ಚಂದನ್ ಶೆಟ್ಟಿ, ನಿವೇದಿತಾ ಗೌಡ ದಿಢೀರ್ ಸುದ್ದಿಗೋಷ್ಠಿ; ಎಲ್ಲಾ ವದಂತಿಗೂ ತೆರೆ ಎಳೆಯುತ್ತಾರಾ?
ಕಳೆದೆರಡು ದಿನಗಳಿಂದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. 4 ವರ್ಷಗಳ ಹಿಂದೆ ಮದುವೆಯಾಗಿದ್ದ ಜೋಡಿ ಕಾನೂನಾತ್ಮಕವಾಗಿ ದೂರಾಗಿದ್ದಾರೆ. ಈಗಾಗಲೇ ಕೌಟುಂಬಿಕ ನ್ಯಾಯಾಲಯದಿಂದ ಇಬ್ಬರಿಗೂ ವಿಚ್ಛೇದನ ಮಂಜೂರಾಗಿದೆ. ಅಧಿಕೃತವಾಗಿ ಇಬ್ಬರೂ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಿಗ್‌ಬಾಸ್ ಶೋನಲ್ಲಿ ಭಾಗವಹಿಸಿ ಪರಿಚಿತರಾಗಿದ್ದ ಚಂದನ್- ನಿವೇದಿತಾ ಬಳಿಕ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದ್ದರು. ಬಿಗ್‌ಬಾಸ್ ಮನೆಯಲ್ಲಿ ಚಂದನ್‌ನನ್ನು ನಿವೇದಿತಾ ಅಣ್ಣ ಎಂದು ಕರೆದಿದ್ದರು. ಮೈಸೂರು ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಪ್ರಪೋಸ್ ಮಾಡಿ ಚಂದನ್ ಶೆಟ್ಟಿ ಶಾಕ್ ಕೊಟ್ಟಿದ್ದರು. ಮೈಸೂರಿನ ಕಲ್ಯಾಣ ಮಂಟಪದಲ್ಲಿ ಇಬ್ಬರ ಮದುವೆ ನಡೆದಿತ್ತು.

ಮದುವೆ ಬಳಿಕ ತಮ್ಮ ತಮ್ಮ ಕೆಲಸಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟೀವ್ ಆಗಿದ್ದರು. ಯುಟ್ಯೂಬ್ ಚಾನಲ್‌ನಲ್ಲಿ ವೀಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಆಲ್ಬಮ್ ಸಾಂಗ್, ರೀಲ್ಸ್, ರಿಯಾಲಿಟಿ ಶೋ ಅಂತೆಲ್ಲಾ ಗಮನ ಸೆಳೆಯುತ್ತಿದ್ದರು. ಆದರೆ ಕರಿಯರ್ ಕಾರಣ ಕೊಟ್ಟು ಇಬ್ಬರೂ ಪರಸ್ಪರ ಒಪ್ಪಿ ಇದೀಗ ವಿಚ್ಛೇದನ ಪಡೆದಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಶಾಕ್ ತಂದಿದೆ.
ಈಗಾಗಲೇ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಿನಿಮಾಗಳಲ್ಲಿ ಕೂಡ ಕೆಲಸ ಮಾಡಲು ಆರಂಭಿಸಿದ್ದರು. ರ್ಯಾಪ್ ಸಾಂಗ್ಸ್ ಮಾಡುತ್ತಲೇ ಸದ್ದು ಮಾಡಿದ ಚಂದನ್ ಕೆಲ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಬಿಗ್‌ಬಾಶ್ ಸೀಸನ್-5ರ ವಿಜೇತರಾಗಿದ್ದರು. ಇದೀಗ ಹೀರೊ ಆಗಿ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ್ದಾರೆ. ಟಿಕ್‌ಟಾಕ್ ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಸಾಧಿಸಿದ ಬಳಿಕ ನಿವೇದಿತಾ ಬಿಗ್‌ಬಾಸ್ ಶೋಗೆ ಎಂಟ್ರಿಕೊಟ್ಟಿದ್ದರು. ಇನ್ನು ನಿವೇದಿತಾ ಗೌಡ 'ಗಿಚ್ಚಿ ಗಿಲಿಗಿಲಿ', 'ರಾಜಾರಾಣಿ' ಶೋಗಳಲ್ಲಿ ಮಿಂಚಿದ್ದಾರೆ.
ನಿವೇದಿತಾ ಕೂಡ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಚಂದನ್- ನಿವಿ ಇಬ್ಬರೂ 'ಕ್ಯಾಂಡಿಕ್ರಶ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಚ್ಛೇದನದ ಬಳಿಕವೂ ಚಿತ್ರೀಕರಣದಲ್ಲಿ ಭಾಗಿ ಆಗಲು ಸಿದ್ಧರಾಗಿದ್ದಾರೆ. ಶೀಘ್ರದಲ್ಲೇ ಮತ್ತೆ ಕ್ಯಾಮರಾ ಮುಂದೆ ನಿಲ್ಲಲಿದ್ದಾರೆ. ಇನ್ನು ಒಂದು ವರ್ಷದ ಹಿಂದೆಯೇ ಇಬ್ಬರೂ ದೂರಾಗಲು ನಿರ್ಧರಿಸಿದ್ದರು. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸುಳಿವು ಬಿಟ್ಟುಕೊಡದೇ ಒಟ್ಟೊಟ್ಟಿಗೆ ಓಡಾಡಿಕೊಂಡಿದ್ದರು. ಇದೀಗ ಏಕಾಏಕಿ ಶಾಕ್ ಕೊಟ್ಟಿದ್ದಾರೆ.

ಇನ್ನು ನ್ಯಾಯಾಲಯದಲ್ಲಿ ವಿಚ್ಛೇದನ ಮಂಜೂರು ಆದ ಬಳಿಕ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಚಂದನ್- ನಿವಿ ಈ ಬಗ್ಗೆ ಮಾಹಿತಿ ನೀಡಿದ್ದರು. "ಈ ದಿನ ಚಂದನ್ ಶೆಟ್ಟಿ ಹಾಗೂ ನಾನು, ನಮ್ಮ ದಾಂಪತ್ಯವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಹಾಗೂ ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಎಂದಿನಂತೆ ಬೆಂಬಲ ಕೋರುತ್ತೇವೆ. ನಾವೂ ಪ್ರತ್ಯೇಕ ಮಾರ್ಗ ಅನುಸರಿಸಿದ್ರೂ, ಒಬ್ಬರೊನ್ನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು" ಎಂದು ಬರೆದುಕೊಂಡಿದ್ದರು.
ಇದೀಗ ಇಬ್ಬರೂ ಒಟ್ಟಿಗೆ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್‌ನಲ್ಲಿರುವ ಎಂಬಿ ಲೆಗಸಿಯಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3:30ಕ್ಕೆ ಸುದ್ದಿಗೋಷ್ಠಿ ನಿಗದಿಯಾಗಿದ್ದು ಇಬ್ಬರೂ ಯಾವ ವಿಚಾರದ ಬಗ್ಗೆ ಮಾತನಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ವಿಚ್ಛೇದನದ ವಿಚಾರದಲ್ಲಿ ಕೇಳಿಬರುತ್ತಿರುವ ಕೆಲ ಆರೋಪಗಳ ಬಗ್ಗೆಯೂ ಪ್ರತಿಕ್ರಿಯಿಸುವ ಸಾಧ್ಯತೆಯಿದೆ.


Click it and Unblock the Notifications










