''ಉತ್ತರಕಾಂಡ'' ದಲ್ಲಿ ರಮ್ಯಾ ಜಾಗಕ್ಕೆ ಬಂದ್ರಾ ಚೈತ್ರಾ ಆಚಾರ್ ? 'ಲಚ್ಚಿ'ಯಾದ ಸಪ್ತಸಾಗರದ 'ಸುರಭಿ'..!
"ಉತ್ತರಕಾಂಡ" ಚಿತ್ರದಿಂದ ಮೋಹಕತಾರೆ ರಮ್ಯಾ ಹೊರ ನಡೆದ ನಂತರ, ಚಿತ್ರದ ನಾಯಕಿ ಯಾರಾಗ್ತಾರೆ ಅನ್ನುವ ಪ್ರಶ್ನೆ ಕನ್ನಡ ಕಲಾರಸಿಕರಲ್ಲಿ ಇದೆ. ಆದರೆ .. ಇದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ. ಈ ಕಾರಣಕ್ಕೆ.. ಕುತೂಹಲದದಿಂದ ಅನೇಕರು ಕೆ.ಆರ್.ಜಿ ಸಂಸ್ಥೆಯ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿದ್ದಾರೆ. ಇದರ ನಡುವೆ ಇಂದು, ಚೈತ್ರಾ ಆಚಾರ್ ಅವರ ಫೋಟೋ ಕೆ.ಆರ್.ಜಿ ಸಂಸ್ಥೆಯ ಸೊಶಿಯಲ್ ಮೀಡಿಯಾ ಟೈಮ್ ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ಹೌದು, ಚೈತ್ರಾ ಆಚಾರ್.. ಉತ್ತರಕಾಂಡ ಚಿತ್ರತಂಡವನ್ನ ಸೇರಿಕೊಂಡಿದ್ದಾರೆ. ಹಾಗಂಥ.. ರಮ್ಯಾ ಜಾಗಕ್ಕೆ ಚೈತ್ರಾ ಆಚಾರ ಬಂದಿಲ್ಲ. ಬದಲಿಗೆ ಚಿತ್ರದಲ್ಲಿನ ಬಹುಮುಖ್ಯವಾದ ಪಾತ್ರಕ್ಕೆ ಚೈತ್ರಾ ಬಣ್ಣ ಹಚ್ಚಿದ್ದಾರೆ. ಲಚ್ಚಿ ಎಂಬ ಪಾತ್ರಕ್ಕೆ ತಮ್ಮ ಅಭಿನಯದಿಂದ ಜೀವ ತುಂಬಲು ಸಿದ್ಧರಾಗಿದ್ದಾರೆ. ಚಿತ್ರೀಕರಣದಲ್ಲಿಯೂ ಕೂಡ ಇಂದು ಭಾಗಿಯಾಗಿದ್ದಾರೆ.

ಇನ್ನೂ ''ಉತ್ತರಕಾಂಡ'' ಚಿತ್ರದ ಭಾಗವಾಗುತ್ತಿರುವುದಕ್ಕೆ ಸಹಜವಾಗಿಯೇ ಚೈತ್ರಾ ಖುಷಿಯಾಗಿದ್ದಾರೆ. ಸಂಭ್ರಮದ ಅಲೆಯಲ್ಲಿದ್ದಾರೆ. ಇದಕ್ಕೆ ಕಾರಣ ಚಿತ್ರದ ಸ್ಟಾರ್ ಕಾಸ್ಟ್.. ಡೈರೆಕ್ಟರ್ ಮತ್ತು ದೊಡ್ಡ ನಿರ್ಮಾಣ ಸಂಸ್ಥೆ ಅನ್ನುವುದು ಒಂದು ಕಾರಣವಾದರೆ, ಚೈತ್ರಾ ಆಚಾರ್.. ಮೊದಲಿಂದ ತಮ್ಮನ್ನ ತಾವು ಸವಾಲಿನ ಪಾತ್ರಕ್ಕೆ ಒಡ್ಡಿಕೊಂಡಿರುವ ನಟಿ. ಮರ ಸುತ್ತುವ ಪಾತ್ರಕ್ಕೆ ಮಣೆ ಹಾಕಿದವರಲ್ಲ ಚೈತ್ರಾ. ''ಉತ್ತರಕಾಂಡ'' ದಲ್ಲಿ ಕೂಡ ಚೈತ್ರಾಗೆ ಸವಾಲಿನ ಪಾತ್ರವೇ ಸಿಕ್ಕಿದೆ. ಇದಕ್ಕೆ ಸಾಕ್ಷಿಯೇ ಇಂದು ಹೊರ ಬಿಡಲಾದ ಫಸ್ಟ್ ಲುಕ್. ಹೀಗಾಗಿಯೇ.. ಸಿಕ್ಕಾಪಟ್ಟೆ ಎಕ್ಸೈಟ್ ಆಗಿರುವ ಚೈತ್ರಾ ಆಚಾರ್ ಇನ್ ಮ್ಯಾಲಿಂದ ಫುಲ್ ಗುದ್ದಾಂ ಗುದ್ದಿ ಎಂದು ಹೇಳಿಲ್ಲವಾದರೂ, ಆಟ ಶುರು ಮಾಡೋನಂತ್ ಏನಂತೀರಿ..? ಎಂಬ ಪ್ರಶ್ನೆಯನ್ನ ಕೇಳಿದ್ದಾರೆ.

ಉಳಿದಂತೆ ಇನ್ಶುರೆನ್ಸ್ ಏಜೆಂಟ್ ರತ್ನಾಕರನ ಬದುಕಿನ ಮೂಲಕ, ಸಂಬಂಧಗಳಿಗೆ ಹೊಸ ಅರ್ಥ ಹುಡುಕುವ ಪ್ರಯತ್ನವನ್ನ ರತ್ನನ್ ಪ್ರಪಂಚ ಚಿತ್ರದ ಮೂಲಕ ಮಾಡಿದ್ದ ರೋಹಿತ್ ಪದಕಿ, ತಮ್ಮ ಕನಸಿನ ಈ ''ಉತ್ತರಕಾಂಡ'' ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ. ಹೆಚ್ಚು ಕಡಿಮೆ ಎರಡು ವರ್ಷಗಳಿಂದ ಬಯಲು ಸೀಮೆಯ ಸಂಸ್ಕೃತಿಯ ಸಂಶೋಧನೆ.. ಅನ್ವೇಷಣೆಯನ್ನ ಮಾಡಿ ಅಖಾಡಕ್ಕೆ ತಮ್ಮ ತಂಡದ ಜೊತೆ ಧುಮುಕಿದ್ದಾರೆ.
ಇನ್ನು.. ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ "ಉತ್ತರಕಾಂಡ'' ಚಿತ್ರವು ಕೆ.ಆರ್.ಜಿ.ಯ ಹೆಮ್ಮೆಯ ಕಾಣಿಕೆಯಾಗಲಿದೆ ಎಂದು ಹೇಳಿರುವ ಹಿನ್ನೆಲೆ, ರೋಹಿತ್ ಪದಕಿ ಅವರ ಮೇಲಿನ ಜವಾಬ್ಧಾರಿ ಇನ್ನೂ ಹೆಚ್ಚಾಗಿದೆ. ಡಾಲಿ ಧನಂಜಯ್ ಜೊತೆ ಕರುನಾಡ ಚಕ್ರವರ್ತಿ ಕೂಡ ಚಿತ್ರದಲ್ಲಿದ್ದಾರೆ ಅನ್ನುವ ವಿಚಾರ ನಿಮಗೆ ಈಗಾಗ್ಲೇ ಗೊತ್ತಿರಬೇಕು.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಅಚ್ಚು ಮೆಚ್ಚಿನ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ "ಉತ್ತರಕಾಂಡ'' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿರುವುದು ಚಿತ್ರದ ವಿಶೇಷತೆಯಲ್ಲಿ ಒಂದು. ಅದ್ವೈತ ಗುರುಮೂರ್ತಿ ಕ್ಯಾಮರಾದಲ್ಲಿ ಗುದ್ದಾಂ ಗುದ್ದಿಯ ಕಥನ ಸೆರೆಯಾಗಲಿದೆ. ಸದ್ಯಕ್ಕೆ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಚೈತ್ರಾ ಆಚಾರ್.. ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದರ ನಡುವೆ ರಮ್ಯಾ ಬದಲು ಚಿತ್ರಕ್ಕೆ ಆಯ್ಕೆಯಾಗುವ ನಾಯಕಿ ಯಾರು ಎಂಬ ಸದ್ಯಕ್ಕೆ ಉತ್ತರ ಇರದ ಪ್ರಶ್ನೆಗೆ ಉತ್ತರವನ್ನ ಹುಡುಕುವ ಕೆಲಸವನ್ನ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು ಮಾಡುತ್ತಿದ್ದಾರೆ.


Click it and Unblock the Notifications











