ತಿರುಪತಿ ತಿಮ್ಮಪ್ಪನ ಪಾದಕ್ಕೆರಗಿದ 'ಕಾಟೇರ'; 'ಡೆವಿಲ್' ಆರಂಭಕ್ಕೂ ಮುನ್ನ ತಿಮ್ಮಪ್ಪನ ದರ್ಶನ..
ಒಟಿಟಿ ಸಹಾಯದಿಂದ ಭೂ ಮಾಲೀಕರ ದರ್ಪ, ದೌರ್ಜನ್ಯಗಳ ನಡುವೆ ಬದುಕುವ ರೈತಾಪಿ ವರ್ಗದ ಬವಣೆಯನ್ನೊತ್ತು, ಚರಿತ್ರೆ ಸೃಷ್ಟಿಸಿದ ಕಾಟೇರವನ್ನ ಇಂದಿನಿಂದ ಮನೆಗಳಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ್ದರೆ, ಆ ಕಡೆ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿರುಪತಿ ತಿಮ್ಮಪ್ಪನ ಪಾದಕ್ಕೆರಗಿದ್ದಾರೆ. ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ.
ತಿರುಪತಿ ತಿಮ್ಮಪ್ಪನ ಭಕ್ತ ದರ್ಶನ್
ತಮ್ಮ ಪ್ರತಿ ಚಿತ್ರದ ಆರಂಭಕ್ಕೂ ಮುನ್ನ ಅಥವಾ ಆ ನಂತರ ತಿಮ್ಮಪ್ಪನ ದರ್ಶನವನ್ನ ಪಡೆಯುವ ಪರಿಪಾಠವನ್ನ ಅಭಿಮಾನಿಗಳ ದಾಸ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ದರ್ಶನ್, ಈ ಹಿಂದೆ ಕಾಟೇರ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕೂಡ ತಿರುಪತಿಯಲ್ಲಿ ತಮ್ಮ ಆಪ್ತರ ಜೊತೆ ಕಾಣಿಸಿಕೊಂಡಿದ್ದರು. ದೈವದ ದರ್ಶನವನ್ನ ಪಡೆದಿದ್ದರು. ಇನ್ನೂ ಅದಕ್ಕೂ ಮುನ್ನ ಕ್ರಾಂತಿ ಚಿತ್ರದ ಪ್ರಚಾರಕ್ಕೆ ಮುನ್ನುಡಿ ಬರೆಯುವ ಮೊದಲು ಕೂಡ ದರ್ಶನ್, ಸಚ್ಚಿದಾನಂದ ಹಾಗೂ ಎಂಎಲ್‌ಎ ಸತೀಶ್ ರೆಡ್ಡಿ ಜೊತೆ ತಿರುಪತಿ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದರು. ರಾಬರ್ಟ್ ಚಿತ್ರದ ಬಿಡುಗಡೆಯ ಸಮಯದಲ್ಲಿ ಕೂಡ ತಮ್ಮ ಅತ್ಯಾಪ್ತರ ಜೊತೆ ದರ್ಶನ್ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದರು. ಈಗ ಕಾಟೇರ ಚಿತ್ರದ ಅದ್ಭುತ ಹಾಗೂ ಅದ್ವೀತಿಯ ಯಶಸ್ಸಿನ ನಂತರ ದರ್ಶನ್ ಭೂಲೋಕದ ವೈಕುಂಟವೆಂದು ಕರೆಯಲ್ಪಡುವ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಡೆವಿಲ್ ಚಿತ್ರಕ್ಕೆ ಆಶೀರ್ವಾದ ಪಡೆದ ಕಾಟೇರ
ಕಾಟೇರ ಚಿತ್ರದ ಚಾರಿತ್ರಿಕ ಗೆಲುವು ದರ್ಶನ್ ಅವರ ವರ್ಚಸ್ಸನ್ನ ಇನ್ನೂ ಹೆಚ್ಚಿಸಿದೆ. ಜವಾಬ್ಧಾರಿಯನ್ನೂ ಹೆಚ್ಚಿಸಿದೆ. ಇನ್ನೂ ದರ್ಶನ್ ಸದ್ಯಕ್ಕೆ ಡೆವಿಲ್ ಚಿತ್ರದ ಚಿತ್ರೀಕರಣವನ್ನ ಎದುರು ನೋಡ್ತಿದ್ದಾರೆ. ಇನ್ನೊಂದು ಕಡೆ ಇದೇ ಫೆಬ್ರವರು ಹದಿನಾರಕ್ಕೆ ದರ್ಶನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮವೂ ಹೌದು. ಆ ದಿನ ದರ್ಶನ್ ತಮ್ಮ ಅಸಂಖ್ಯಾತ ಅಭಿಮಾನಿಗಳ ಜೊತೆ ಬೆರೆಯುವ ಮೂಲಕ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲಿದ್ದಾರೆ. ಇವೆಲ್ಲ ಕಾರಣಕ್ಕೆ ದರ್ಶನ್ ವಾರಕ್ಕೂ ಮೊದಲೇ ಗೋವಿಂದನ ದರ್ಶನವನ್ನ ಪಡೆದಿದ್ದಾರೆ.

ಫೆಬ್ರವರಿ 16ಕ್ಕೆ ಡೆವಿಲ್ ಫಸ್ಟ್ ಲುಕ್
ದರ್ಶನ್ ಹಾಗೂ ಮಿಲನಾ ಪ್ರಕಾಶ್ ಎರಡನೇ ಬಾರಿ ಮಾಡಲು ಹೊರಟಿರುವ ಸಿನಿಮಾ ಡೆವಿಲ್ ಕುರಿತು ದರ್ಶನ್ ಅವರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಇದೆ. ಇದಕ್ಕೆ ತಕ್ಕಂತೆ ಇಲ್ಲಿಯವರೆಗೆ ಅನೇಕ ಅಂತೆ ಕಂತೆ ಸುದ್ದಿಯನ್ನ ತೇಲಿ ಬಿಡಲಾಗಿದೆ. ಆದರೆ ಅದ್ಯಾವದಕ್ಕೂ ಹೆಚ್ಚಿನ ಮಹತ್ವ ನೀಡಬೇಡಿ ಎಂಬ ಮನವಿಯನ್ನ ಅಭಿಮಾನಿಗಳಲ್ಲಿ ಚಿತ್ರಪ್ರೇಮಿಗಳಲ್ಲಿ ಮಾಡಿಕೊಂಡಿರುವ ಮಿಲನಾ ಪ್ರಕಾಶ್, ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಫಸ್ಟ್ ಲುಕ್ ಜೊತೆ ಒಂದಷ್ಟು ಮಾಹಿತಿಯನ್ನ ಹಂಚಿಕೊಳ್ಳಲಿದ್ದಾರೆ.

ಕೊರಗಜ್ಜನ ದರ್ಶನ ಪಡೆದು ಧರ್ಮಸ್ಥಳದ ಮಂಜುನಾಥನಿಗೆ ನಮಸ್ಕರಿಸಿದ್ದ ತರುಣ್
ಕಾಟೇರ ಚಿತ್ರಕ್ಕೆ ಸಿಕ್ಕ ಅಗಾಧವಾದ ಪ್ರೀತಿಯಿಂದ ಮೂಕ ವಿಸ್ಮಿತಗೊಂಡಿರುವ ಚಿತ್ರದ ನಿರ್ದೇಶಕ ತರುಣ್ ಸುಧೀರ್, ಇತ್ತೀಚೆಗಷ್ಟೇ ಆದಿಸ್ಥಳ ಸ್ವಾಮಿ ಕೊರಗಜ್ಜ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದಿದ್ದರು. ಚಿತ್ರ ಯಶಸ್ಸುಗಳಿಸಿದ್ದಕ್ಕಾಗಿ ಪೂಜೆ ಸಲ್ಲಿಸಿದ್ದರು. ಆ ನಂತರ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿ, ತಮ್ಮ ಮುಂದಿನ ಕಾರ್ಯಗಳಿಗೆ ಯಶಸ್ಸು ನೀಡುವಂತೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದರು

ಅಭಿಮಾನಿಗಳಲ್ಲಿ ದರ್ಶನ್ ಮನವಿ
ಪ್ರತಿ ವರ್ಷದಂತೆ ಈ ವರ್ಷ ಕೂಡ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿರುವ ದರ್ಶನ್, ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಈ ವರ್ಷವೂ ಅದೇ ಹಣದಲ್ಲಿ ಅಕ್ಕಿ, ಬೇಳೆ, ಸಕ್ಕರೆ ಇತರೆ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಅವಶ್ಯಕತೆ ಇರುವ ಅನಾಥಾಶ್ರಮಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದಿದ್ದರು. ಈ ಸಂಭ್ರಮಾಚರಣೆಯಲ್ಲಿ ನಮ್ಮ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆ ಆಗದಂತೆ ವರ್ತಿಸಿ. ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂಕುಂಡಗಳನ್ನು ಬೀಳಿಸುವುದು ಅವರ ಸ್ವತ್ತುಗಳಿಗೆ ಹಾನಿ ಮಾಡುವಂಥಹಾ ವರ್ತನೆಗಳು ಬೇಡ. ನನ್ನ ಮೇಲೆ ಇಷ್ಟೆಲ್ಲ ಪ್ರೀತಿ, ಅಭಿಮಾನ ಇಟ್ಟಿರುವ ನೀವು ನನ್ನ ಕೋರಿಕೆಯನ್ನು ನಡೆಸಿಕೊಡುತ್ತೀರಿ ಎಂದು ನಂಬಿದ್ದೇನೆ. ಹಾಗೂ ಸಂಘದ ಕಾರ್ಯಕರ್ತರು ಹಾಗೂ ಪೊಲೀಸರಿಗೆ ಸಹಕರಿಸಬೇಕೆಂದು ಮನವಿ ಮಾಡುತ್ತೇನೆ' ಎಂದು ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಕೋರಿಕೊಂಡಿದ್ದರು


Click it and Unblock the Notifications











