ಮಾಧ್ಯಮದ ಕ್ಯಾಮರಾಗೆ ದರ್ಶನ್ ಕೈ ಸನ್ನೆ? "ಮುದ್ದೆ ಮುರಿಯುತ್ತಿದ್ರೂ ಕೊಬ್ಬು ಕರಗಿಲ್ಲ" ಎಂದ ನೆಟ್ಟಿಗರು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಆರೋಪ ಮೇಲೆ ಜೈಲಿನಲ್ಲಿದ್ದಾರೆ. ಕಳೆದ ಮೂರು ತಿಂಗಳಿನಿಂದ ಜೈಲಿಂದ ಜೈಲ್‌ಗೆ ಶಿಫ್ಟ್ ಆಗಿ ಸೊರಗಿರಬಹುದು ಎಂದೇ ಅಭಿಮಾನಿಗಳು ಭಾವಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬಿಂದಾಸ್ ಆಗಿದ್ದ ದರ್ಶನ್ ಫೋಟೋ ಲೀಕ್ ಆಗುತ್ತಿದ್ದಂತೆ ಬಳ್ಳಾರಿ ಜೈಲ್‌ಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿಗೆ ಹೋದ್ಮೇಲಾದರೂ ತಣ್ಣಗಾಗಿರಬಹುದೆಂದು ಭಾವಿಸಲಾಗಿತ್ತು.
ಆದರೆ, ಇಂದು (ಸೆಪ್ಟೆಂಬರ್ 12) ಮಾಧ್ಯಮದ ಕ್ಯಾಮರಾಗಳಿಗೆ ತೋರಿದ ಕೈ ಸನ್ನೆ ಏನೂ ಬದಲಾಗಿಲ್ಲ ಅನ್ನೋದು ಸಾಬೀತು ಮಾಡಿದಂತಿದೆ. ಇಂದು ದರ್ಶನ್‌ರನ್ನು ಭೇಟಿ ಮಾಡುವುದಕ್ಕೆ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಬಳ್ಳಾರಿ ಜೈಲ್‌ಗೆ ಹೋಗಿದ್ದರು. ಈ ವೇಳೆ ಅವರನ್ನು ಭೇಟಿ ಮಾಡುವುದಕ್ಕೆ ಜೈಲಿನ ಅಧಿಕಾರಿಗಳೊಂದಿಗೆ ದರ್ಶನ್ ಬರುವಾಗ ಈ ವರ್ತನೆಯನ್ನು ತೋರಿದ್ದಾರೆ.

ಬಳ್ಳಾರಿ ಜೈಲಿನ ಮುಂದೆ ಹಲವು ದಿನಗಳಿಂದ ಮಧ್ಯಮಗಳು ವರದಿಯನ್ನು ಪ್ರಸಾರ ಮಾಡುತ್ತಿವೆ. ಅಲ್ಲದೆ, ಚಾರ್ಜ್‌ಶೀಟ್‌ನ ಮಾಹಿತಿಯನ್ನು ಕೆದಇ ಸುದ್ದಿಯನ್ನು ಪ್ರಸಾರ ಮಾಡಿದ್ದವು. ಚಾರ್ಜ್‌ಶೀಟ್‌ನ ಮಾಹಿತಿಯನ್ನು ಬಿತ್ತರಿಸದಂತೆ ಹೈಕೋರ್ಟ್ ಹೋಗಿ ನಿರ್ಬಂಧ ತರುವಲ್ಲಿ ದರ್ಶನ್ ಯಶಸ್ವಿಯಾಗಿದ್ದರು. ಈ ಬೆನ್ನಲ್ಲೇ ಈಗ ಮಾಧ್ಯಮದ ಕ್ಯಾಮರಾಗಳಿಗೆ ಮಧ್ಯದ ಬೆರಳನ್ನು ತೋರಿಸಿ ಅಸಭ್ಯ ವರ್ತನೆ ತೋರಿದ್ದಾರೆ.
ದರ್ಶನ್ ಈ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಮೂರು ತಿಂಗಳು ಜೈಲಿನಲ್ಲಿ ಇದ್ದಿದ್ದರಿಂದ ಪಶ್ಚಾತ್ತಾಪದಲ್ಲಿದ್ದಾರೆ ಅನ್ನೋ ಮಾತುಗಳಿಗೆ ತದ್ವಿರುದ್ಧವಾಗಿ ದರ್ಶನ್ ಇಂದು (ಸೆಪ್ಟೆಂಬರ್ 12) ನಡೆದುಕೊಂಡಿದ್ದಾರೆ. ಈ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. "ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದರೂ ಕೊಬ್ಬು ಮಾತ್ರ ಕಮ್ಮಿಯಾಗಿಲ್ಲ" ಅಂತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ವಿರುದ್ಧ ಚಾರ್ಜ್‌ಶೀಟ್ ಅನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ವರ್ತನೆ ಬದಲಾಗಿದೆ. ಅದರಲ್ಲೂ ತನ್ನ ಕೈನ ಮಧ್ಯದ ಬೆರಳನ್ನು ತೋರಿಸಿದ ವರ್ತನೆ ವಿರುದ್ಧ ಆಕ್ರೋಶದ ಮಾತುಗಳು ವ್ಯಕ್ತವಾಗುತ್ತಿವೆ.
ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಎಂಬ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಚಿತ್ರರಂಗದಿಂದ ಅಪಹರಿಸಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಬೆಂಗಳೂರಿನಲ್ಲಿ ದರ್ಶನ್ ಹಾಗೂ ಅವರ ಗ್ಯಾಂಗ್ ರೇಣುಕಾಸ್ವಾಮಿಗೆ ಚಿತ್ರಹಿಂಸೆಯನ್ನು ನೀಡಿದ್ದರು ಎಂಬ ಆರೋಪ ಇವರ ಮೇಲಿದೆ. ಈ ಸಂಬಂಧ ರೇಣುಕಾಸ್ವಾಮಿ ಹತ್ಯೆಯ ಪ್ರಕರಣವನ್ನು ಪೊಲೀಸರು ತನಿಖೆ ಮಾಡಿ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಮುಂದಿನ ನಡೆಯ ಬಗ್ಗೆ ದರ್ಶನ್ ಪರ ವಕೀಲರು, ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಬಳ್ಳಾರಿ ಜೈಲಿನಲ್ಲಿ ಭೇಟಿ ಮಾಡಿದ್ದಾರೆ. ಮುಂದಿನ ನಡೆಯ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಜಾಮೀನು ಅರ್ಜಿ ಸಲ್ಲಿಕೆ ಸೇರಿದಂತೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.


Click it and Unblock the Notifications











