ಅಭಿಮಾನಿ ಮೇಲೆ ನಟ ಧನ್ವೀರ್ ಹಲ್ಲೆ ಪ್ರಕರಣಕ್ಕೆ ನಾಟಕೀಯ ತಿರುವು!
ನಟ ಧನ್ವೀರ್ ಗೌಡ ಕಳೆದ ಗುರುವಾರ ರಾತ್ರಿ ತಮ್ಮ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ್ದಾನೆಂದು ಸುದ್ದಿಯಾಗಿತ್ತು. ಹಲ್ಲೆಗೊಳಗಾದ ವ್ಯಕ್ತಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ್ದ ಧನ್ವೀರ್, ಇದು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಮಾಡಲಾಗಿರುವ ಪಿತೂರಿ. ಚಿತ್ರರಂಗದಲ್ಲಿ ರೌಡಿಸಂ ಮಾಡಲೆಂದೇ ಕೆಲವರು ಬಂದಿದ್ದಾರೆ. ಕೆಲವು ಹುಡುಗರನ್ನು ಇಟ್ಟುಕೊಂಡು ಹೀಗೆಲ್ಲ ಮಾಡುತ್ತಿದ್ದಾರೆ. ಸೂಕ್ತ ಸಾಕ್ಷ್ಯ ಸಂಗ್ರಹಿಸಿದ ಬಳಿಕ ಎಲ್ಲವನ್ನು ಬಹಿರಂಗಗೊಳಿಸುತ್ತೇನೆ ಎಂದಿದ್ದರು.
ಆದರೆ ಇದೀಗ ನಟ ಧನ್ವೀರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಯುವಕ ಚಂದ್ರಶೇಖರ್ ಸ್ವತಃ ಧನ್ವೀರ್‌ಗೆ ಕ್ಷಮೆ ಕೇಳಿದ್ದಾನೆ. ಅಚಾನಕ್ಕಾಗಿ ಆ ಘಟನೆ ನಡೆದಿದೆ. ಧನ್ವೀರ್ ಅವರದ್ದು ಈ ಪ್ರಕರಣದಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದ್ದಾನೆ.

ಧನ್ವೀರ್ ಕ್ಷಮೆ ಕೇಳಿದ್ದಾರೆ, ನನ್ನ ಕಡೆಯಿಂದಲೂ ಸಾರಿ: ಚಂದ್ರಶೇಖರ್
ಧನ್ವೀರ್ ಅಭಿಮಾನಿಗಳ ಸಂಘದ ಮುಖಂಡರೊಬ್ಬರೊಂದಿಗೆ ನಿಂತು ವಿಡಿಯೋದಲ್ಲಿ ಮಾತನಾಡಿರುವ ಚಂದ್ರಶೇಖರ್, ''ಧನ್ವೀರ್ ನನಗೆ ಹೊಡೆದಿಲ್ಲ. ನನ್ನ ಕಡೆಯಿಂದ ಅವರಿಗೆ ಕ್ಷಮೆ ಇರಲಿ, ಅವರೂ ಸಹ ಕ್ಷಮೆ ಕೇಳಿದ್ದಾರೆ ಎಂದು ಹೇಳಿದ್ದಾರೆ. ಮೊದಲಿಗೆ ಮಾತನಾಡುವ ಅಭಿಮಾನಿ ಸಂಘದ ಮುಖಂಡ, ''ಘಟನೆಯನ್ನು ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ಈ ಯುವಕನದ್ದೇ ತಪ್ಪು ಎಂಬುದು ಗೊತ್ತಾಯಿತು. ಈ ಹುಡುಗ ಸಹ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ'' ಎಂದು ಹೇಳಿದ್ದಾರೆ.

ಮತ್ತಿನಲ್ಲಿ ಮಾತನಾಡಿರಬಹುದು: ದೂರು ನೀಡಿದ್ದ ಚಂದ್ರಶೇಖರ್
''ಅಂದು ರಾತ್ರಿ ಮತ್ತಿನಲ್ಲಿ ನಾನು ತುಸು ಹೆಚ್ಚು ಮಾತನಾಡಿರಬಹುದೇನೋ. ಅಲ್ಲಿ ಏನೋ ಆಗಿರಬಹುದು. ಯಾರೋ ಏನೋ ಮಾಡಿರಬಹುದು. ಅಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಒಟ್ಟಾರೆ ನನ್ನ ಕಡೆಯಿಂದಲೂ ಕ್ಷಮೆ ಇರಲಿ, ಅವರೂ ಸಾರಿ ಕೇಳಿದ್ದಾರೆ. ಈ ಮೂವಿ (ಧನ್ವೀರ್ ನಟನೆಯ 'ಬೈ ಟು ಲವ್) ಚೆನ್ನಾಗಿ ಇದೆಯಂತೆ. ನನ್ನಿಂದ ಈ ಸಿನಿಮಾಕ್ಕೆ ಕೆಟ್ಟ ಹೆಸರು ಬಂದಿದೆ. ಆದರೆ ಆ ಕೆಟ್ಟ ಹೆಸರು ನನಗೂ ಬರುವುದು ಬೇಡ, ಅವರಿಗೂ ಬರುವುದು ಬೇಡ ಇದು ಇಲ್ಲಿಗೇ ಕೊನೆ ಆಗಲಿ'' ಎಂದು ವಿಡಿಯೋದಲ್ಲಿ ಗೊಂದಲಪೂರ್ಣವಾಗಿ ಮಾತನಾಡಿದ್ದಾರೆ ಚಂದ್ರಶೇಖರ್.

ಅನುಪಮಾ ಚಿತ್ರಮಂದಿರದ ಬಳಿ ಘಟನೆ
ಗುರುವಾರ ರಾತ್ರಿ ಧನ್ವೀರ್ ಗೌಡ ಅವರು ಅನುಪಮಾ ಚಿತ್ರಮಂದಿರದ ಬಳಿ ಚಿತ್ರತಂಡದೊಂದಿಗೆ ಇದ್ದಾಗ ಅಲ್ಲಿಗೆ ಬಂದ ಚಂದ್ರಶೇಖರ್ ಎಂಬ ಅಭಿಮಾನಿ ಸೆಲ್ಫಿ ಕೇಳಿದ್ದಾನೆ. ಸ್ವಲ್ಪ ಸಮಯದ ಬಳಿಕ ಫೋಟೊ ನೀಡುತ್ತೇನೆಂದು ಧನ್ವೀರ್ ಹೇಳಿದಾಗ ಆ ವ್ಯಕ್ತಿ ಅಸಭ್ಯವಾಗಿ ಮಾತನಾಡಲು ಆರಂಭಿಸಿದ್ದಾನೆ. ಹೆಣ್ಣು ಮಗಳ ಬಗ್ಗೆ ತೀರ ಕೆಟ್ಟದಾಗಿ ಮಾತನಾಡಿದಾಗ ಧನ್ವೀರ್ ಆತನಿಗೆ ಬುದ್ಧಿ ಮಾತು ಹೇಳಿದರಂತೆ. ಧನ್ವೀರ್ ಅಲ್ಲಿಂದ ಹೊರಟ ಬಳಿಕ ಚಿತ್ರಮಂದಿರದ ಬಳಿ ಇದ್ದ ಕೆಲವರು ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಟ ಧನ್ವೀರ್ ಹೇಳಿದ್ದಾರೆ. ಆತನಿಗೆ ನಾನು ಹೊಡೆದಿಲ್ಲ ಬದಲಿಗೆ ಬುದ್ಧಿ ಅಷ್ಟೆ ಹೇಳಿದ್ದೇನೆ ಎಂದು ಧನ್ವೀರ್ ಹೇಳಿದ್ದರು. ಆದರೆ ಆತ ''ನಿನಗೆ ಬುದ್ಧಿ ಕಲಿಸುವುದಾಗಿ ಸವಾಲು ಹಾಕಿದ'' ಎಂದಿದ್ದರು.

ಪ್ರಚಾರ ಕಾರ್ಯದಲ್ಲಿ ಧನ್ವೀರ್ ಗೌಡ
ಧನ್ವೀರ್ ಗೌಡ-ಶ್ರೀಲೀಲ ನಟನೆಯ 'ಬೈ ಟು ಲವ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಗಿದ್ದು, ಸಿನಿಮಾದ ಪ್ರಚಾರಕ್ಕಾಗಿ ರಾಜ್ಯ ಪ್ರವಾಸದಲ್ಲಿ ಚಿತ್ರತಂಡ ನಿರತವಾಗಿದೆ. ಇಂದು ಹುಬ್ಬಳ್ಳಿಗೆ ಚಿತ್ರತಂಡ ಭೇಟಿ ನೀಡಿದ್ದು, ಈ ಸಮಯದಲ್ಲಿ ಸಹ ಅಲ್ಲಿನ ಕೆಲವರು ಧನ್ವೀರ್ ಅನ್ನು ಇದೇ ವಿಷಯಕ್ಕೆ ಪ್ರಶ್ನೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಧನ್ವೀರ್ ಅನ್ನು ಅಭಿಮಾನಿಗಳು ಸುತ್ತುವರೆದಿರುವ ವಿಡಿಯೋ ವೈರಲ್ ಆಗಿದೆ.


Click it and Unblock the Notifications











