Kaatera: "ಪೆನ್ನೂ ಇರಲಿ ಮಚ್ಚೂ ಇರಲಿ!": ತರುಣ್ ಏನು ಹೇಳೊಕೆ ಹೊರಟಿದ್ದಾರೆ ಗೊತ್ತಾ?
ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ 'ಕಾಟೇರ' ಸಿನಿಮಾ ಸೆಟ್ಟೇರಿತ್ತು. ಈ ವರ್ಷ ಹಬ್ಬದ ಸಂಭ್ರಮದಲ್ಲಿ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. "ಖಡ್ಗಕ್ಕಿಂತ ಹರಿತವಾದ ಆಯುಧ ಲೇಖನಿ ಅಂತಾರೆ.. ಪೆನ್ನೂ ಇರಲಿ ಮಚ್ಚೂ ಇರಲಿ!" ಎಂದು ಬರೆದು ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ತರುಣ್ ಸುಧೀರ್ 'ಕಾಟೇರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಘಟಾನುಘಟನಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೇಕಡಾ 80ರಷ್ಟು ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ತೆರೆಮೇಲೆ 'ಕಾಟೇರ'ನ ಆರ್ಭಟ ಶುರುವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬರುತ್ತಿದೆ.

ಬರೀ ಪೋಸ್ಟರ್‌ಗಳಿಂದಲೇ 'ಕಾಟೇರ' ಸಿನಿಮಾ ಇನ್ನಿಲ್ಲದ ಕುತೂಹಲ ಮೂಡಿಸುತ್ತಿದೆ. ಹೊಸ ಪೋಸ್ಟರ್ ಕೂಡ ಗಮನ ಸೆಳೆಯಯತ್ತಿದೆ. 'ಕಾಟೇರ' ಸೈಕಲ್ ಏರಿ ಪ್ರಭಾವತಿಯನ್ನು ಮುಂದೆ ಕೂರಿಸಿಕೊಂಡಿದ್ದಾನೆ. ಆಕೆಯ ಕೈಯಲ್ಲಿ ಲೇಖಕ್ ಪುಸ್ತಕ ಇದೆ. ಮತ್ತೊಂದು ಕಡೆ ಸೈಕಲ್ ಹ್ಯಾಂಡಲ್‌ನಲ್ಲಿ ರಕ್ತ ಸುರಿಸುತ್ತಿರುವ ಮಚ್ಚು ತೂಗಾಡುತ್ತಿದೆ. ಈ ಪೋಸ್ಟರ್ ಮೂಲಕ ಒಂದೊಳ್ಳೆ ಸಂಗತಿಯನ್ನು ತಂಡ ದಾಟಿಸಲು ಹೊರಟಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಪ್ರಭಾವತಿ ಓದಿಕೊಂಡ ಹುಡುಗಿ. ಮಚ್ಚು ಗಿಚ್ಚು ಬೇಡ, ಅದರಿಂದ ಸಾಧಿಸುವುದು ಏನು ಇಲ್ಲ ಎನ್ನುವುದು ಆಕೆಯ ಅನಿಸಿಕೆ. ಕಾಟೇರ ಕೂಡ ಅದನ್ನು ಒಪ್ಪುತ್ತಾನೆ. "ಖಡ್ಗಕ್ಕಿಂತ ಹರಿತವಾದ ಆಯುಧ ಲೇಖನಿ ಅನ್ನೋದು ನಿಜವೇ. ಆದರೂ ಕೂಡ ಪೆನ್ನಿನ ಜೊತೆಗೆ ಮಚ್ಚೂ ಇರಲಿ!". ಬೇಕಾಗುತ್ತದೆ". ಎಲ್ಲವನ್ನು ಓದಿನಿಂದಲೇ ಸಾಧಿಸಲು ಸಾಧ್ಯವಿಲ್ಲ, ಕೆಲವೊಮ್ಮೆ ದಂಡಂ ದಶಗುಣಂ ಅನ್ನೋದ ಮಾತನ್ನು ಪಾಲಿಸಬೇಕು ಅನ್ನೋದು 'ಕಾಟೇರ' ಮಾರ್ಗ.
ಕೆಂಪು ಬಣ್ಣದ ಚೂಟಿದಾರ್ ತೊಟ್ಟು ಎರಡು ಜಡೆ ಹಾಕಿಕೊಂಡು ಪ್ರಭಾವತಿಯಾಗಿ ಆರಾಧನಾ ಮಿಂಚಿದ್ದಾರೆ. ಇನ್ನು ಗೀಟು ಶರ್ಟ್, ಪ್ಯಾಂಟ್ ತೊಟ್ಟು ಹಣೆಗೆ ಕುಂಕುಮ ಇಟ್ಟುಕೊಂಡು 'ಕಾಟೇರ'ನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. 70ರ ದಶಕದ ಕಥೆ ಚಿತ್ರದಲ್ಲಿದೆ. 'ಉಳುವವನೆ ಭೂಮಿಯ ಒಡೆಯ' ಕಾಯ್ದೆ ಜಾರಿಯಾದಾಗ ಹಳ್ಳಿಗಳಲ್ಲಿ ನಡೆದ ಸಂಘರ್ಷಗಳನ್ನು ಸೇರಿಸಿ ಸಿನಿಮಾ ಕಟ್ಟಿಕೊಡಲಾಗ್ತಿದೆ. ಅನ್ಯಾಯದ ವಿರುದ್ಧ ತನ್ನದೇ ಹಾದಿಯಲ್ಲಿ ಹೋರಾಡುವ ನಾಯಕ 'ಕಾಟೇರ'ನ ನೋವು ನಲಿವಿನ ಹೂರಣ ಚಿತ್ರದಲ್ಲಿದೆ.
'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ. ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಕುಮಾರ್ ಗೋವಿಂದ್, ಬಿರಾದಾರ್ ಜೊತೆಗೆ ತೆಲುಗುನ ನಟ ಜಗಪತಿ ಬಾಬು ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 50 ವರ್ಷಗಳ ಹಿಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸುತ್ತಿದೆ. ಕಥೆಗೆ ಸೂಕ್ತವಾಗುವ ಹಳೇ ಗುಡಿ ಗೋಪುರ, ಕಟ್ಟಡಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಇನ್ನು ದೊಡ್ಡ ಹಳ್ಳಿ ಸೆಟ್ ನಿರ್ಮಿಸಿ ಚಿತ್ರದ ಮುಖ್ಯ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.
ದಸರಾ ವೇಳೆಗೆ 'ಕಾಟೇರ' ಸಿನಿಮಾ ತೆರೆಗೆ ತರಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಆದರೆ ಚಿತ್ರದ ಮೇಜರ್ ಶೆಡ್ಯೂಲ್ ಬಾಕಿಯಿದೆ. ಜೊತೆಗೆ ಹಾಡುಗಳ ಚಿತ್ರೀಕರಣ ನಡೆಯಬೇಕಿದೆ. ಹಾಗಾಗಿ ನಾಡಹಬ್ಬಕ್ಕೆ 'ಕಾಟೇರ'ನ ಆಗಮನ ಕಷ್ಟ ಎನ್ನಲಾಗುತ್ತಿದೆ. ಇನ್ನು ವಿ. ಹರಿಕೃಷ್ಣ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ನಿರ್ದೇಶಕ ಜಡೇಶ್ ಕುಮಾರ್ ಜೊತೆ ಸೇರಿ ತರುಣ್ ಸುಧೀರ್ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ರೀತಿಯ ಪ್ರಯೋಗಾತ್ಮಕ ಸಿನಿಮಾವನ್ನು ಒಪ್ಪಿಕೊಂಡಿರುವುದು ವಿಶೇಷ ಎನ್ನಲಾಗುತ್ತಿದೆ. ಅದರಲ್ಲೂ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣವಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ 'ಕಾಟೇರ'ನದ ದರ್ಶನಕ್ಕೆ ಕಾಯುತ್ತಿದ್ದಾರೆ.


Click it and Unblock the Notifications











