'ಕಾಟೇರ' ಶೂಟಿಂಗ್ ಸೆಟ್‌ನಲ್ಲಿ ಸೆಲೆಬ್ರೆಟಿಗಳ ಹಂಗಾಮ: ದರ್ಶನ್ ಸ್ವೀಟ್ ವಾರ್ನಿಂಗ್ ವೈರಲ್
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಶೂಟಿಂಗ್ ಭರದಿಂದ ಸಾಗ್ತಿದೆ. ಕಳೆದೊಂದು ವಾರದಿಂದ ನಂಜನಗೂಡಿನ ತುಂಬನೇರಳೆ ಗ್ರಾಮದಲ್ಲಿ ಚಿತ್ರತಂಡ ಬೀಡು ಬಿಟ್ಟಿದ್ದು ಕಳೆದೊಂದು ವಾರದಿಂದ ಚಿತ್ರದ ಪ್ರಮುಖ ಸನ್ನಿವೇಶಗಳ ಚಿತ್ರೀಕರಣ ನಡೀತಿದೆ. ನೆಚ್ಚಿನ ನಟನನ್ನು ನೋಡೊಕೆ ಕಾಯುವ ಅಭಿಮಾನಿಗಳು ಹೊರವಲಯದಲ್ಲಿ ಸಿನಿಮಾ ಶೂಟಿಂಗ್ ಅಂದ್ರೆ ಸುಮ್ಮನಿರ್ತಾರಾ? ದೊಡ್ಡಮಟ್ಟದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನಕ್ಕೆ ಮುಗಿಬಿದ್ದಿದ್ದಾರೆ.
ಹಳ್ಳಿಯೊಂದರಲ್ಲಿ ನಡೆದ 70 ದಶಕದ ಕಥೆಯನ್ನು 'ಕಾಟೇರ' ಚಿತ್ರದಲ್ಲಿ ಹೇಳಲಾಗ್ತಿದ್ದು ಅದಕ್ಕೆ ತಕ್ಕಂತೆ ಚಿತ್ರೀಕರಣ ನಡೆಸಲಾಗ್ತಿದೆ. ಅಂದಿನ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಹಳ್ಳಿ ಸೆಟ್ ಹಾಕಿ ಕೆಲ ಸನ್ನಿವೇಶಗಳನ್ನು ಸೆರೆ ಹಿಡಿಯುತ್ತಿದ್ದು ತೋಟ, ಹೊಲ, ಗದ್ದೆಯಂತಹ ಲೊಕೇಶನ್‌ಗಳಲ್ಲೂ ಶೂಟಿಂಗ್ ಸಾಗ್ತಿದೆ. ದರ್ಶನ್ ಕಥೆಗೆ ತಕ್ಕಂತೆ 'ಕಾಟೇರ'ನಾಗಿ ಅಂಗಿ, ಲುಂಗಿಯಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ದರ್ಶನ್ ಕ್ಯಾರವಾನ್ ಬಳಿ ಓಡಾಡುತ್ತಿರುವ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಎಂದು ಕರೆದಿರುವ ದರ್ಶನ್ ಅವರ ಪ್ರೀತಿಗೆ ಶರಣಾಗಿ ಬಿಡುತ್ತಾರೆ. ಆದರೆ ನೆಚ್ಚಿನ ನಟನನ್ನು ನೋಡಲು ಚಿತ್ರೀಕರಣದ ಜಾಗಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದು ಇದು ಕೊಂಚ ಕಿರಿಕಿರಿ ಉಂಟು ಮಾಡಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಬೌನ್ಸರ್ಸ್ ಕೂಡ ಹರಸಾಹಸ ನಡೆಸುವಂತಾಗಿದೆ. ಇದೇ ಕಾರಣಕ್ಕೆ ಸ್ವತ: ದರ್ಶನ್ ಅಭಿಮಾನಿಗಳಿಗೆ ಸ್ವೀಟ್ ವಾರ್ನಿಂಗ್ ಕೊಟ್ಟಿದ್ದಾರೆ.

"ನಾನು ರೆಡಿ ಆಗ್ತಿದ್ದೀನಿ. ಬರ್ತೀನಿ. ಬೌನ್ಸರ್ಸ್‌ಗೆ ತೊಂದರೆ ಕೊಡಬೇಡಿ" ಎಂದು ತಮ್ಮದೇ ಸ್ಟೈಲ್‌ನಲ್ಲಿ ಕಿವಿಮಾತು ಹೇಳಿದ್ದಾರೆ. "ಈಗ ಹೊರಡಿ, ನಾನು ಎರಡು ದಿನಗಳ ನಂತರ ಸಿಗುತ್ತೇನೆ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಕ್ಯಾರವಾನ್ ಮುಂದೆ ಕಾದು ಕಾದು ಸುಸ್ತಾಗಿದ್ದ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಅವರ ಮಾತು ಕೇಳಿ ಖುಷಿಯಾಗಿ ಜೈಕಾರ ಹಾಕಿ ಹೊರಟಿದ್ದಾರೆ. ಸದ್ಯ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'ಕ್ರಾಂತಿ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಸಖತ್ ಸದ್ದು ಮಾಡ್ತಿತ್ತು. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚಿತ್ರವನ್ನು ಕೊಂಡಾಡಿದ್ದರು. ಸಿನಿಮಾ ಸಾಂಗ್ಸ್ ಕೂಡ ಇಂದಿಗೂ ಪದೇ ಪದೇ ಕೇಳ್ತಿದ್ದಾರೆ. ಇದೀಗ 'ಕಾಟೇರ' ಸಿನಿಮಾ ಮೇಕಿಂಗ್ ಹಂತದಲ್ಲೇ ಭಾರೀ ಸದ್ದು ಮಾಡ್ತಿದೆ. ಶೂಟಿಂಗ್ ಸೆಟ್‌ನಿಂದ ಸಣ್ಣ ಫೋಟೊ ಕೂಡ ಲೀಕ್ ಆಗದಂತೆ ಚಿತ್ರತಂಡ ಗಮನ ಹರಿಸಿದೆ. 'ಕ್ರಾಂತಿ' ಚಿತ್ರವನ್ನು ಬಹುತೇಕ ಸೆಟ್‌ಗಳಲ್ಲೇ ಚಿತ್ರಿಸಲಾಗಿತ್ತು.
ಈ ಹಿಂದೆ 'ರಾಬರ್ಟ್' ಸಿನಿಮಾ ಚಿತ್ರೀಕರಣದ ಸಮಯದಲ್ಲೂ ತರುಣ್ ಸುಧೀರ್ ಕಥೆ ಬಗ್ಗೆ ಚಿತ್ರದ ಮೇಕಿಂಗ್ ಬಗ್ಗೆ ಭಾರೀ ಮುತುವರ್ಜಿ ವಹಿಸಿದ್ದರು. ಸೆಟ್‌ನಿಂದ ಸಣ್ಣ ಫೋಟೊ ಕೂಡ ಲೀಕ್ ಆಗದಂತೆ ಕ್ರಮ ಕೈಗೊಂಡಿದ್ದರು. 'ಕಾಟೇರ' ವಿಚಾರದಲ್ಲೂ ಅದೇ ನಡೀತಿದೆ. ಅಂದಹಾಗೆ ಚಿತ್ರದಲ್ಲಿ ರಾಧನಾ ರಾಮ್ ನಾಯಕಿಯಾಗಿ ನಟಿಸ್ತಿದ್ದಾರೆ. ಜಗಪತಿ ಬಾಬು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಹಿಂದೆ 'ರಾಬರ್ಟ್' ಚಿತ್ರದಲ್ಲಿ ನಾನಾ ಆಗಿ ಜಗಪತಿ ಬಾಬು ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದರು.
ಸುಧಾಕರ್ ರಾಜ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಗುಣ ಅಂಡ್ ಟೀಂ 'ಕಾಟೇರ' ಚಿತ್ರಕ್ಕೆ ಸೆಟ್‌ಗಳನ್ನು ಹಾಕುತ್ತಿದ್ದಾರೆ. ಇತ್ತೀಚೆಗೆ ಚಿತ್ರಕ್ಕಾಗಿ ಹಾಕಿದ್ದ ಹಳ್ಳಿ ಸೆಟ್ ಫೋಟೊಗಳು ವೈರಲ್ ಆಗಿತ್ತು. 50 ವರ್ಷಗಳ ಹಿಂದಿನ ಹಳ್ಳಿಯ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಚಿತ್ರದಲ್ಲಿ ತೋರಿಸಲಾಗಿತ್ತು. ಡಿಸೆಂಬರ್ ವೇಳೆಗೆ ತೆರೆಮೇಲೆ 'ಕಾಟೇರ'ನ ದರ್ಶನವಾಗುವ ಸಾಧ್ಯತೆಯಿದೆ.


Click it and Unblock the Notifications











