'D56' ಟೈಟಲ್ ರಿವೀಲ್: ಜಬರ್ದಸ್ತ್ ಕಥೆಗೆ ಖಡಕ್ ಟೈಟಲ್ ಫಿಕ್ಸ್
ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲೇ 'D56' ಸಿನಿಮಾ ಟೈಟಲ್ ರಿವೀಲ್ ಆಗಿದೆ. 70ರ ದಶಕದ ಕಥೆಗೆ ತರುಣ್ ಸುಧೀರ್ 'ಕಾಟೇರ' ಎನ್ನುವ ಟೈಟಲ್ ಫಿಕ್ಸ್ ಮಾಡಿದ್ದಾರೆ. ಲುಂಗಿ ಉಟ್ಟು, ಮಚ್ಚು ಹಿಡಿದು 'ಕಾಟೇರ' ಆಗಿ ದರ್ಶನ್ ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ.
ಬಹಳ ದಿನಗಳಿಂದ 'D56' ಸಿನಿಮಾ ಟೈಟಲ್ ಬಗ್ಗೆ ಚರ್ಚೆ ನಡೀತಿತ್ತು. ಕೆಲವರು 'ಕಾಟೇರ' ಅಂತ ಈ ಮೊದಲೇ ಊಹಿಸಿದ್ದರು. ಆದರೆ ಅದು ಬಿಟ್ಟು ಬೇರೆ ಟೈಟಲ್ ಫೈನಲ್ ಆಗುತ್ತಾ ಎನ್ನುವ ಅನುಮಾನ ಇತ್ತು. ಆದರೆ ಅದೇ ಟೈಟಲ್‌ಗೆ ಚಿತ್ರತಂಡ ಈಗ ಅಧಿಕೃತವಾಗಿ ಘೋಷಿಸಿದೆ. 'ಕಾಟೇರ' ಮೋಷನ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ನಟ ದರ್ಶನ್ 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ 'D56' ಟೈಟಲ್ ಅನೌನ್ಸ್ ಆಗಿದೆ.

ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಸುಧಾಕರ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. 70ರ ದಶಕದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜಡೇಶ್ ಹಂಪಿ ಹಾಗೂ ತರುಣ್ ಸುಧೀರ್ 'ಕಾಟೇರ' ಚಿತ್ರಕ್ಕೆ ಕಥೆ ಸಿದ್ಧಪಡಿಸಿದ್ದಾರೆ. ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಮೋಷನ್ ಪೋಸ್ಟರ್‌ನಲ್ಲಿ 'ಪ್ರತಿ ಮಚ್ಚು ಎರಡು ದಪ ಕೆಂಪಾಗ್ತೈತೆ, ಬೆಂಕಿಲಿ ಬೆಂದಾಗ ರಕ್ತದಲ್ಲಿ ನೆಂದಾಗ' ಎನ್ನುವ ಡೈಲಾಗ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. 1974ರಲ್ಲಿ 'ಕಾಟೇರ' ಕಥೆ ನಡೆಯಲಿದೆ.

'ಕಾಟೇರ' ಚಿತ್ರದಲ್ಲಿ ನಾಯಕಿಯಾಗಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸ್ತಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಶೂಟಿಂಗ್ ಕೂಡ ಮುಗಿದಿದೆ. 'ರಾಬರ್ಟ್' ಚಿತ್ರದಲ್ಲಿ ನಟ ದರ್ಶನ್ ಬಹಳ ವಿಭಿನ್ನವಾಗಿ ತೋರಿಸಿ ಗೆದ್ದಿದ್ದ ತರುಣ್ ಮತ್ತೊಮ್ಮೆ ಅದೇ ಪ್ರಯತ್ನ ಮಾಡುತ್ತಿದ್ದಾರೆ. 'ಹಿಂದಿರೋವ್ರಿಗೆ ದಾರಿ, ಮುಂದಿರೋವ್ನದ್ದು ಜವಾಬ್ದಾರಿ' ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ತನ್ನ ಊರಿನ ಜನರಿಗಾಗಿ ಹೋರಾಡುವ ನಾಯಕನಾಗಿ ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ಗೊತ್ತಾಗ್ತಿದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.


Click it and Unblock the Notifications