷೆಗಳಲ್ಲಿ 'ಕಾಂತಾರ- 1' ಟ್ರೈಲರ್ ಬಿಡುಗಡೆ ಆಗ್ತಿದೆ. ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಾ ಪ್ರೇಕ್ಷಕರು ಕೂಡ ಮತ್ತೆ ಕಾಂತಾರ ಪ್ರಪಂಚದೊಳಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಈ ಬಾರಿ ಸಾವಿರಾರು ವರ್ಷಗಳ ಹಿಂದಕ್ಕೆ ನೋಡುಗರನ್ನು ರಿಷಬ್ ಶೆಟ್ಟಿ ಕರ್ಕೊಂಡು ಹೋಗ್ತಿದ್ದಾರೆ. ಹೈವೋಲ್ಟೇಜ್ ಆಕ್ಷನ್ ಸನ್ನಿವೇಶಗಳ ಜೊತೆ ಸಿನಿಮಾ ಬಗಳ ಕುತೂಹಲ ಮೂಡಿಸಿದೆ.
ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ U/A ಸರ್ಟಿಫಿಕೇಟ್ ಸಿಕ್ಕಿದೆ ಎನ್ನಲಾಗ್ತಿದೆ. ಆ ಬಗ್ಗೆ ಇನ್ನಷ್ಟೆ ಅಧಿಕೃತ ಮಾಹಿತಿ ಸಿಗಬೇಕಿದೆ. ಈ ಬಾರಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











