Devil: ದರ್ಶನ್ 'ಡೆವಿಲ್'ನಲ್ಲಿ ದಿಗ್ಗಜರ ದಂಡು; ಈ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ?
ದರ್ಶನ್ ಸಿನಿಮಾ ರಿಲೀಸ್ ಆಗುತ್ತೆ ಅಂದರೆ ಥಿಯೇಟರ್‌ಗಳ ಮುಂದೆ ಅಭಿಮಾನಿಗಳು ಸಾಲುಗಟ್ಟಿ ನಿಲ್ಲುತ್ತಾರೆ. ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಸಿಗೋದೇ ಅನುಮಾನು ಅನ್ನೋ ವಾತಾವರಣವಿರುತ್ತೆ. 'ಕಾಟೇರ'ದಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟ ಬಳಿಕ 'ಡೆವಿಲ್' ಲುಕ್ ಕೊಟ್ಟಿದ್ದರು. ಈ ಸಿನಿಮಾ ಕೂಡ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತೆ ಅಂತಲೇ ಅಭಿಮಾನಿಗಳು ಕಾದು ಕೂತಿದ್ದಾರೆ.
ಆದ್ರೀಗ 'ಡೆವಿಲ್' ಪರಿಸ್ಥಿತಿ ಬೇರೆನೇ ಇದೆ. ದರ್ಶನ್ ಜೈಲ್‌ನಲ್ಲಿ ಇದ್ದಾರೆ. ಅವರಿಲ್ಲದೇ ಚಿತ್ರತಂಡ ಸಿನಿಮಾವನ್ನು ಪ್ರಚಾರ ಮಾಡುವುದಕ್ಕೆ ಮುಂದಾಗಿದೆ. ಅವರ ಅನುಪಸ್ಥಿತಿಯಲ್ಲಿ ಸಿನಿಮಾ ತಂಡ 'ಡೆವಿಲ್' ಪ್ರಚಾರಕ್ಕೆ ಮುಂದಾಗಿದೆ. ಸಿನಿಮಾದಲ್ಲಿರುವ ಪ್ರಮುಖ ಸ್ಟಾರ್‌ಗಳು, ತಂತ್ರಜ್ಞರು ಸಿನಿಮಾದ ಪ್ರಚಾರಕ್ಕೆ ಮುಂದೆ ಬಂದಿದ್ದಾರೆ. ಇನ್ನು ಸ್ವತ: ವಿಜಯಲಕ್ಷ್ಮಿ ದರ್ಶನ್ ಅವರೇ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

'ಡೆವಿಲ್' ಅನೌನ್ಸ್ ಆದ ಮೊದಲ ದಿನದಿಂದಲೂ ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆಗಳನ್ನು ಮೂಡಿಸಿದೆ. ಈ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಪ್ರಚಾರ ಆರಂಭ ಆಗಿದೆ. ಸಿನಿಮಾ ರಿಲೀಸ್‌ಗೆ ಹೆಚ್ಚು ಕಡಿಮೆ ಇನ್ನು ಎರಡು ವಾರ ಬಾಕಿಯಿದೆ. ಅಷ್ಟರಲ್ಲಿ ಹೇಗೆಲ್ಲ ಪ್ರಮೋಷನ್ ಮಾಡುತ್ತಾರೆನ್ನುವುದನ್ನು ನೋಡಬೇಕಿದೆ. ಹಾಗಿದ್ದರೆ, ದರ್ಶನ್, ರಚನಾ ರೈ ಬಿಟ್ಟು ಈ ಸಿನಿಮಾದಲ್ಲಿರುವ ಸ್ಟಾರ್‌ಕಾಸ್ಟ್ ಯಾರು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕಲಾವಿದರ ದೊಡ್ಡ ತಂಡೇ ಇದೆ. ದರ್ಶನ್ ಅಭಿಮಾನಿಗಳು ಇತ್ತೀಚೆಗೆ ಸಹ-ಕಲಾವಿದರ ದೊಡ್ಡ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಜನಪ್ರಿಯ ಕಲಾವಿದರ ದಂಡೇ ಇದೆ. ಕನ್ನಡದ ಜನಪ್ರಿಯ ಹಿರಿಯ ನಟ ಅಚ್ಚುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಚ್ಯುತ್ ಕುಮಾರ್ ಅವರ ಪಾತ್ರ ಮತ್ತೊಂದು ಆಯಾಮ ನೀಡಲಿದೆ ಎನ್ನಲಾಗುತ್ತಿದೆ.
ಕನ್ನಡ,ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಖ್ಯಾತ ನಟಿ 'ತುಳಸಿ' ಕೂಡ ಈ ಸಿನಿಮಾದಲ್ಲಿ ಇದ್ದಾರೆ. ಇವರ ಪಾತ್ರ ಕೂಡ ಕಥೆಯಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನಲಾಗಿದೆ. ಹಿಂದಿ ಮತ್ತು ಮರಾಠಿ ಚಿತ್ರರಂಗದ ಜನಪ್ರಿಯರ ನಟ ಹಾಗೂ ನಿರ್ದೇಶಕ ಮಹೇಶ್ ಮಂಜ್ರೇಕರ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ. ಕನ್ನಡದ ಜನಪ್ರಿಯ ನಾಯಕ ನಟಿ ಶರ್ಮಿಳಾ ಮಾಂಡ್ರೆ ಪಾತ್ರ ಸಿನಿಮಾದ ಪ್ರಮುಖ ಘಟ್ಟದಲ್ಲಿ ಎಂಟ್ರಿಯಾಗುತ್ತೆ ಎನ್ನಲಾಗಿದೆ.

ಇವರ ಜೊತೆಗೆ ಸ್ಟಾರ್ ಕಾಮಿಡಿಯನ್ ಗಿಲ್ಲಿ ನಟ ಮತ್ತು ಯುವ ಪ್ರತಿಭೆ ಹುಲಿ ಕಾರ್ತಿಕ್ ಕೂಡ ನಟಿಸುತ್ತಿದ್ದಾರೆ. ಕನ್ನಡದ ಹಿರಿಯ ನಟರಾದ ಶೋಭರಾಜ್ ಮತ್ತು ಯುವ ನಟ ಚಂದು ಗೌಡ ಅವರು ಕೂಡ 'ಡೆವಿಲ್' ಸಿನಿಮಾದ ಪ್ರಮುಖ ಭಾಗವಾಗಿದ್ದಾರೆ. ಈ ಎಲ್ಲಾ ಕಲಾವಿದರ ಆಗಮನದಿಂದ ಚಿತ್ರಕ್ಕೆ ಪ್ಯಾನ್ ಇಂಡಿಯಾ ಮಟ್ಟದ ಮೌಲ್ಯ ಬಂದಿದೆ.
'ಡೆವಿಲ್' ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿದೆ. ನಿರ್ಮಾಪಕ ಕಮ್ ನಿರ್ದೇಶಕ ಮಿಲನ ಪ್ರಕಾಶ್ ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿದ್ದಾರೆ. ಇಷ್ಟು ಜನ ಅನುಭವಿ ಕಲಾವಿದರು ನಟಿಸುತ್ತಿರುವುದರಿಂದ ಸಿನಿಮಾದ ಸ್ಟೋರಿ ಲೈನ್ ಸ್ಟ್ರಾಂಗ್ ಆಗಿದ್ದು, ದರ್ಶನ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸ್ಯಾಂಡಲ್‌ವುಡ್ ಮಾತಾಡಿಕೊಳ್ಳುತ್ತಿದೆ.
'ಡೆವಿಲ್' ಆಕ್ಷನ್-ಥ್ರಿಲ್ಲರ್ ಸಿನಿಮಾ ಎನ್ನಲಾಗುತ್ತಿದ್ದು, ಈ ದೊಡ್ಡ ಸ್ಟಾರ್ ಕಾಸ್ಟ್ ಸಿನಿಮಾಗೆ ಶಕ್ತಿ ಕೊಟ್ಟಿರೋದಂತೂ ನಿಜ. ಇನ್ನು ದರ್ಶನ್ ಅನುಪಸ್ಥಿತಿಯಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡುತ್ತೆ? 'ಸಾರಥಿ'ಯಂತೆಯೇ ಈ ಸಿನಿಮಾ ಕೂಡ ಗಲ್ಲಾಪಟ್ಟೆಗೆಯಲ್ಲಿ ದಾಖಲೆ ಬರೆಬಹುದಾ? ಅಭಿಮಾನಿಗಳು ದರ್ಶನ್‌ರನ್ನು ಗೆಲ್ಲಿಸುತ್ತಾರಾ? ಅನ್ನೋದನ್ನು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











