ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ 1 ರೂ ಮಾನನಷ್ಟ ಮೊಕದ್ದಮೆ ಹೂಡಿದ ಚೇತನ್
ಕರ್ನಾಟಕ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಕನ್ನಡ ನಟ ಚೇತನ್ ಅಹಿಂಸಾ 1 ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕೇಸ್ ದಾಖಲಿಸಿದ್ದಾರೆ.
Recommended Video
ಈ ಸಂಬಂಧ ಜೂನ್ 24 ರಂದು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಪ್ರಕರಣ ಕೈಗೆತ್ತಿಕೊಂಡಿದ್ದು, ಸಚಿವ ಶಿವರಾಮ್ ಹೆಬ್ಬಾರ್‌ಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಜುಲೈ 14 ರಂದು ನಡೆಸಲು ತೀರ್ಮಾನಿಸಿ ಮುಂದೂಡಿದೆ. ಗೌರವಕ್ಕೆ ಧಕ್ಕೆ ತಂದಿರುವ ಸಚಿವ ಶಿವರಾಮ್ ಹೆಬ್ಬಾರ್ 1 ರೂಪಾಯಿ ಮಾನನಷ್ಟ ಪರಿಹಾರ ನೀಡುವುದರ ಜೊತೆಗೆ ಭೇಷರತ್ ಕ್ಷಮೆಯಾಚಿಸಬೇಕು ಎಂದು ಚೇತನ್ ಆಗ್ರಹಿಸಿದ್ದಾರೆ. ಅಷ್ಟಕ್ಕೂ, ಶಿವರಾಮ್ ಹೆಬ್ಬಾರ್ ಹಾಕಿದ ಪೋಸ್ಟ್‌ನಲ್ಲಿ ಏನಿತ್ತು? ಮುಂದೆ ಓದಿ...

ಚೇತನ್ ಹೇಳಿಕೆಗೆ ಖಂಡನೆ
'ಕನ್ನಡ ಚಿತ್ರರಂಗಗಳಲ್ಲಿ ನಟಿಸುತ್ತಿರುವ ಚೇತನ್ ಎನ್ನುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ಗಮನಕ್ಕೆ ಬಂದಿತು. ಮೊದಲಿಗೆ, ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ.' ಎಂದು ಜೂನ್ 11 ರಂದು ಸಚಿವ ಶಿವರಾಮ್ ಹೆಬ್ಬಾರ್ ಪೋಸ್ಟ್ ಹಾಕಿದ್ದರು.

ಚೇತನ್‌ರನ್ನು ನಿಂದಿಸಿದ್ದ ಸಚಿವ
''ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹದು. ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜೀ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.'' ಎಂದಿದ್ದರು.

ಚೇತನ್ ವಿರುದ್ಧ ದೂರು
ಚೇತನ್ ಬ್ರಾಹ್ಮಣಿಕೆ ಹಾಗೂ ಬ್ರಾಹ್ಮಣತ್ವ ಭಯೋತ್ವಾದಕತ್ವ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವಾಗಿದೆ. ಬ್ರಾಹ್ಮಣ ಸಮುದಾಯದ ಬಳಿ ಬೇಷರತ್ ಕ್ಷಮೆ ಕೇಳಬೇಕು ಎಂದು ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹಲಸೂರು ಪೊಲೀಸ್ ಠಾಣೆಯಲ್ಲಿ ಚೇತನ್ ವಿರುದ್ಧ ದೂರು ದಾಖಲಿಸಿದ್ದರು. ಇದೇ ಸಂಬಂಧ ವಿಪ್ರ ಯುವ ವೇದಿಕೆಯ ಅಧ್ಯಕ್ಷ ಪವನ್ ಕುಮಾರ್ ಎಂಬುವವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಿಚಾರಣೆ ಎದುರಿಸಿದ ನಟ ಚೇತನ್
ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಅನ್ವಯ ನಟ ಚೇತನ್‌ರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗಿದೆ. ಎರಡು ಬಾರಿ ವಿಚಾರಣೆ ಎದುರಿಸಿರುವ ಚೇತನ್, ''ತನ್ನ ಹೇಳಿಕೆಗೆ ಬದ್ದನಾಗಿದ್ದೇನೆ, ನಾನು ಯಾವುದೇ ಜಾತಿ-ಸಮುದಾಯದ ವಿರುದ್ಧ ಮಾತನಾಡಿಲ್ಲ, ವ್ಯವಸ್ಥೆ ವಿರುದ್ಧ ನನ್ನ ಹೋರಾಟ, ಕಾನೂನಿನ ಅಡಿಯಲ್ಲಿ ಈ ಹೋರಾಟ ಮುಂದುವರಿಸುತ್ತೇನೆ'' ಎಂದು ತಿಳಿಸಿದ್ದರು.


Click it and Unblock the Notifications











