Kranti 25 Days: ಕಲೆಕ್ಷನ್ ಗೊಂದಲ.. ತಿರುಗೇಟು: ಪ್ರೇಕ್ಷಕರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧನ್ಯವಾದ
ದರ್ಶನ್ ನಟನೆಯ ಕ್ರಾಂತಿ ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಚಿತ್ರವನ್ನು ಗೆಲ್ಲಿಸಿದ ಪ್ರೇಕ್ಷಕರಿಗೆ ಚಾಲೆಂಜಿಂಗ್ ಸ್ಟಾರ್ ಧನ್ಯವಾದ ತಿಳಿಸಿದ್ದಾರೆ. ವಿ. ಹರಿಕೃಷ್ಣ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಕ್ರಾಂತಿ' ಸಿನಿಮಾ ಜನವರಿ 26ರಂದು ತೆರೆಗಪ್ಪಳಿಸಿತ್ತು.
'ಕ್ರಾಂತಿ' ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ರೆ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್, ಉಮಾಶ್ರೀ, ಸಂಯುಕ್ತಾ ಹೊರನಾಡ್, ಆರ್ಮುಗ ರವಿಶಂಕರ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಕಳೆದೊಂದು ವರ್ಷದಿಂದ 'ಕ್ರಾಂತಿ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಿಶ್ರಪ್ರತಿಕ್ರಿಯೆ ನಡುವೆಯೂ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು ಸುಳ್ಳಲ್ಲ. ಇನ್ನು ಅಭಿಮಾನಿಗಳ ಹಬ್ಬದ ರೀತಿಯಲ್ಲಿ ಕ್ರಾಂತಿ ರಾಯಣ್ಣನನ್ನು ಸ್ವಾಗತಿಸಿದ್ದರು. ಮೊದಲ ದಿನವೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು.
ಒಂದೊಳ್ಳೆ ಸಂದೇಶದ ಜೊತೆಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಹರಿಕೃಷ್ಣ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಚಿತ್ರದಲ್ಲಿ ಚರ್ಚೆ ಮಾಡಲಾಗಿದೆ.

ಕಲೆಕ್ಷನ್ ಗೊಂದಲಕ್ಕೆ ಬ್ರೇಕ್
'ಕ್ರಾಂತಿ' ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕರೂ ನಂತರ ಕಲೆಕ್ಷನ್ ಸರಿಯಾಗಿ ಆಗುತ್ತಿಲ್ಲ ಎನ್ನುವ ವಾದ ಕೇಳಿಬಂತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಯಿತು. ಕ್ರೇಜ್‌ಗೆ ತಕ್ಕಂತೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ, ಸಿನಿಮಾ ಕಲೆಕ್ಷನ್ ಕೂಡ ಅಷ್ಟಕ್ಕಷ್ಟೆ ಎನ್ನಲಾಗ್ತಿತ್ತು. ಆದರೆ ಸಿನಿಮಾ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಮಾಡಿತ್ತು. 108 ಕೋಟಿ ಚಿತ್ರ ಇರುವ ಕೇಕ್ ಕತ್ತರಿಸಿ ಕಲೆಕ್ಷನ್ ಆಗಿಲ್ಲ ಎಂದವರಿಗೆ ತಂಡ ತಿರುಗೇಟು ನೀಡಿತ್ತು. ಈಗ ಒಟ್ಟಾರೆ ಕಲೆಕ್ಷನ್ ಅದಕ್ಕಿಂತ ಜಾಸ್ತಿಯಾಗಿದೆ.

ಬೆಂಗಳೂರಿನಲ್ಲಿ 40ಕ್ಕೂ ಅಧಿಕ ಶೋ
ಹೊಸ ವರ್ಷದಲ್ಲಿ 'ಕ್ರಾಂತಿ' ಬಿಟ್ಟರೆ ಯಾವುದೇ ದೊಡ್ಡ ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. 'ಕ್ರಾಂತಿ' ಸಿನಿಮಾ ಇದೀಗ ಯಶಸ್ವಿಯಾಗಿ 25 ದಿನ ಪೂರೈಸಿದೆ. 25ನೇ ದಿನ ಬೆಂಗಳೂರಿನಲ್ಲಿ 40ಕ್ಕೂ ಅಧಿಕ ಶೋಗಳಲ್ಲಿ 'ಕ್ರಾಂತಿ' ಸಿನಿಮಾ ಪ್ರದರ್ಶನವಾಗುತ್ತಿದೆ. ಭಾನುವಾರ ಆಗಿರುವ ಕಾರಣ ಪ್ರೇಕ್ಷಕರು ಫ್ಯಾಮಿಲಿ ಸಮೇತ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಹಾಗಾಗಿ ಬುಕ್ಕಿಂಗ್‌ಗೆ ರೆಸ್ಪಾನ್ಸ್ ಚೆನ್ನಾಗಿದೆ.
ಪ್ರೇಕ್ಷಕರಿಗೆ ದರ್ಶನ್ ಧನ್ಯವಾದ
"ನಿಮ್ಮ ಕ್ರಾಂತಿ ಇಂದು 25 ದಿನಗಳ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸುತ್ತಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ. ಈ ಪ್ರಯಾಣದಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು" ಎಂದು ನಟ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕೂಡ 'ಕ್ರಾಂತಿ' ಸಿನಿಮಾ 25 ದಿನ ಪೂರೈಸಿದ ಸಂಭ್ರಮದಲ್ಲಿದ್ದಾರೆ.

ನಿರೀಕ್ಷೆ ಹೆಚ್ಚಿಸಿದ 'ಕಾಟೇರ'
'ಕ್ರಾಂತಿ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಇತ್ತೀಚೆಗೆ ಅಭಿಮಾನಿಗಳ ಜೊತೆ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಫೆಬ್ರವರಿ 16ರಂದು ದರ್ಶನ್ 46ನೇ ವಸಂತಕ್ಕೆ ಕಾಲಿಟ್ಟರು. ಸಾವಿರಾರು ಅಭಿಮಾನಿಗಳು ಆ ದಿನ ನೆಚ್ಚಿನ ನಟನನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದರು. ಇನ್ನು 'ಕ್ರಾಂತಿ' ನಂತರ ದರ್ಶನ್ 'ಕಾಟೇರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕಿದೆ.


Click it and Unblock the Notifications











