Nikhil Kumaraswamy: ಮಂಡ್ಯ, ರಾಮನಗರ, ಚನ್ನಪಟ್ಟಣ ಸುತ್ತಾಡಿ ಮತ್ತೆ ಗಾಂಧಿನಗರಕ್ಕೆ ಅಭಿಮನ್ಯು!
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುಂಡಿದ್ದಾರೆ. ಈ ಮೂಲಕ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು ಅನುಭವಿಸಿದಂತೆ ಆಗಿದೆ. ಬಹಳ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವಿನ ನಗೆ ಬೀರಿದ್ದಾರೆ.
ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಈ ಬಾರಿ ಕಣಕ್ಕೆ ಇಳಿದಿದ್ದರು. ಶತಾಯ ಗತಾಯ ಈ ಬಾರಿ ಗೆದ್ದೆ ಗೆಲ್ಲುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಜನ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. 2019ರಲ್ಲಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಸ್ಪರ್ಧಿಸಿ ಸೋತಿದ್ದರು. ಅಂದು ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿನ ಬಾವುಟ ಹಾರಿಸಿದ್ದರು.

ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಗೆಲುವು ನಿಶ್ಚಿತ ಎಂದೇ ಭಾವಿಸಲಾಗಿತ್ತು. ಆದರೆ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ಎದುರು ಹೀನಾಯವಾಗಿ ನಿಖಿಲ್ ಸೋಲು ಅನುಭವಿಸಿದ್ದರು. 3ನೇ ಬಾರಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಸೋಲುಂಡು ನಿರಾಸೆ ಅನುಭವಿಸಿದ್ದಾರೆ. ಸಿನಿಮಾ ನಟನಾಗಿ ಮೊದಲಿಗೆ ಗುರ್ತಿಸಿಕೊಂಡಿದ್ದ ನಿಖಿಲ್ ಬಳಿಕ ರಾಜಕೀಯರಂಗ ಪ್ರವೇಶಿಸಿದ್ದರು. ಇದೀಗ ರಾಜಕೀಯವಾಗಿ ಪದೇ ಪದೇ ಸೋತು ಕೊನೆಗೆ ಮತ್ತೆ ಚಿತ್ರರಂಗಕ್ಕೆ ಮರಳುವಂತಾಗಿದೆ.
ಮತ ಎಣಿಕೆಯ ಆರಂಭದ ಸುತ್ತುಗಳಲ್ಲಿ ನಿಖಿಲ್ ಮುನ್ನಡೆ ಸಾಧಿಸಿದ್ದರು. ಆದರೆ 12 ಸುತ್ತಿನ ಬಳಿಕ ಹಿನ್ನಡೆ ಎದುರಾಯಿತು. ಕೊನೆಗೆ ಸೋಲಿನ ಹಾದಿ ಹಿಡಿದರು. ಇದೀಗ ಅಂತಿಮ ಫಲಿತಾಂಶ ಹೊರ ಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ 112642 ಮತ ಗಳಿಸಿ ಗೆದ್ದಿದ್ದಾರೆ. ಎನ್‌ಡಿಎ ಅಭ್ಯರ್ಥಿ ನಿಖಿಲ್ 87229 ಮತಗಳನ್ನು ಮಾತ್ರ ಪಡೆದಿದ್ದಾರೆ. 25413 ಮತಗಳ ಅಂತರದಿಂದ ನಿಖಿಲ್ ಸೋತಿದ್ದಾರೆ.
ಅದ್ಯಾಕೋ ನಿಖಿಲ್ ಪದೇ ಪದೇ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ ನಿಖಿಲ್ ಅವರಿಗೆ ಯಾಕೋ ಅದೃಷ್ಟ ಇಲ್ಲ ಎನಿಸುತ್ತದೆ ಎಂದಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಕೂಡ ನಿಖಿಲ್ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದರು. 'ರೈಡರ್' ಚಿತ್ರದಲ್ಲಿ ನಟಿಸಿದ್ದರು ಪ್ರೇಕ್ಷಕರ ಮನಗೆದ್ದರು.
ಮಂಡ್ಯ ಚುನಾವಣೆ ಬಳಿಕವೇ 'ಕುರುಕ್ಷೇತ್ರ' ಸಿನಿಮಾ ಕೂಡ ಬಿಡುಗಡೆ ಆಗಿತ್ತು. ಅಭಿಮನ್ಯು ಪಾತ್ರದಲ್ಲಿ ಮೋಡಿ ಮಾಡಿದ್ದರು. ಸದ್ಯ 'ಯದುವೀರ್' ಎನ್ನುವ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ರಾಜಕೀಯದತ್ತ ಮುಖ ಮಾಡಿದ ಬಳಿಕ ಸಿನಿಮಾಗಳ ಬಗ್ಗೆ ಆಸಕ್ತಿ ಕಮ್ಮಿ ಆಗಿತ್ತು. ಚನ್ನಪಟ್ಟಣ ಉಪ ಚುನಾವಣೆ ಸೋಲಿನ ಬಳಿಕ ಮತ್ತೆ ಸಿನಿಮಾ ನಟನೆಗೆ ವಾಪಸ್ ಬರ್ತಾರಾ ಕಾದು ನೋಡಬೇಕಿದೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿಯೂ ನಿಖಿಲ್ ಕುಮಾರಸ್ವಾಮಿ ಗುರ್ತಿಸಿಕೊಂಡಿದ್ದಾರೆ. ಈ ಸೋಲಿನ ಬಳಿಕ ಕೂಡ ರಾಜಕೀಯರಂಗದಲ್ಲಿ ಸಕ್ರಿಯವಾಗಿ ಮುಂದುವರೆಯುತ್ತಾರಾ? ಅಥವಾ ಸಿನಿಮಾಗಳಲ್ಲಿ ನಟಿಸುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ. ಚನ್ನಪಟ್ಟಣ ಉಪ ಚುನಾವಣೆ ಕದನ ಕುತೂಹಲ ಮೂಡಿಸಿತ್ತು. ನಿಖಿಲ್ ಗೆಲುವು ಬಹುತೇಕ ಖಚಿತ ಎಂದೇ ಕೆಲವರು ಭಾವಿಸಿದ್ದರು.
ಸಿಪಿ ಯೋಗೇಶ್ವರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ಕೊಟ್ಟಿದ್ದರು. ವೈಯಕ್ತಿಕ ವರ್ಚಸ್ಸಿನ ಜೊತೆಗೆ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಬೆಂಬಲದಿಂದ ಯೋಗೇಶ್ವರ್ ಗೆದ್ದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ನಿಖಿಲ್ ಪರ ತಾತ ಮಾಜಿ ಪ್ರಧಾನಿ ದೇವೇಗೌಡರು, ತಂದೆ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವರು ಆಗಿರುವ ಹೆಚ್.ಡಿ ಕುಮಾರಸ್ವಾಮಿ ಪ್ರಚಾರ ನಡೆಸಿದ್ದರು. ಪತ್ನಿ ರೇವತಿ ಕೂಡ ಪ್ರಚಾರದಲ್ಲಿ ಭಾಗಿ ಆಗಿ ಮತಯಾಚಿಸಿದ್ದರು. ಬಿಡದಿಯ ತಮ್ಮ ತೋಟದ ಮನೆಯಲ್ಲಿ ನಿಖಿಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ.


Click it and Unblock the Notifications











