ವಯಸ್ಸಾದ ಮೇಲೆ ಒಂಟಿತನ ಕಾಡುತ್ತೆ,ಪಶ್ಚಾತ್ತಾಪ ಪಡುವುದಕ್ಕಿಂತ ಮದುವೆ ಆಗೋದೇ ವಾಸಿ ; ಚಂದನ್ ಶೆಟ್ಟಿ
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ ಪ್ರೀತಿಯಲ್ಲಿ ಒಮ್ಮೊಮ್ಮೆ ನೋವಾಗುತ್ತೆ. ಹೀಗೆ ಆದ ನೋವು ಒಮ್ಮೊಮ್ಮೆ ಸಹಿಸಿಕೊಳ್ಳಲು ಸಾಧ್ಯವಾಗಲ್ಲ. ಇನ್ನೂ.. ಎಲ್ಲಾ ಉತ್ಸಾಹ, ಆಸಕ್ತಿ ಮತ್ತು ಖುಷಿಯ ಕ್ಷಣಗಳನ್ನು ಕಸಿದುಕೊಳ್ಳುವ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳುವುದಕ್ಕೆ ಅನೇಕರಿಂದ ಸಾಧ್ಯವಾಗುವುದಿಲ್ಲ.
ಯಾಕೆಂದರೆ ದೇಹಕ್ಕೆ ಆದ ಗಾಯವಾದರೂ ಹೇಗೊ ಮರೆತು ಬಿಡಬಹುದು. ಆದರೆ ಮನಸಿಗೆ ಆದ ಗಾಯ ಮರೆಯಲು ಸಾಧ್ಯವಾಗಲ್ಲ. ಆದರೂ ಕೆಲವರು ಮರೆಯುವ ಪ್ರಯತ್ನ ಮಾಡುತ್ತಾರೆ. ಬದುಕನ್ನು ಮತ್ತೊಮ್ಮೆ ಹೊಸದಾಗಿ ಶುರು ಮಾಡಲು ಮುಂದಾಗುತ್ತಾರೆ. ಎರಡನೇ ಮದುವೆ ಕುರಿತು ಗಂಭೀರವಾಗಿ ಆಲೋಚನೆಯನ್ನು ಕೂಡ ಮಾಡುತ್ತಾರೆ. ಉದಾಹರಣೆಗೆ ಚಂದನ್ ಶೆಟ್ಟಿ.

ಹೌದು, ಅಸಲಿಗೆ ನಿವೇದಿತಾ ಗೌಡ ಅವರಿಂದ ಚಂದನ್ ಶೆಟ್ಟಿ ದೂರವಾದ ನಂತರ ಅನೇಕರಿಗೆ ಚಂದನ್ ಶೆಟ್ಟಿ ಎರಡನೇ ಮದುವೆ ಕುರಿತು ಚಿಂತೆ ಶುರುವಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಒಂದೂವರೆ ವರ್ಷಗಳಿಂದ ತಮ್ಮ ಚಿತ್ರ ಮತ್ತು ಹಾಡುಗಳ ವಿಚಾರಗಳನ್ನು ಹಂಚಿಕೊಳ್ಳುವುದಕ್ಕಿಂತ ವಿಚ್ಛೇದನ ಮತ್ತು ಎರಡನೇ ಮದುವೆ ಕುರಿತು ಚಂದನ್ ಶೆಟ್ಟಿ ಹಲವು ಬಾರಿ ಮಾತನಾಡಿದ್ದಾರೆ.
ಹೋದಲ್ಲಿ ಬಂದಲ್ಲಿ ಇವರಿಗೆ ಎರಡನೇ ಮದುವೆಯ ಪ್ರಶ್ನೆಯನ್ನೇ ಕೇಳಲಾಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಚಂದನ್ ಶೆಟ್ಟಿ ಮತ್ತೊಮ್ಮೆ ತಮ್ಮ ಎರಡನೇ ಮದುವೆ ಕುರಿತು ಮಾತನಾಡಿದ್ದು, ಗಂಡಿಗೆ ಹೆಣ್ಣು.. ಹೆಣ್ಣಿಗೆ ಗಂಡು ಅನಿವಾರ್ಯ ಎಂದು ಹೇಳಿದ್ದಾರೆ.
ಈ ಕುರಿತು ''SStv''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, ಪ್ರತಿಯೊಬ್ಬರಿಗೂ ಒಬ್ಬ ಪಾರ್ಟ್‌ನರ್ ಅನ್ನೋದು ಬೇಕೆ ಬೇಕು. ನೂರಕ್ಕೆ ನೂರು ಸತ್ಯ ಅದು ಎಂದು ಹೇಳಿದ್ದಾರೆ. ವಯಸ್ಸು ಇದ್ದಾಗ, ಮೈಯಲ್ಲಿ ಶಕ್ತಿ ಇದ್ದಾಗ ನಡೆಯುತ್ತೆ. ಆದರೆ ವಯಸ್ಸಾದ ನಂತರ 100% ಒಂಟಿತನ ಕಾಡೋಕೆ ಶುರುವಾಗುತ್ತೆ ಎಂದು ಹೇಳಿರುವ ಚಂದನ್ ಶೆಟ್ಟಿ ಆಗ ನಾನು ತಪ್ಪು ಮಾಡಿದೆ. ನನಗೆ ಬಾಳ ಸಂಗಾತಿ ಬೇಕಿತ್ತು ಅಂತ ಅನ್ಸುತ್ತೆ ಎಂದು ಹೇಳಿದ್ದಾರೆ. ಆಗ ಕೊರಗೋದಕ್ಕಿಂತ, ಒಂದೊಳ್ಳೆ ಬಾಳ ಸಂಗಾತಿ ಹುಡುಕಬೇಕು ಎಂದು ಹೇಳಿದ್ದಾರೆ.

ಇನ್ನೂ ಮದುವೆಯಾಗುವ ಹುಡುಗಿ ಹೇಗಿರಬೇಕು, ನಿರೀಕ್ಷೆಗಳೇನು ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಚಂದನ್ ಶೆಟ್ಟಿ ಅದು ನಿರೀಕ್ಷೆ ಅಲ್ಲ ಪರೀಕ್ಷೆ ಎಂದು ಹೇಳಿದ್ದಾರೆ. ನಿರೀಕ್ಷೆಯಲ್ಲಿ ಸಿಗುವಂತವರು ಸಿಕ್ಕಾದಮೇಲೆ ಪರೀಕ್ಷೆ ಒಳಗಾಗಲೇ ಬೇಕು ಎಂದು ಹೇಳಿರುವ ಚಂದನ್ ಶೆಟ್ಟಿ, ಪ್ರತಿಯೊಂದು ರಿಲೇಶನ್‌ಶಿಪ್‌ನಲ್ಲೂ. ಆ ಪರೀಕ್ಷೆಯಲ್ಲಿ ನೀವು ಯಾವ ರೀತಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತೀರಾ ಎನ್ನುವುದರ ಮೇಲೆ ಮುಂದಿನ ಜೀವನ ನಡೆದುಕೊಂಡು ಹೋಗುತ್ತೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ಈ ಬಾರಿ ಸ್ವಲ್ಪ ಟೈಮ್ ತಗೊಂಡು, ಯೋಚನೆ ಮಾಡಿ, ನೋಡಿ ಆಮೇಲೆ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.
ಇನ್ನು ನಿವೇದಿತಾ ಗೌಡ ಅವರಿಂದ ದೂರವಾದ ನಂತರ ಚಂದನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನುವ ಪ್ರಶ್ನೆ ಮತ್ತು ಆತಂಕ ಹಲವರಲ್ಲಿದೆ. ಈ ಕುರಿತು ಕೂಡ ಮಾತನಾಡಿರುವ ಚಂದನ್ ಶೆಟ್ಟಿ ನಾನು ಖಂಡಿತವಾಗಿಯೂ ಡಿಪ್ರೆಶನ್‌ನಲ್ಲಿ ಇಲ್ಲ. ಹಿಂದೆ ಡಿಪ್ರೆಸ್ಡ್ ಆಗಿಲ್ಲ ಎಂದಿದ್ದಾರೆ.
ಕೆಳಗೆ ಬಿದ್ದ ತಕ್ಷಣ, ಏಟಾಗುತ್ತೆ, ಏಟಾದಾಗ ಗಾಯ ಆಗುತ್ತೆ, ಗಾಯ ಆದ ತಕ್ಷಣ ನೋವಾಗುತ್ತೆ. ನೋವು ವಾಸಿಯಾಗೋದಕ್ಕೆ ಕೆಲವು ದಿನ ಬೇಕಾಗುತ್ತೆ. ಅದು ಪ್ರಕೃತಿ ನಿಯಮ ಎಂದು ಹೇಳಿರುವ ಚಂದನ್ ಶೆಟ್ಟಿ ಕೆಲವೊಂದು ನೋವುಗಳು ಆದಾಗ, ಸ್ವಲ್ಪ ಜಾಸ್ತಿ ಟೈಮ್ ತಗೊಳ್ಳಬಹುದು. ಕೆಲವೊಂದು ಬೇಗ ವಾಸಿಯಾಗಬಹುದು. ಈಗ ಕಂಪ್ಲೀಟ್ ಆಗಿ ವಾಸಿಯಾಗಿದೆ. ಆರಾಮಾಗಿದ್ದೇನೆ, ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. ಈಗ ನನ್ನ ಎಲ್ಲಾ ಏಕಾಗ್ರತೆ ನನ್ನ ಕೆಲಸದ ಮೇಲಿದೆ. ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು, ಹೆಸರು ಮಾಡಬೇಕು ಎನ್ನುವ ಆಸೆ ಇದೆ ಎಂದಿದ್ದಾರೆ.


Click it and Unblock the Notifications











