'ಲೂಸಿಯಾ' ಪವನ್ ಸಿನಿಮಾ ತಂಡದ ಸದಸ್ಯರಾಗಬೇಕೆ? ಅವಕಾಶದ ಬಾಗಿಲು ತೆರೆದಿದೆ
'ಲೂಸಿಯಾ', 'ಯೂ-ಟರ್ನ್' ಮೂಲಕ ಹೊಸ ಮಾದರಿಯ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿದ್ದ ಮತ್ತು ಚಿತ್ರ ನಿರ್ಮಾಣದಲ್ಲಿಯೂ ಹೊಸ ಬಗೆಯ ಪ್ರಯೋಗಗಳನ್ನು ಮಾಡಿದ್ದ ಪವನ್ ಕುಮಾರ್ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
'ಲೂಸಿಯಾ' ಸಿನಿಮಾದಲ್ಲಿ ಜನರಿಂದಲೇ ಹಣ ಹಾಕಿಸಿ (ಕ್ರೌಡ್ ಫೌಂಡ್) ಗೆದ್ದಿದ್ದ ಪವನ್ ಕುಮಾರ್ ಈ ಬಾರಿ ಕ್ರೌಡ್ ಫಂಡ್ ಬದಲಿಗೆ ಬೇರೆಯ ಯೋಚನೆಯನ್ನು ಹೊತ್ತು ಬಂದಿದ್ದಾರೆ.
ಈ ಬಾರಿ ಅವರು 'ಕ್ರೌಡ್ ಸೋರ್ಸ್' ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸುವ ಯತ್ನ ಮಾಡುತ್ತಿದ್ದಾರೆ. ಸಿನಿಮಾ ಬಗ್ಗೆ ಆಸಕ್ತಿಯುಳ್ಳ, ಸಿನಿಮಾಕ್ಕಾಗಿ ಕೆಲಸ ಮಾಡಲು ಇಚ್ಛಿಸುವವರಿಗೆ ಪವನ್ ಕುಮಾರ್ ಅವಕಾಶ ಕೊಡುತ್ತಿದ್ದಾರೆ.

ಚಿತ್ರತಂಡದ ಭಾಗವಾಗಲು ಮುಕ್ತ ಅವಕಾಶ
ಹೌದು, ಪವನ್ ಕುಮಾರ್ ಅವರು ಹೊಸದೊಂದು ಸಿನಿಮಾ ನಿರ್ಮಾಣ, ನಿರ್ದೇಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಅವರ ಚಿತ್ರತಂಡದ ಭಾಗವಾಗಲು ಮುಕ್ತ ಅವಕಾಶ ಕಲ್ಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಲಿಂಕ್ ಹಾಕಿರುವ ಪವನ್
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಪ್ರಕಟಿಸಿರುವ ಅವರು, ಅಲ್ಲಿಯೇ ಲಿಂಕ್ ಒಂದನ್ನು ಕೊಟ್ಟಿದ್ದು, ಲಿಂಕ್ ನಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರಿಸಿ ಸಬ್‌ಮಿಟ್ ಮಾಡಿದರೆ ಪವನ್ ಕುಮಾರ್ ನಿರ್ಮಾಣ ಸಂಸ್ಥೆಯ ಸಿಬ್ಬಂದಿ ಸಂಪರ್ಕಿಸಿ ಚಿತ್ರತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಅನನುಭವಿಗಳೂ ಸಹ ಸಿನಿಮಾದಲ್ಲಿ ಕೆಲಸ ಮಾಡಬಹುದು
ಈಗಾಗಲೇ ಸಿನಿಮಾಗಳಲ್ಲಿ ಕೆಲಸ ಮಾಡಿರುವವರು, ಶಾರ್ಟ್ ಸಿನಿಮಾಗಳನ್ನು ಮಾಡಿರುವವರು, ಸಿನಿಮಾ ಗಂಧವೇ ಗೊತ್ತಿಲ್ಲದೇ ಕೇವಲ ಆಸಕ್ತಿ ಹೊಂದಿರುವವರು ಸಹ ಅಪ್ಲೈ ಮಾಡಬಹುದಾಗಿದೆ. ಪೂರ್ಣವಾಗಿ ಹಾಗೂ ಅರೆಕಾಲಿಕವಾಗಿಯೂ ಸಿನಿಮಾ ತಂಡದೊಂದಿಗೆ ಕೆಲಸ ಮಾಡಬಹುದಾಗಿದೆ.

ಯೋಗರಾಜ್ ಭಟ್ ಸಿನಿಮಾದಲ್ಲಿ ನಟಿಸುತ್ತಿರುವ ಪವನ್ ಕುಮಾರ್
ಪವನ್ ಕುಮಾರ್ ಅವರು ಯೋಗರಾಜ್ ಭಟ್ ಅವರ ಗಾಳಿಪಟ-2 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಪವನ್ ನಿರ್ದೇಶಿಸಿದ್ದ ಕೊನೆಯ ಚಿತ್ರ ಯೂ-ಟರ್ನ್ ಉತ್ತಮ ಯಶಸ್ಸನ್ನು ಪಡೆದುಕೊಂಡಿತ್ತು. ಈ ಚಿತ್ರವನ್ನು ತೆಲುಗಿನಲ್ಲಿಯೂ ಅವರು ನಿರ್ದೇಶಿಸಿದ್ದರು.


Click it and Unblock the Notifications











