ನಾನು ಬೆಳಗ್ಗೆಯಿಂದ ಕಣ್ಣೀರು ಹಾಕಲಿಲ್ಲ, ಆ ಕಳಂಕ ಇಲ್ದೆ ಇವತ್ತು ಮಲಗ್ತೀನಿ; ನಿಖಿಲ್
ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಈ ಮೂಲಕ 3ನೇ ಬಾರಿ ಅವರು ಚುನಾವಣೆಯಲ್ಲಿ ಸೋತಂತೆ ಆಗಿದೆ. ಬಿಡದಿಯ ತಮ್ಮ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಸೋಲಿನ ಬಗ್ಗೆ ನಿಖಿಲ್ ಪ್ರತಿಕ್ರಿಯಿಸಿದ್ದಾರೆ. ಕ್ಷೇತ್ರದ ಮತದಾದರರ ತೀರ್ಮಾನಕ್ಕೆ ತಲೆ ಬಾಗುವುದಾಗಿ ತಿಳಿಸಿದ್ದಾರೆ.
ಈ ಬಾರಿ ಚನ್ನಪಟ್ಟಣದಲ್ಲಿ ಶೇ 88ರಷ್ಟು ಮತದಾನವಾಗಿತ್ತು. ಅದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ 112642 ಮತ ಗಳಿಸಿ ಗೆಲುವಿನ ನಗೆ ಬೀರಿದ್ದಾರೆ. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 87229 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಆ ಮೂಲಕ 25413 ಮತಗಳ ಅಂತರದಿಂದ ಸೋಲುವಂತಾಗಿದೆ. ನನಗೆ ಸಿಕ್ಕಿರುವ ಮತಗಳ ಬಗ್ಗೆ ತೃಪ್ತಿಯಿದೆ. ಜನರ ಪ್ರೀತಿ ನನ್ನ ಮೇಲಿದೆ ಎನ್ನುವುದು ಗೊತ್ತಾಗಿದೆ ಎಂದು ನಿಖಿಲ್ ಹೇಳಿದ್ದಾರೆ.

ಈ ಬಾರಿ ಉಪಚುನಾವಣೆಯಲ್ಲಿ ಕೊನೆಯ ಹಂತದಲ್ಲಿ ಎರಡೂ ಪಕ್ಷಗಳ ನಾಯಕರ ತೀರ್ಮಾನದಂತೆ ನಾನು ಸ್ಪರ್ಧಿಸುವಂತಾಯಿತು. ಪಕ್ಷದ ಶಿಸ್ತಿನ ಸಿಪಾಯಿಯಂತೆ ಯುವಕನಿಗೆ ಸ್ಪರ್ಧೆಗೆ ಅವಕಾಶ ಸಿಕ್ಕಿತ್ತು. ಆದರೆ ಫಲಿತಾಂಶ ಎಲ್ಲರಿಗೂ ಆಘಾತ ತಂದಿದೆ ಎಂದು ನಿಖಿಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೊನೆ ಹಂತದಲ್ಲಿ ನಾಣು ಪ್ರಚಾರಕ್ಕೆ ಹೋಗಿದ್ದ ಎಲ್ಲಾ ಕಡೆ ಭರ್ಜರಿ ಬೆಂಬಲ ಸಿಕ್ಕಿತ್ತು. ಪ್ರತಿ ಹಳ್ಳಿಗಳಲ್ಲೂ ಜನರು ಬಹಳ ನನ್ನ ಮೇಲೆ ಪ್ರೀತಿ ವಾತ್ಸಲ್ಯ ತೋರಿಸಿದ್ದಾರೆ ಎಂದು ಚನ್ನಪಟ್ಟಣ ಜನತೆಗೆ ನಿಖಿಲ್ ಧನ್ಯವಾದ ತಿಳಿಸಿದ್ದಾರೆ.
ಚುನಾವಣೆಗಳಲ್ಲಿ ಜನರು ತೀರ್ಮಾಣ ಕೈಗೊಳ್ಳುತ್ತಾರೆ. ಆ ಶಕ್ತಿ ಅವರಿಗೆ ಮಾತ್ರ ಇರುವುದು. ಜನರೇ ತೀರ್ಮಾನಿಸಿದ್ದಾರೆ.ಅದಕ್ಕೆ ನಾನು ತಲೆ ಬಾಗುತ್ತೇನೆ. ಈ ಭಾಗದ ಜನ ಜೆಡಿಎಸ್ ಪಕ್ಷಕ್ಕೆ ಮೊದಲಿನಿಂದಲೂ ಬೆಂಬಲ ಸೂಚಿಸುತ್ತಿದ್ದಾರೆ. ನಮ್ಮ ತಂದೆ, ತಾತ ಎಲ್ಲರನ್ನು ದೊಡ್ಡದಾಗಿ ಬೆಳೆಸಿದ್ದಾರೆ. ಹಾಗಂತ ನಾನು ಇಲ್ಲಿನ ಯುವಕರಿಗೆ ಕೊಟ್ಟ ಮಾತು ಮರೆಯಲ್ಲ. ನಾವು ಇಲ್ಲಿ ಹುಟ್ಟಿರದೇ ಇರಬಹುದು. ಆ ಈ ಜನರ ಜೊತೆಗಿನ ಸಂಬಂಧ ಭಾವನಾತ್ಮಕವಾದದ್ದು ಎಂದು ನಿಖಿಲ್ ಹೇಳಿದ್ದಾರೆ.
ಒಂದು ಸಮುದಾಯದ ಮತಗಳು ನಮಗೆ ಸಿಗಲಿಲ್ಲ. ಆ ಸಮುದಾಯದ ಪರವಾಗಿ ಪಕ್ಷ ನಿಂತರೂ, ಮೀಸಲಾತಿ ಕೊಟ್ಟರೂ ಎಲ್ಲವನ್ನು ತೆಗೆದು ಹಾಕಿ ನಮಗೆ ಸರಿಯಾದ ಸ್ಪಂದನೆ ಕೊಟ್ಟಿಲ್ಲ ಎಂದು ನಿಖಿಲ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಚುನಾವಣೆಯಲ್ಲಿ ಸೋತರೂ ಗೆದ್ದರೂ ಇಲ್ಲೇ ಇರುತ್ತೇನೆ. ಇಲ್ಲಿನ ಜನರ ಪರ ನಿಲ್ಲುತ್ತೇನೆ ಎಂದು ನಿಖಿಲ್ ಪರೋಕ್ಷವಾಗಿ ತಿಳಿಸಿದ್ದರು.
ಚುನಾವಣೆಗೆ ನಿಂತಾಗ ನನ್ನಲ್ಲಿರುವ ಯಾವುದೇ ಭಾವನೆ ಹೊರ ಹಾಕಬಾರದು ಎಂದು ಅಂದುಕೊಂಡಿದ್ದೆ. ನಾನು ಇವತ್ತು ಬೆಳಗ್ಗೆಯಿಂದ ಕಣ್ಣೀರು ಹಾಕಲಿಲ್ಲ. ನಾವು ಕಣ್ಣಲ್ಲಿ ನೀರಾಕಿ ಮತ ಗಿಟ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ನಮಗಿಲ್ಲ. ಕೆಲವೊಮ್ಮೆ ಭಾವನಾತ್ಮಕವಾಗಿ ಕೆಲ ಘಟನೆಗಳು ನಡೆದಾಗ ಅಂತಹ ಸನ್ನಿವೇಶಗಳು ಎದುರಾಗಿರಬಹುದು. ಅವತ್ತು ಅನಿರೀಕ್ಷಿತವಾಗಿ ನಡೀತು. ಬೇರೆ ಉದ್ದೇಶ ಇಲ್ಲ ಎಂದು ನಿಖಿಲ್ ಸ್ಪಷ್ಟಪಡಿಸಿದ್ದಾರೆ.
ರಾಮನಗರ, ಚನ್ನಪಟ್ಟಣದಲ್ಲಿ ನೀವು ಬಲಿ ಪಶು ಆದ್ರಾ? ಎನ್ನುವ ಪ್ರಶ್ನೆಗೆ ನಿಖಿಲ್ ಉತ್ತರಿಸಿದ್ದಾರೆ. ಪಕ್ಷದಿಂದ ನಿಖಿಲ್, ಆದರೆ ನಿಖಿಲ್ ಪಕ್ಷ ಅಲ್ಲ, ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಚುನಾವಣೆಗೆ ಬಂದು ನಿಲ್ಲಬೇಕಾಯಿತು. ಎಲ್ಲರೂ ಹೇಳಿದಾಗ ಒಪ್ಪದೇ ಹಿಂದೆ ಸರಿದಿದ್ದರೆ ಬೇರೆಯದ್ದೇ ಅರ್ಥ ಬರ್ತಿತ್ತು. ಚುನಾವಣೆ ಪೂರಕವಾಗಿಲ್ಲ, ಅದಕ್ಕೆ ಹಿಂದೆ ಸರಿಯುತ್ತಿದ್ದಾರೆ ಎನ್ನುವ ಭಾವನೆ ಬರ್ತಿತ್ತು.
ಸ್ವಾರ್ಥಕ್ಕಾಗಿ ಕುಟುಂಬದವರೆಲ್ಲಾ ಸೇರಿ ಒಬ್ಬ ಕಾರ್ಯಕರ್ತನನ್ನು ಬಲಿಪಶು ಮಾಡ್ತಿದ್ದಾರೆ ಎನ್ನುವ ಕಳಂಕ ಬರುತ್ತಿತ್ತು. ಬಹುಶಃ ಆ ಕಳಂಕ ಮುಕ್ತನಾಗಿ ನಾನು ಇವತ್ತು ಮಲಗುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಸೋಲಿಗೆ ಕುಗ್ಗಲ್ಲ, ಜನರ ಪರ ನಿಲ್ಲುತ್ತೇನೆ, ಜನರ ಸೇವೆ ಮಾಡುತ್ತೇನೆ ಎಂದು ನಿಖಿಲ್ ಹೇಳಿದ್ದು ಮತ್ತೆ ಸಿನಿಮಾಗಳಲ್ಲಿ ನಟಿಸೋ ಬಗ್ಗೆ ಮಾತನಾಡಲಿಲ್ಲ.


Click it and Unblock the Notifications











