»   » ಹೊಸ ಮನೆ ಯಾವಾಗ ಕಟ್ಟುತ್ತೀರಿ?

ಹೊಸ ಮನೆ ಯಾವಾಗ ಕಟ್ಟುತ್ತೀರಿ?

Posted By: Staff
Subscribe to Filmibeat Kannada

ನೀವು ಬೆಂಗಳೂರಿನವರಾದರೆ ಶಿವಾನಂದ ಸರ್ಕಲ್‌ ನೋಡಿರುತ್ತೀರಿ ಅಥವಾ ಕನಿಷ್ಠ ಅದರ ಹೆಸರನ್ನಾದರೂ ಕೇಳಿರುತ್ತೀರಿ. ಶೇಷಾದ್ರಿಪುರದಿಂದ ಚಾಲುಕ್ಯ ಹೋಟೆಲ್‌ವರೆಗೆ ಮೈಚಾಚಿರುವ ರೇಸ್‌ಕೋರ್ಸ್‌ ರಸ್ತೆಯನ್ನು

ಆ ಕಡೆ ಅಶೋಕಾ ಹೋಟೆಲ್‌ ಈ ಕಡೆ ಜನಾರ್ದನ ಹೋಟೆಲ್‌ ಇರುವ ರಸ್ತೆ ಕತ್ತರಿಸುವ ಜಾಗವೇ ಶಿವಾನಂದ ಸರ್ಕಲ್‌. ಹಾಗೆ ನೋಡಿದರೆ ಅದು ಸರ್ಕಲ್‌ ಅಲ್ಲವೇ ಅಲ್ಲ. ಶಿವಾನಂದ ಚೌಕ ಎನ್ನುವುದೇ ಸೂಕ್ತ. ಸುಮ್ಮನೆ ಮಾತಿಗಿರಲಿ ಅಂತ ಹೇಳುತ್ತಿದ್ದೇವೆಯೇ ಹೊರತು ಕಲಕತ್ತವನ್ನು ಕೋಲ್ಕಟ ಎಂದು ಬದಲಾಯಿಸಿದ ಹಾಗೆ ಈ ಹೆಸರನ್ನು ಬದಲಾಯಿಸುವ ಉತ್ಸಾಹ ಬೇಡ.

ಇವತ್ತು ಈ ಸರ್ಕಲ್‌ನ ಒಂದು ಮೂಲೆ ಒರು ಮಾದರಿ ಸುದ್ದಿ ಮಾಡುತ್ತಿದೆ. ಒಂದು ಮೂಲೆಯಲ್ಲಿ ಪೆಟ್ರೋಲ್‌ ಬಂಕ್‌, ಇನ್ನೊಂದು ಮೂಲೆಯಲ್ಲಿ ದಿನಸಿ ವಸ್ತುಗಳ ಸರದಾರ ಶಿವಾನಂದ ಸ್ಟೋರ್ಸ್‌, ಮತ್ತೊಂದು ಮೂಲೆಯಲ್ಲಿ ದೇಸಾಯಿ ನರ್ಸಿಂಗ್‌ ಹೋಂ ಇದ್ದರೆ ಅಗ್ನಿ ಮೂಲೆಯಲ್ಲಿ ಏನಿದೆ ?

ಕನ್ನಡ ಸಿನಿಮಾದ ತವರು ಮನೆ : ಕಾಯಿದೆ ದತ್ತವಾದ ಅಧಿಕಾರವಿಲ್ಲದಿದ್ದರೂ ಕನ್ನಡ ಚಿತ್ರರಂಗದ ಆಗುಹೋಗುಗಳನ್ನು ನಿಯಂತ್ರಿಸುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಎರಡು ಮಹಡಿಯ ಕಟ್ಟಡ ಕಳೆದ 20 ವರ್ಷಗಳಿಂದ ಅಲ್ಲಿ ತನ್ನ ಕಾರುಬಾರು ನಡೆಸುತ್ತಿದೆ. ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಲಾವಿದರ ಸಂಘ, ಅಶಕ್ತ ಕಲಾವಿದರ ಸಂಘ, ಸಾಹಸ ಕಲಾವಿದರ ಸಂಘ, ಕಾರ್ಮಿಕರು ಮತ್ತು ತಂತ್ರಜ್ಞರ ಸಂಘ ...ಹೀಗೆ ಸಾಕುಬೇಕಾದಷ್ಟು ಸಂಘಸಂಸ್ಥೆಗಳಿದ್ದರೂ ಕನ್ನಡ ವಾಣಿಜ್ಯ ಮಂಡಳಿ ಎಲ್ಲ ಸಂಘಗಳ ತಾಯಿ ಸಂಘದಂತೆ ಕೆಲಸ ಮಾಡಬೇಕಾದ ನೈತಿಕ ಹೊಣೆ ಹೊತ್ತುಕೊಂಡಿದೆ. ಈ ಸಂಘ ಇವತ್ತು ಕಟ್ಟಡ ಕೊಡವಿಕೊಂಡು ಮೇಲೇಳುತ್ತಿದೆ.

ಹಳೆಯ ಕಟ್ಟಡವನ್ನು ನೆಲೆಸಮವಾಗಿಸಿ ಹೊಸ ಕಟ್ಟಡ ಸಮುಚ್ಚಯ ನಿರ್ಮಾಣಕ್ಕೆ ನೀಲನಕ್ಷೆ ಸಿದ್ದವಾಗಿದೆ. ಅಂದಾಜು ವೆಚ್ಚ 60 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಬಹು ಅಂತಸ್ತುಗಳ ಈ ಸಂಕೀರ್ಣದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿ ಇರುತ್ತದೆ. ಅಂಗಡಿ ಮುಂಗಟ್ಟು ಕಚೇರಿಗಳು ಸದ್ಯದಲ್ಲೇ ಇಲ್ಲಿ ಬಾಡಿಗೆಗೆ ಸಿಗುತ್ತವೆ ಎನ್ನುವ ಬೋರ್ಡ್‌ ಇನ್ನೇನು ತಗಲು ಬೀಳುತ್ತದೆ. ಹೊಸ ಕಟ್ಟಡದ ನಿರ್ಮಾಣ ನಿರ್ವಹಣೆಯನ್ನು ಸ್ಟೇಟ್ಸ್‌ ಥಿಯೇಟರ್‌ನ ಮಾಲಕ ತಲ್ಲಂ ನಂಜುಂಡಶೆಟ್ಟಿ ಹೊತ್ತುಕೊಂಡಿದ್ದಾರೆ. ಬರಲಿರುವ ಮಂಡಳಿ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಯೂ ದಟ್ಟವಾಗಿದೆ. ಅದೇನೇ ಇರಲಿ, ಮಂಡಳಿಗೆ ನವೀಕೃತ ಬಾಹ್ಯರೂಪ ಸ್ವಾಗತಾರ್ಹ ಎನ್ನುತ್ತಿರುವವರು ಅಂತರಂಗ ಶುದ್ಧಿ ಯಾವತ್ತು ಎನ್ನುವ ಪ್ರಶ್ನೆಯನ್ನೂ ಮುಂದಿಡುತ್ತಿದ್ದಾರೆ.

ಮನೆ ಮನೆ ಕಥೆ : ಅದು ಸಿನಿಮಾ ಥಿಯೇಟರ್‌ ಇರಬಹುದು ಅಥವಾ ಶಿಥಿಲವಾದ ದೊಡ್ಡ ಮನೆಯೇ ಇರಬಹುದು, ಹಳೆಕಟ್ಟಡ ಕೆಡವಿ ವ್ಯಾಪಾರ ಮಳಿಗೆಗಳನ್ನು ಕಟ್ಟುವ ಒಂದು ಚಳವಳಿಯೇ ಇವತ್ತು ಬೆಂಗಳೂರಿನಲ್ಲಿ ನಡೆಯುತ್ತಿದೆ. ಮಿನರ್ವ, ಭಾರತ್‌, ಅಲಂಕಾರ್‌ ...ಹೀಗೆ ಅನೇಕ ಚಿತ್ರಮಂದಿರಗಳು ಶಾಪಿಂಗ್‌ ಕಾಂಪ್ಲೆಕ್ಸ್‌ ಆಗಿ ವರ್ಷಗಳುರುಳಿವೆ. ಅಂತೂ, ಆರು ತಿಂಗಳುಗಳ ನಂತರ ನೀವೊಂದು ಏರಿಯಾಗೆ ವಿಸಿಟ್‌ ಕೊಟ್ಟರೆ ಗುರುತು ಹಿಡಿಯುವುದಕ್ಕೇ ಕಷ್ಟ ಎನಿಸುವಂತೆ ಮಾರ್ಪಾಟುಗಳಾಗಿರುತ್ತದೆ. ಬೆಂಗಳೂರು ವರ್ಟಿಕಲ್‌ ಆಗಿ, ಹಾರಿಜಾನ್‌ಟಲ್‌ ಆಗಿ ಬೆಳೆಯುತ್ತಿದ್ದು ಇನ್ನೂ ಕೆಲವು ಸೈಟುಗಳು, ಕಟ್ಟಡಗಳು ಇವತ್ತು ಹಾಗೇ ಬಿದ್ದಿದ್ದರೆ ಅದರ ಮಾಲೀಕರಿಗೆ ಹೊಸ ಯೋಜನೆಗಳನ್ನು ಇಲ್ಲ ಎಂದು ಅರ್ಥ. ಅಥವಾ ಯೋಜನೆಗಳಿದ್ದರೂ ಕ್ರಿಯಾಶೀಲವಾಗದಿರುವುದಕ್ಕೆ ಕಾರಣ ಅಣ್ಣತಮ್ಮಂದಿರ ನಡುವಿನ ಜಗಳ , ತಂದೆ ಮಕ್ಕಳ ಕಲಹ, ಇವಾವೂ ಇಲ್ಲದಿದ್ದರೆ ನೆರೆಹೊರೆ ನಡುವೆ ಕೋರ್ಟ್‌ನಲ್ಲಿ ಕೊಳೆಯುತ್ತಿರುವ ವ್ಯಾಜ್ಯ ಎಂದು ಈಜಿಯಾಗಿ ತೀರ್ಮಾನಕ್ಕೆ ಬರಬಹುದು.

English summary
Renovation of old and dilapidated buildings is order of the day in bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada