''ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದು ನಂಬ್ತೀವಿ,ಆದರೆ ದರ್ಶನ್ ಕೊಲೆ ಆರೋಪಿ ಅಂದ್ರೆ ನಂಬಲ್ಲ''-ಚೇತನ್ ..!
''ಚೇತನ್'' ಗೊತ್ತಲ್ಲಾ.. ? ''ಆ ದಿನಗಳು'' ಚಿತ್ರದ ಮೂಲಕ ಹೆಸರು ಮಾಡಿ ಹೀರೋ ಅನ್ನಿಸಿಕೊಂಡವರು. ಬಹುಶಃ ಆ ದಿನಗಳು ತಂದುಕೊಟ್ಟ ಕೀರ್ತಿಯನ್ನು ಚೇತನ್ ಸರಿಯಾಗಿ ಬಳಸಿಕೊಂಡಿದ್ದಿದ್ದರೆ ಈಷ್ಟೊತ್ತಿಗೆ ಕನ್ನಡದ ಪ್ರಮುಖ ಹೀರೋಗಳಲ್ಲಿ ನಿಸ್ಸಂಶಯವಾಗಿ ಚೇತನ್ ಒಬ್ಬರಾಗುತ್ತಿದ್ದರು.
ಆದರೆ, ಚೇತನ್ ತಮ್ಮ ಟ್ರ್ಯಾಕ್ ಬದಲಿಸಿದರು. ಅಮೆರಿಕದಲ್ಲಿ ಹುಟ್ಟಿಬೆಳೆದು ಬಂದ ಚೇತನ್ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡು ಪ್ರಗತಿಪರ ಚಿಂತಕರಾದರು. ಭಾಷಣ ಮಾಡುವುದನ್ನೂ ಕಲಿತರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಅಂಜದೇ ಅಳುಕದೇ ಹೇಳಲು ಶುರು ಮಾಡಿದರು. ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದರು. ಎರಡೆರಡು ಬಾರಿ ಜೈಲಿಗೆ ಕೂಡ ಹೋಗಿ ಬಂದರು.

ಇಂಥಾ ಚೇತನ್ ಅತ್ತ ದರ್ಶನ್ ತಮಗೆ ಮನೆಯೂಟ ಬೇಕು ಎಂದು ಪಟ್ಟು ಹಿಡಿದ ಬೆನ್ನಲ್ಲಿಯೇ, ತಮ್ಮ ಜೈಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಸ್ಟಾರ್ ಗಳಿಗೆ ಯೋಗ್ಯತೆ ಮೀರಿ ತುಂಬಾ ಬಿಲ್ಡಪ್ ಸಿಕ್ಕಿದೆ ಎಂದಿದ್ದಾರೆ.
ಹೌದು, ಮಾಧ್ಯಮದವರ ಜೊತೆ ನಿನ್ನೆ ಮಾತನಾಡಿರುವ ಚೇತನ್, ಚಿತ್ರರಂಗದಲ್ಲಿ ಸ್ಟಾರ್‌ಗಳಿಗೆ ನಾವು ಹೆಚ್ಚು ಬಿಲ್ಡಪ್ ಕೊಡುತ್ತೇವೆ. ಕಾರಣ ಇಲ್ಲದಿದ್ರು ಚಿತ್ರದ ಗೆಲುವನ್ನೂ ಅವರಿಗೆ ಅರ್ಪಿಸುತ್ತೇವೆ ಎಂದಿದ್ದಾರೆ. ಸಿನಿಮಾ ಹೀರೋಗಳು ಸ್ಟಾರ್‌ಗಳಾಗುವುದಕ್ಕೆ ಕಾರಣ ನಿರ್ದೇಶಕ-ನಿರ್ಮಾಪಕ-ಬರಹಗಾರ ಎಂದಿದ್ದಾರೆ.

ಇನ್ನೂ.. ಸ್ಟಾರ್ ಕಲ್ಚರ್ ಇದ್ದಾಗ ಇಂತಹವರಿಗೆ ವ್ಯಾಲ್ಯೂ ಕೊಡುತ್ತೇವೆ. ಸಿನಿಮಾರಂಗದ ಆಸ್ತಿ ಅಂತ ಮಾಡಿಬಿಡುತ್ತೇವೆ. ಆದರೆ, ಸಿನಿಮಾರಂಗದ ನಿಜವಾದ ಆಸ್ತಿ ನಮ್ಮ ಕಲೆ, ಬರವಣಿಗೆ, ಒಳ್ಳೆ ಸಂದೇಶ. ಅದನ್ನು ಬಿಟ್ಟು ಯಾವುದೋ ಸ್ಟಾರ್ ಸಿನಿಮಾರಂಗದ ಆಸ್ತಿ ಅಲ್ಲ ಎಂದಿರುವ ಚೇತನ್, ರಾಜ್ ಕುಮಾರ್, ಎಂಪಿ ಶಂಕರ್, ಶಂಕರ್ ನಾಗ್ ಸಿನಿಮಾರಂಗಕ್ಕೆ ಒಳ್ಳೆ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇಂದಿನ ಸಿನಿಮಾ ಸ್ಟಾರ್ ಗಳಿಗೆ ಯೋಗ್ಯತೆ ಮೀರಿ ತುಂಬಾ ಬಿಲ್ಡಪ್ ಸಿಕ್ಕಿದೆ ಎಂದು ಕಿಡಿಯನ್ನೂ ಕಾರಿರುವ ಚೇತನ್, ಹೀರೋಗಳು ಸತ್ತಾಗ ಸ್ಮಾರಕಗಳನ್ನು ಅವರೇ ಮಾಡಿಕೊಳ್ಳಲಿ, ಅವರು ಮಾಡಿರುವ ಸಿನಿಮಾಗಳಿಗೆ ಸಂಭಾವನೆ ಪಡೆದಿರುತ್ತಾರೆ. ಕೋಟಿ ಕೋಟಿ ಹಣ ಅವರ ಬಳಿ ಇರುತ್ತೆ. ಕೋಟಿ ಕೋಟಿ ಹಣ ಇರುತ್ತೆ ಅದನ್ನು ಬಿಟ್ಟು ನಮ್ಮ ಸರ್ಕಾರದ ತೆರಿಗೆ ಹಣವನ್ನು ಕೊಡೋದು ಸರಿಯಲ್ಲ ಎಂದಿದ್ದಾರೆ.

ಮುಂದುವರೆದು ಮಾತನಾಡಿರುವ ಚೇತನ್, ಚಿತ್ರರಂಗದಲ್ಲಿ ಮೌನ ಬಿಟ್ಟು ಸತ್ಯ ಹೇಳುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದಿದ್ದಾರೆ. ಸದ್ಯ ಈಗ್ಲಾದ್ರೂ ಮಾತಾಡ್ತಿದ್ದಾರೆ ಒಳ್ಳೆ ಬೆಳವಣಿಗೆ ಎಂದು ತಮಗೆ ತಾವೇ ಸಮಾಧಾನವನ್ನೂ ಮಾಡಿಕೊಂಡಿದ್ದಾರೆ. ಇನ್ನೂ.. ರೇಣುಕಾಸ್ವಾಮಿ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ದು ನಂಬ್ತೀವಿ, ಆದರೆ ಅದೇ ದರ್ಶನ್ ಕೊಲೆ ಆರೋಪಿ ಅಂದ್ರೆ ನಂಬಲ್ಲ, ಹೀಗಾಗಿಯೇ ಸ್ಟಾರ್ ಸಂಸ್ಕೃತಿ ಅನ್ನೋದು ಅಳಿಸಬೇಕು ಎಂದಿರುವ ಚೇತನ್ ಅಹಿಂಸಾ, ದರ್ಶನ್ ಅವರ ಘಟನೆ ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆ, ಚಿತ್ರರಂಗದ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ. ದರ್ಶನ್ ಆರೋಪಿಯಷ್ಟೇ ಅಪರಾಧಿಯಲ್ಲ ಆದರೆ ಅವರ ಮೇಲೆ ಗಂಭೀರ ಆರೋಪ ಇದೆ ಎಂದು ಕೂಡ ಹೇಳಿದ್ದಾರೆ.
ಇದೇ ಸಮಯದಲ್ಲಿ ತಾವು ಜೈಲಿನಲ್ಲಿದ್ದ ಆ ದಿನಗಳನ್ನು ನೆನಪು ಮಾಡಿಕೊಂಡ ಚೇತನ್, ಸೆಲ್ ಅಲ್ಲಿ ಇರ್ಬೋದು ಆದ್ರೆ ಬ್ಯಾರೆಕ್ಸ್ ಅಲ್ಲಿ ಇರುವುದು ಕಷ್ಟ ಎಂದಿದ್ದಾರೆ. ನಾನು ಹೋರಾಟದ ಮೇಲೆ ಎರಡು ಸಲ ಜೈಲಿಗೆ ಹೋಗಿದ್ದೆ. ಮೊದಲ ಬಾರಿ ನಾನು ಜೈಲಿಗೆ ಹೋದಾಗ 6 ಜನರಿರುವ ಸೆಲ್ ನಲ್ಲಿ ಹಾಕಿದ್ರು. ಎರಡನೇ ಬಾರಿ 40 ಜನರಿರುವ ಬ್ಯಾರೆಕ್ಸ್ ನಲ್ಲಿ ಹಾಕಿದ್ರು ಎಂದಿರುವ ಚೇತನ್, ಜೈಲಿನ ಊಟ ನನಗೆ ಯಾವತ್ತು ಸಮಸ್ಯೆಯಾಗಲಿಲ್ಲ ಬದಲಿಗೆ ಜೈಲೂಟ ನನಗೆ ಸಖತ್ ಇಷ್ಟವಾಯಿತು ಎಂದಿದ್ದಾರೆ.

ಜೈಲಿನಲ್ಲಿ ಮುದ್ದೆ ಸ್ವಲ್ಪ ಗಟ್ಟಿ ಇರುತ್ತೆ, ಆದ್ರೂ ಪರವಾಗಿಲ್ಲ ಎಂದಿರುವ ಚೇತನ್, ನನ್ನ 39ನೇ ಹುಟ್ಟುಹಬ್ಬವನ್ನು ನಾನು ಜೈಲಿನಲ್ಲಿ ಆಚರಿಸಿಕೊಂಡೆ ಆಗ ಪುಳಿಯೋಗರೆ ಮಾಡಿದ್ದರು, ಆಗ ತುಂಬಾ ಚೆನ್ನಾಗಿತ್ತು. ಪುಳಿಯೋಗರೆ ಅಷ್ಟೇ ಅಲ್ಲ ಚಿತ್ರಾನ್ನ, ಅನ್ನ ಸಾಂಬಾರು, ಎಲ್ಲವೂ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ದರ್ಶನ್ ಅವರಿಗೆ ಜೈಲೂಟ ಯಾಕೆ ಇಷ್ಟವಾಗ್ತಿಲ್ಲ ಅನ್ನೋದು ಗೊತ್ತಿಲ್ಲ ಎಂದು ಕೂಡ ಚೇತನ್ ಅಹಿಂಸಾ ಹೇಳಿದ್ದಾರೆ. ಜೈಲಿಂದ ಹೊರ ಬಂದ ನಂತರ ದರ್ಶನ್ ಬದಲಾಗಲಿ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











