ಸುಮಲತಾ - ನಿಖಿಲ್ ಕುಮಾರ್ ಇಬ್ಬರಲ್ಲಿ ಚರಣ್ ರಾಜ್ ಯಾರ ಪರ?
ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವ ಅಂತಿಮ ಪಟ್ಟಿ ಹೊರಗೆ ಬಂದಿಲ್ಲ. ಆದರೆ, ನಟಿ ಸುಮಲತಾ ಅಂಬರೀಶ್ ಹಾಗೂ ನಟ ನಿಖಿಲ್ ಕುಮಾರ್ ಈ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಅಧಿಕವಾಗಿದೆ.
ಮಂಡ್ಯದ ಗಂಡು ಅಂಬರೀಶ್ ಪತ್ನಿ ನಟಿ ಸುಮಲತಾ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಈ ಇಬ್ಬರು ಚಿತ್ರರಂಗದ ಕಲಾವಿದರಾಗಿರುವ ಕಾರಣ ಸ್ಯಾಂಡಲ್ ವುಡ್ ಕಣ್ಣು ಮಂಡ್ಯ ಮೇಲೆ ಇದೆ.
ಚಿತ್ರರಂಗದ ಉಳಿದ ಕಲಾವಿದರು ಈ ಇಬ್ಬರಲ್ಲಿ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವ ಕುತೂಹಲ ಇದೆ. ನಟ ದರ್ಶನ್ ನಂತರ ಚರಣ್ ರಾಜ್ ಸಹ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸುಮಲತಾ ಕರೆದರೆ ಅವರ ಪರ ಚುನಾವಣಾ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಅಂದಹಾಗೆ, ಚರಣ್ ರಾಜ್ ಅವರ ಮಾತುಗಳು ಮುಂದಿವೆ ಓದಿ..

ಸುಮಲತಾ ಅವರಿಗೆ ಸಪೋರ್ಟ್ ಮಾಡುತ್ತೇನೆ
''ನನಗೆ ಅವರ ವೈಯಕ್ತಿಕ ವಿಷಯದ ಬಗ್ಗೆ ತಿಳಿದಿಲ್ಲ. ನಾನು ಪೇಪರ್ ಗಳಲ್ಲಿ ಈ ಬಗ್ಗೆ ಸುದ್ದಿ ನೋಡಿದೆ. ಸುಮಲತಾ ಅವರು ಅಂಬರೀಶ್ ಅಣ್ಣನ ದಾರಿಯಲ್ಲಿ ಹೋಗುತ್ತಿದ್ದಾರೆ. ನಾನು ಅಂಬರೀಶ್ ಅಣ್ಣನ ಮನೆಯಲ್ಲಿ ಊಟ ಮಾಡಿದ್ದೇನೆ. ನನಗೆ ಸುಮಲತಾ ಅವರು ಯಾವತ್ತೆ.. ಯಾವ ಸಮಯದಲ್ಲಿಯೇ ಕರೆದರೂ ಖಂಡಿತ ನಾನು ಹೋಗಿ ಅವರಿಗೆ ಸಪೋರ್ಟ್ ಮಾಡುತ್ತೇನೆ.'' - ಚರಣ್ ರಾಜ್, ನಟ

ಅಂಬರೀಶ್ ಅಣ್ಣನಿಗಾಗಿ ಪ್ರಚಾರ ಮಾಡುತ್ತೇನೆ
''ಅಂಬರೀಶ್ ಅಣ್ಣನಿಗಾಗಿ ಅವರ ಸುಮಲತಾ ಅವರ ಪರ ಪ್ರಚಾರ ಮಾಡುತ್ತೇನೆ. ಅದಲ್ಲದೆ ಸುಮಲತಾ ಅವರು ಸಹ ನನ್ನ ಜೊತೆಗೆ ಎಷ್ಟೊಂದು ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಒಬ್ಬ ಒಳ್ಳೆಯ ಮಹಿಳೆ. ಸುಮಲತಾ ಅವರ ಪರ ಯಾವ ಯಾವ ಕಲಾವಿದರು ಬರುತ್ತಾರೋ ಗೊತ್ತಿಲ್ಲ ಆದರೆ, ಚರಣ್ ರಾಜ್ ಅಂಬರೀಶಣ್ಣನಿಗಾಗಿ ಹೋಗಿ ನಿಂತುಕೊಳ್ಳುತ್ತೇನೆ.'' - ಚರಣ್ ರಾಜ್, ನಟ

ಅಂಬರೀಶ್ ಮಗನ ಸಿನಿಮಾ ನೋಡಬೇಕಿತ್ತು
ಈ ವೇಳೆ ಅಂಬರೀಶ್ ಅವರನ್ನು ನೆನೆದ ಚರಣ್ ರಾಜ್ ''ಅಂಬರೀಶಣ್ಣ ಅವರ ಮಗ ಅಭಿಷೇಕ್ ಅವರ ಸಿನಿಮಾವನ್ನು ಒಂದು ಬಾರಿ ನೋಡಬೇಕಿತ್ತು. ಆದರೆ, ದೇವರ ಇಚ್ಛೆ ಬೇರೆ ಆಯ್ತು. ಅವರನ್ನು ಪ್ರತಿ ಸಲ ಭೇಟಿ ಮಾಡಿದಾಗಲೂ ಮಗನ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಒಟ್ಟಿಗೆ ಸಿನಿಮಾ ನೋಡೋಣ ಎಂದಿದ್ದರು. ಆ ವಿಷಯ ನಿಜ ಆಗದೆ ಇರವುದು ಬೇಸರದ ಸಂಗತಿ.'' ಎಂದರು.

'ರಾಜಣ್ಣನ ಮಗ' ಸಿನಿಮಾದಲ್ಲಿ ಚರಣ್ ರಾಜ್
ನಟ ಚರಣ್ ರಾಜ್ 'ರಾಜಣ್ಣನ ಮಗ' ಸಿನಿಮಾದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ. 'ರಾಜಣ್ಣನ ಮಗ' ಚರಣ್ ರಾಜ್ ಅವರ ಹೊಸ ಸಿನಿಮಾವಾಗಿದೆ. ಫ್ಯಾಮಿಲಿ ಕಮ್ ಮಾಸ್ ಎಂಟಟೈನರ್ ಆಗಿರುವ ಈ ಚಿತ್ರದಲ್ಲಿ ಅಪ್ಪನ ಪಾತ್ರದಲ್ಲಿ ಚರಣ್ ರಾಜ್ ನಟಿಸುತ್ತಿದ್ದಾರೆ.


Click it and Unblock the Notifications











