ಗಜಪಡೆ ವಿವಾದದ ನಡುವೆ ಕಿರುತೆರೆಯಲ್ಲಿ ಭಾನುವಾರ ಕಾಟೇರ ಅಬ್ಬರ..!
ಅಭಿಮಾನದ ಸೋಗಿನಲ್ಲಿ ಮಾಡಬಾರದ ಅನಾಚಾರವನ್ನ ಮಾಡಿ, ಮನುವಾದದ ಮನೋ ರೋಗಿಯಂತೆ ಕಾಣುವ ಗಜಪಡೆ ಎಂಬ ವ್ಯಕ್ತಿ ಅದೆಲ್ಲಿ ಅಡಗಿ ಕುಳಿತಿದ್ದಾನೋ ಗೊತ್ತಿಲ್ಲ. ಆದರೆ ಗಜಪಡೆ ಎಂಬ ಮುಖವಾಡವನ್ನ ಹಾಕಿಕೊಂಡು ಬದುಕುತ್ತಿರುವ ಈ ವ್ಯಕ್ತಿ, ದರ್ಶನ್ ಅವರ ಅಸಂಖ್ಯಾತ ಅಭಿಮಾನಿಗಳಿಗೆ ಮುಜುಗರವನ್ನ ಉಂಟು ಮಾಡಿದ್ದಾನೆ.
ನಿಜಾ.. ಮುಖವಾಡ ಇನ್ನೂ ಕಳಚಬೇಕು. ದರ್ಶನ್ ಅವರ ಅಭಿಮಾನಿಯೇ ಅನ್ನುವುದು ರುಜುವಾತಾಗಬೇಕು. ಆದರೆ.. ಇದು ಆದರೂ ಕೂಡ, ಹೆಚ್ಚೇನು ವ್ಯತ್ಯಾಸವಾಗಲ್ಲ. ಯಾಕೆಂದರೆ ಸಮಾಜ ಈ ಕೆಟ್ಟಾ ಕೊಳಕು ಮನಸ್ಥಿತಿಯ ಗಜಪಡೆ ಎಂಬ ವ್ಯಕ್ತಿಯ ಹಣೆಯ ಮೇಲೆ ದರ್ಶನ್ ಅವರ ಅಭಿಮಾನಿಯೆಂದು ಷರಾ ಬರೆದಿದೆ. ಹಾಗೆಯೇ ತಿಳಿದುಕೊಂಡಿದೆ.

ಇರಲಿ.. ವಿಚಾರ ಅದಲ್ಲ. ಸದ್ಯದ ಸಮಾಚಾರ ಏನೆಂದರೆ ಈ ಟ್ರೋಲು.. ಕಿಂಡಲ್ಲು.. ಸ್ಟಾರ್ ವಾರು.. ಫ್ಯಾನ್ ವಾರುಗಳ ನಡುವೆ, ದರ್ಶನ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಕಾಟೇರ ಇನ್ನೂ ಕೆಲವೇ ಘಂಟೆಗಳಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಯುಗಾದಿ ಹಬ್ಬದ ಪ್ರಯುಕ್ತ, ಕರುನಾಡಿನ ಮನೆಗಳಲ್ಲಿ ಕಾಟೇರ ಕಥೆ ಅನಾವರಣವಾಗಲಿದೆ.
ಇನ್ನೂ ಕಾಟೇರ ತೆರೆಗೆ ಬಂದು ಇವತ್ತಿಗೆ ನೂರು ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಚಿತ್ರ ಪ್ರಸಾರವಾಗುತ್ತಿದೆ. ಒಂದು ಕಡೆ ಯುಗಾದಿ ಹಬ್ಬದ ಸಡಗರ.. ಇನ್ನೊಂದು ಕಡೆ ಕಾಟೇರ ತೆರೆಗೆ ಬಂದು ನೂರು ದಿನಗಳಾಗಿವೆ ಎಂಬ ವಿಚಾರ.. ಸಾಮಾಜಿಕ ಜಾಲತಾಣದಿಂದ ಬೇಸತ್ತ ಅಭಿಮಾನಿಗಳಿಗೆ ಇವೆರಡು ಸಂಗತಿಗಳು ಸದ್ಯಕ್ಕೆ ಸಮಾಧಾನವನ್ನ ತಂದು ಕೊಟ್ಟಿವೆ. ಹೀಗಾಗಿ ಎರಡು ದಿನಗಳ ಮೊದಲೇ ಹಬ್ಬಕ್ಕೆ ಅಣಿಯಾಗುತ್ತಿರುವ ದರ್ಶನ್ ಭಕ್ತಗಣ , ಕಾಟೇರನನ್ನ ತಮ್ಮ ತಮ್ಮ ಮನೆಗಳಿಗೆ ಬರಮಾಡಿಕೊಳ್ಳಲು.. ಸ್ವಾಗತವನ್ನ ಕೋರಲು.. ಬೇಕಿರುವ ಸರ್ವ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದೆ.

ಫೆಬ್ರವರಿ 9 ರಂದು ಓಟಿಟಿಗೆ ಬಂದಿದ್ದ ಕಾಟೇರ
ನಾಳೆ ಸಂಜೆ ಸರಿಯಾಗಿ 07 ಘಂಟೆಗೆ ಕಿರುತೆರೆಯಲ್ಲಿ ಪ್ರತ್ಯಕ್ಷವಾಗಲಿರುವ ಕಾಟೇರ ಈ ಹಿಂದೆ ಫೆಬ್ರವರಿ 09ರಂದು ಓಟಿಟಿಯಲ್ಲಿ ಪ್ರಸಾರವಾಗಿತ್ತು. ವಿಶೇಷ ಅಂದರೆ ಓಟಿಟಿಯಲ್ಲಿ ಅವತ್ತು ಚಿತ್ರ ಪ್ರಸಾರವಾಗುವ ಸಮಯದಲ್ಲಿ 196 ಚಿತ್ರಮಂದಿರ ಹಾಗೂ 63 ಮಲ್ಟಿಫ್ಲೆಕ್ಸ್ ಗಳಲ್ಲಿ ಕಾಟೇರ ಇನ್ನೂ ಯಶಸ್ವೀ ಪ್ರದರ್ಶನವನ್ನ ಕಾಣುತ್ತಿತ್ತು.
ಈ ಕಾರಣಕ್ಕೆ ಚಿತ್ರಮಂದಿರದಲ್ಲಿ ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಸಮಯದಲ್ಲಿ ಓಟಿಟಿಯಲ್ಲಿ ಬಿಡುಗಡೆ ಮಾಡುವ ಅವಸರವಾದರೂ ಏನಿದೆ ಅನ್ನುವ ಪ್ರಶ್ನೆಯನ್ನ ಅವತ್ತು ದರ್ಶನ್ ಅಭಿಮಾನಿಗಳು ಕೇಳಿದ್ದರು. ಓಟಿಟಿ ವಿಚಾರದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಒಟ್ನಲ್ಲಿ ಕನ್ನಡ ಚಿತ್ರರಂಗದಲ್ಲಿ ಹತ್ತಾರು ದಾಖಲೆಗಳನ್ನ ಮುಡಿಗೇರಿಸಿಕೊಂಡ ಕಾಟೇರ, ಯುಗಾದಿ ಹಬ್ಬದ ಪ್ರಯುಕ್ತ ನಾಳೆ ಸಂಜೆ 07 ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ'ಪ್ರಸಾರವಾಗಲಿದೆ. ಇನ್ನೂ ಎಲ್ಲರಿಗೂ ಗೊತ್ತು ಕರ್ನಾಟಕದಲ್ಲಿ ದರ್ಶನ್ ಅತ್ಯುತ್ತಮ ಟಿ.ಆರ್.ಪಿ ಮೆಟೀರಿಯಲ್ಲು. ಅದು ಸ್ವತಃ ದರ್ಶನ್ ಅವರಿಗೂ ಗೊತ್ತಿರುವ ವಿಚಾರ. ಈ ಕಾರಣಕ್ಕೆ ಯುಗಾದಿ ಹಬ್ಬದ ಸಂಭ್ರಮ ಹೆಚ್ಚು ಮಾಡಲು ಬರುತ್ತಿರುವ ಕಾಟೇರ ಗೆ ಎಷ್ಟು ಟಿ.ಆರ್.ಪಿ ಬರಬಹುದು ಅನ್ನುವ ಕುತೂಹಲವೂ ಅನೇಕರನ್ನ ಈಗ ಕಾಡುತ್ತಿದೆ.


Click it and Unblock the Notifications











