ಡಿಸೆಂಬರ್ - ದರ್ಶನ್ - ಡೆವಿಲ್ ; ಈ ಬಾರಿ ಚಾಲೆಂಜಿಂಗ್ ಸ್ಟಾರ್ ಸವಾಲು ಹಾಕಿದ್ದು ಯಾರಿಗೆ ..?
ಕೇವಲ ಡಿಸೆಂಬರ್ ಮತ್ತು ಕನ್ನಡ ಚಿತ್ರರಂಗದ ನಡುವೆ ವಿಶೇಷವಾದ ನಂಟಿಲ್ಲ. ದರ್ಶನ್ ಮತ್ತು ಡಿಸೆಂಬರ್ ನಡುವೆ ಕೂಡ ಬಿಡಿಸಲಾಗದ ಗಂಟಿದೆ. ಇದಕ್ಕೆ ಕೈಗನ್ನಡಿ ಅನ್ನುವಂತೆ ಕಳೆದ ವರ್ಷ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಅವತಾರ ಎತ್ತಿದಾಗ ಕರುನಾಡು ರಣಕೇಕೆ ಹಾಕಿತ್ತು. ದರ್ಶನ್ ಭಕ್ತಗಣ ಹುಚ್ಚೆದ್ದು ಕುಣಿದಿತ್ತು.
ಇನ್ನೂ.. ಕಾಟೇರ ಮುನ್ನ ದರ್ಶನ್ ಅಭಿನಯದ ಒಡೆಯ .. ಅಣ್ಣಾವ್ರು .. ಸಿನಿಮಾಗಳು ಬಿಡುಗಡೆಯಾಗಿದ್ದು ಕೂಡ ಇದೇ ಡಿಸೆಂಬರ್‌ನಲ್ಲಿಯೇ. ಈ ಕಾರಣಕ್ಕೆ ಡಿಸೆಂಬರ್ ದರ್ಶನ್ ಪಾಲಿಗೆ ಯಾವತ್ತು ವಿಶೇಷ. ಈ ವಿಶೇಷ ಸಂಬಂಧ ಈ ವರ್ಷ ಕೂಡ ಮುಂದುವರೆಯಲಿದೆ. ದರ್ಶನ್ ಅಭಿನಯದ ಡೆವಿಲ್ ಈ ವರ್ಷದ ಅಂತ್ಯಕ್ಕೆ ತೆರೆಗೆ ಬರಲಿದೆ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕರ್ನಾಟಕದಲ್ಲಿ ಡೆವಿಲ್ ಅಬ್ಬರ ಶುರುವಾಗಲಿದೆ.

ಅಂದ್ಹಾಗೇ ಎಲ್ಲವೂ ಅಂದುಕೊಂಡತೆ ಆಗಿದ್ದರೆ ಡೆವಿಲ್ ಇದೇ ದಸರಾ ಹಬ್ಬದ ಪ್ರಯುಕ್ತ ಬೆಳ್ಳಿಪರದೆ ಮೇಲೆ ಧಗಧಗಿಸಬೇಕಿತ್ತು. ಆದರೆ .. ದರ್ಶನ್ ಕೈಗೆ ಆದ ಪೆಟ್ಟು ಲೆಕ್ಕಾಚಾರ ತಲೆಕೆಳಗಾಗಿಸಿತು. ಆದರೆ ಕಾದಷ್ಟು ಕಾವು ಜಾಸ್ತಿ. ಹೀಗಾಗಿಯೇ ಸದ್ಯಕ್ಕೆ ಖುಷಿಯಾಗಿರುವ ದರ್ಶನ್ ಅವರ ಅಭಿಮಾನಿಗಳು, ದರ್ಶನ್ ಇಂದು ನೀಡಿದ ಸಿಹಿ ಸುದ್ದಿಯನ್ನ ಊರ್ ತುಂಬಾ ಹಂಚುತ್ತಿದ್ದಾರೆ.
ಇನ್ನೂ ಕಳೆದ ವರ್ಷ ದರ್ಶನ್ ಅಕ್ಕ-ಪಕ್ಕ ಬಲಾಢ್ಯರೇ ಇದ್ದರು. ಒಂದು ಕಡೆ ಬಾಲಿವುಡ್‌ನ ಬಾದ್ ಷಾ ಶಾರುಖ್ ಖಾನ್ ಇದ್ದರೆ, ಇನ್ನೊಂದು ಕಡೆ.. ಸೌತ್‌ನ ಡಾರ್ಲಿಂಗ್ ಪ್ರಭಾಸ್ ಇದ್ದರು. ನಿಜಾ.. ಕಾಟೇರ ತೆರೆಗೆ ಬರುವ ಒಂದು ವಾರದ ಮುನ್ನವೇ ಕಿಂಗ್ ಖಾನ್ ಮತ್ತು ಪ್ರಭಾಸ್ ಕಣದಲ್ಲಿದ್ದರು. ಆದರೆ.. ಕಾಟೇರ ಬರುವವರೆಗೆ ವಾತಾವರಣ ಬಿಸಿಯಾಗಿಯೇ ಇತ್ತು. ಚಿತ್ರಮಂದಿರದ ವಿಚಾರದಲ್ಲಿ ಕಾಟೇರಗೆ ಹಿನ್ನಡೆಯಾಗುವ ಭಯವೂ ಅನೇಕರಲ್ಲಿತ್ತು. ಆದರೆ ಆ ನಂತರ ಆಗಿದ್ದು ಇತಿಹಾಸ.
ಈ ವರ್ಷ ಕೂಡ ಇಂತಹದ್ದೇ ವಾತಾವರಣ ನಿರ್ಮಾಣವಾಗಲಿದೆ. ಡೆವಿಲ್ ಸುತ್ತ ಮುತ್ತ ಪರಭಾಷೆಯ ಹಾವಳಿ ಹೆಚ್ಚಾಗಲಿದೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಅರ್ಷದ್ ವಾರ್ಸಿ, ಜಾಕಲಿನ್ ಫರ್ನಾಂಡಿಸ್, ದಿಶಾ ಪಠಾಣಿ, ತುಶಾರ್ ಕಪೂರ್, ಶ್ರೇಯಸ್ ತಲ್ಪಡೆ ಹೀಗೆ ಬಾಲಿವುಡ್‌ನ ಒಂದು ದೊಡ್ಡ ದಂಡೇ ಅವತ್ತು ಅಂದರೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡೆವಿಲ್ ಎದುರು ಕಾಣಲಿದೆ. ಯಾಕೆಂದರೆ ಡೆವಿಲ್ ತೆರೆಗೆ ಬರುವ ಒಂದು ವಾರದ ಮುನ್ನ ಇವರೆಲ್ಲರು ಅಭಿನಯಿಸಿರುವ ವೆಲ್ ಕಂ ಟು ದಿ ಜಂಗಲ್ ಸಿನಿಮಾ ವಿಶ್ವದೆಲ್ಲೆಡೆ ತೆರೆ ಕಾಣಲಿದೆ.
ಇನ್ನೂ ಡಿಸೆಂಬರ್ ನ ಗುತ್ತಿಗೆ ಪಡೆದಿರುವ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಕೂಡ ಈ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುವ ನಿರೀಕ್ಷೆ ಇದೆ. ತಮ್ಮ ಮಹತ್ವಕಾಂಕ್ಷೆಯ ಸಿತಾರೆ ಜಮೀನ್ ಪರ್ ಚಿತ್ರವನ್ನ ಡಿಸೆಂಬರ್ 25ಕ್ಕೆ ಬಿಡುಗಡೆ ಮಾಡಲಿದ್ದಾರೆ ಅನ್ನುವ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.

ಹಾಲಿವುಡ್‌ನಿಂದ ಲಯನ್ ಕಿಂಗ್ ಮತ್ತು ಥಂಡರ್ ಬೋಲ್ಟ್ ಸಿನಿಮಾಗಳು ಕೂಡ ಬಿಡುಗಡೆಯಾಗಲಿವೆ. ಸಹಜವಾಗಿ ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್‌ನ ಕಣ್ಣು ಕೂಡ ಡಿಸೆಂಬರ್ ಮೇಲಿದೆ. ಈ ಕಾರಣಕ್ಕೆ ಈ ಬಾರಿಯೂ ಡಿಸೆಂಬರ್ ಕದನ ರಣ ರೋಚಕವಾಗಿರುವುದರಲ್ಲಿ ಅನುಮಾನ ಇಲ್ಲ.


Click it and Unblock the Notifications











