'ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೆ'
ಭಾರತದ ಹೆಮ್ಮೆಯ ಚಂದ್ರಯಾನ- 3 ಯಶಸ್ವಿಯಾಗಿದೆ. ದೇಶದ ಬಹುಜನರ ಕನಸು ಸಾಕಾರವಾಗಿದೆ. ಲ್ಯಾಂಡರ್ ವಿಕ್ರಮ್ ಬುಧವಾರ (ಆಗಸ್ಟ್ 23) ಸಂಜೆ ವೇಳೆಗೆ ಚಂದ್ರನ ಮೇಲೆ ಕಾಲಿಟ್ಟಿದೆ. ಈಗ ಲ್ಯಾಂಡರ್‌ನಿಂದ ಹೊರಬಂದ ರೋವರ್ ಪ್ರಗ್ಯಾನ್ ಕೂಡ ಯಶಸ್ವಿಯಾಗಿ ಹೊರಬಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಜನರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ವಿದೇಶಗಳು ಕೂಡ ಭಾರತದ ಈ ಸಾಧನೆಗೆ ಶುಭಾಶಯ ಕೋರಿದ್ದಾರೆ. ಈ ಸಂಭ್ರಮದ ನಡುವೆಯೇ ಅನೇಕ ಮಂದಿ ದೇಶದ ವ್ಯತಿರಿಕ್ತ ಪರಿಸ್ಥಿತಿ ಬಗ್ಗೆ ಕೂಡ ಗಮನ ಸೆಳೆದಿದ್ದಾರೆ. ಚಂದ್ರ ಮೇಲೆ ಹೋಗುವ ತಂತ್ರಜ್ಞಾನದ ಈ ಕಾಲದಲ್ಲಿಯೂ ಮಲದ ಗುಂಡಿಯಲ್ಲಿ ಸಾಯುವವರಿಗಾಗಿ ಯಾವುದೇ ತಂತ್ರಜ್ಞಾನ ಅಭಿವೃದ್ಧಿ ಪಡಿಸದ ಬಗ್ಗೆ ಮೌನ ಮುರಿದಿದ್ದಾರೆ.

ಚಂದ್ರಯಾನ 3 ಸಂಭ್ರಮಕ್ಕೆ ನಟ ಕಿಶೋರ್ ಹೇಳಿದ್ದೇನು?
ದೇಶದ ಬಡಜನರು, ದೀನ ದಲಿತರು ಮತ್ತು ಹೆಣ್ಣೂ ಮಕ್ಕಳ ಮೇಲಾಗುವ ದೌರ್ಜ್ಯದ ಬಗ್ಗೆ ಸದಾ ಧ್ವನಿ ಎತ್ತುವ ಬಹುಭಾಷಾ ನಟ ಕನ್ನಡದ ಕಿಶೋರ್ ಕುಮಾರ್ ಚಂದ್ರಯಾನದ ಯಶಸ್ಸಿನ ಬಗ್ಗೆ ಸಂಭ್ರಮಿಸಬೇಕೇ ಎಂಬುದನ್ನು ಪ್ರಶ್ನಿಸಿ ಹಲವು ಸಂಗತಿಗಳನ್ನು ಬೊಟ್ಟು ಮಾಡಿ ತೋರಿಸಿದ್ದಾರೆ.
"ಚಂದ್ರನ ದಕ್ಷಿಣ ಧುೃವದ ಮೇಲೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದೆ... ಹೆಮ್ಮೆಯಿದೆ, ಎದೆ ಬೀಗಿದೆ... ಆದರೆ .. ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ... ನನ್ನ ದೇಶದ ಕುತಂತ್ರಿ ರಾಜಕಾರಿಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ".
"ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ... ಹಿಂದೂ ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ... ನನ್ನ ಮುಸ್ಲಿಂ ಕ್ರಿಶ್ಚಿಯನ್ ಸಹೋದರ ಸಹೋದರಿಯರ ಮನೆ, ಹೊಟ್ಟೆಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೊಜರುಗಳು ಪುಡಿ ಪುಡಿ ಮಾಡುತ್ತಿರುವ ಚಿತ್ರ... ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಾಶ್ಮೀರದ ಜನತೆಯ ಚಿತ್ರ... ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು ರಾಜಕಾರಿಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ .... ಹೀಗೇ ನೂರಾರು...".

"ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೆ... ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು...???" ಎಂದು ಮಾರ್ಮಿಕವಾಗಿ ಚಂದ್ರಯಾನದ ಯಶಸ್ಸನ್ನು ತಮ್ಮ ಯಶಸ್ಸು ಎಂದು ಬಿಂಬಿಸಿಕೊಳ್ಳಲು ಪ್ರಧಾನಿ ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನಟ ಕಿಶೋರ್ ಕುಮಾರ್ ಅವರ ಸಾಮಾಜಿಕ ಜಾಲತಾಣಗಳಲ್ಲಿನ ಈ ಪೋಸ್ಟ್‌ಗೆ ಪರ ಮತ್ತು ವಿರೋಧ ಕಾಮೆಂಟ್‌ಗಳು ಬರುತ್ತಿವೆ. "ಕಾಮಾಲೆ ಕಣ್ಣಿಗೆ ಹಳದಿ ಮಾತ್ರ ಕಾಣ್ತದೆ. ತಟ್ಟೆಯಲ್ಲಿ ಅನ್ನ ಕೊಟ್ರೂ ಕಾಣುದು.......ನಮ್ಮನ್ನು ಕಾಡುವ ಕಟ್ಟಕಡೆಯ ಪ್ರಶ್ನೆ , ಇಂತ ಜನ್ಮ ಬೇಕಿತ್ತ?" ಎಂದು ಕಿಡಿ ಕಾರಿದ್ದಾರೆ. "ನಿಮ್ಮಂಥ ವಿಕೃತ ಮನಸ್ಥಿಗಳಿಂದಲೇ ಸಮಾಜದ ಸ್ವಾಸ್ತ್ಯ ಕೇಡು ತ್ತಿರುವುದು..... ದೇಶದ ವಿಜಯ ವನ್ನು ಸಹ ಅನುಭವಿಸಲಾಗದ ನಿರ್ಭಗ್ಯ ವಂತರು ನೀವು...... Get well soon...." ಎಂದು ಮತ್ತೊಬ್ಬರು ಬರೆದಿದ್ದಾರೆ.
"ಇದೆ ಪ್ರಜಾಪ್ರಭುತ್ವ.. ಇದನ್ನು ಸಂಭ್ರಮಿಸುವವರಲ್ಲಿ ಕೇವಲ 10% ಜನ ಅನ್ಯಾಯದ ವಿರುದ್ದ ಹೊರಟಕ್ಕೆ ಬೆಂಬಲಿಸದರೆ....ಕಳೆದುಕೊಂಡವರಿಗೆ ನ್ಯಾಯ ಸಿಗುತ್ತದೆ ಅನ್ನುವ ನಂಬಿಕೆಯ ಗರಿ ಚಿಗುರಿದಂತಾಗುತ್ತಿತ್ತು..." ಎಂದು ಮತ್ತೊಬ್ಬರು ನಟ ಕಿಶೋರ್ ಮಾತಿಗೆ ಬೆಂಬಲ ನೀಡಿದ್ದಾರೆ.
ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆದ ಬಳಿಕ 26 ಕೆಜಿ ತೂಕದ ಪ್ರಗ್ಯಾನ್ ರೋವರ್ ಕೂಡ ಚಂದ್ರನ ಮೇಲೆ ಇಳಿಯಲು ಯಶಸ್ವಿಯಾಗಿದೆ. ಈ ಬಗ್ಗೆ ಇಸ್ರೋ ಅಧಿಕೃತವಾಗಿ ಟ್ವೀಟ್ ಮಾಡಿದೆ.


Click it and Unblock the Notifications











