ಅಂಬಿ ಯಾರ ಬಳಿಯೂ ಕೈಚಾಚಿಲ್ಲ; ಸ್ಮಾರಕಕ್ಕೆ ಸುಮಲತಾ ಸರ್ಕಾರದ ಬಳಿ ಕೈಚಾಚಿದ್ದಾರೆ ಎಂದ ಚೇತನ್ ಅಹಿಂಸಾ!
ನಿನ್ನೆಯಷ್ಟೇ ( ಮಾರ್ಚ್ 27 ) ಬೆಂಗಳೂರಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಸ್ಮಾರಕ ಉದ್ಘಾಟನೆಗೊಂಡಿದೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕ ಉದ್ಘಾಟಿಸಿ ಜತೆಗೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ನಾಮಕರಣ ಮಾಡಿರುವ ನಾಮಫಲಕವನ್ನೂ ಸಹ ಅನಾವರಣಗೊಳಿಸಿದರು.
ಹೌದು, ಮೌರ್ಯ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್‌ವರೆಗಿನ ರೇಸ್ ಕೋರ್ಸ್ ರಸ್ತೆ ನಿನ್ನೆಯಿಂದ ಡಾ ಎಂ ಎಚ್ ಅಂಬರೀಶ್ ರಸ್ತೆಯಾಗಿದೆ. ಹೀಗೆ ನಿನ್ನೆ ನಡೆದ ಈ ಎರಡು ಕಾರ್ಯಕ್ರಮಗಳು ಅಂಬರೀಶ್ ಕುಟುಂಬ ಹಾಗೂ ಆಪ್ತ ವಲಯ ಮತ್ತು ಅಂಬರೀಶ್ ಅಭಿಮಾನಿಗಳ ಪಾಲಿಗೆ ದೊಡ್ಡ ಮಟ್ಟದ ಸಂತಸವನ್ನು ನೀಡಿದೆ. ನಿನ್ನೆ ಕಾರ್ಯಕ್ರಮ ನಡೆದ ಬಳಿಕ ಕಣ್ಣೀರು ಹಾಕಿದ ಸುಮಲತಾ ಪತಿ ಅಂಬರೀಶ್ ಅವರನ್ನು ನೆನೆದು ಮಾತನಾಡಿದರು.

ಅಂಬರೀಶ್ ಅವರನ್ನು ಹತ್ತು ವರ್ಷಗಳಿಂದ ಸಾಕಿ ಬೆಳೆಸಿದ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ಇದು ಅಂಬರೀಶ್ ಐವತ್ತು ವರ್ಷಗಳನ್ನು ಪೂರೈಸಿದ ವರ್ಷವಾಗಿದೆ. ಅಭಿಮಾನಿಗಳು ಈ ದಿನ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದರು. ಕರ್ನಾಟಕ ಸರ್ಕಾರದ ಅನುದಾನದ ಅಡಿಯಲ್ಲಿ ಈ ಸುಂದರ ಸ್ಮಾರಕ ನಿರ್ಮಾಣವಾಗಿದೆ. ನಾನು ಅಭಿಮಾನಿಗಳಿಗೆ ಹೇಳ್ತಾ ಇದ್ದೆ. ಆ ದಿನ ಇಂದು ಬಂದಿದೆ. ಈ ಸಂದರ್ಭದಲ್ಲಿ ನಾನು ಓರ್ವರನ್ನು ಸ್ಮರಿಸೋಕೆ ಇಷ್ಟಪಡ್ತೀನಿ. ಅವರೇ ಮಾಜಿ ಸಿಎಂ ಯಡಿಯೂರಪ್ಪನವರು. ನಾವು ಬೇಡಿಕೆಯನ್ನು ಇಟ್ಟಾಗ ಸ್ವಲ್ಪವೂ ತಡ ಮಾಡದೇ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಕೊಟ್ಟರು ಎಂದು ಸುಮಲತಾ ಅಂಬರೀಶ್ ಮಾತನಾಡಿದರು.
ಇನ್ನೂ ಮುಂದುವರಿದು ಮಾತನಾಡಿದ ಸುಮಲತಾ ಅಂಬರೀಶ್ 12 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಅಂಬರೀಶ್ ಅವರು ಯಾವತ್ತೂ ತಮಗಾಗಿ ಏನನ್ನೂ ಬೇಕು ಎಂದು ಬಯಸಿದವರಲ್ಲ. ಯಾರ ಬಳಿಯೂ ಕೈ ಚಾಚಿದವರಲ್ಲ. ಅವರದ್ದು ಕೊಟ್ಟ ಕೈ. ತಗೊಳ್ಳೊ ಕೈ ಅಲ್ಲ ಎಂದು ಹೇಳಿಕೆ ನೀಡಿದ್ದರು.
ಸದ್ಯ ಈ ಹೇಳಿಕೆಯನ್ನೇ ಗುರಿಯನ್ನಾಗಿಸಿ ನಟ ಚೇತನ್ ಅಹಿಂಸಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸುಮಲತಾ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಅಂಬರೀಶ್ ಯಾರ ಬಳಿಯೂ ಕೈಚಾಚಿಲ್ಲ ಅಂತಾರೆ, ಈಗ ಅವರ ಸ್ಮಾರಕಕ್ಕಾಗಿ ಸುಮಲತಾ ಅವರು ಸರ್ಕಾರದ ಬಳಿ ಕೈಚಾಚಿದ್ದಾರೆ ಎಂದು ಚೇತನ್ ಅಹಿಂಸಾ ಸುಮಲತಾ ಅವರ ಕಾಲನ್ನು ಎಳೆದಿದ್ದಾರೆ.

"ಅಂಬರೀಶ್ ಸ್ಮಾರಕಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ & 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ 'ಕೈ ಚಾಚಿ' ಪಡೆದಿರುವುದು ವಿಪರ್ಯಾಸವಾಗಿದೆ. ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತ 23.4 ಕೋಟಿ ರೂ.ಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ? ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ?" ಎಂದು ಸುಮಲತಾ ಹೇಳಿಕೆ ವಿರುದ್ಧ ಬರೆದುಕೊಂಡಿದ್ದಾರೆ.
ಸದ್ಯ ಈ ಪೋಸ್ಟ್ ಕುರಿತು ಪರ ಹಾಗೂ ವಿರೋಧಗಳು ವ್ಯಕ್ತವಾಗುತ್ತಿವೆ. ಕೆಲವರು ಚೇತನ್ ಅಹಿಂಸಾ ವಾದ ಸರಿ ಇದೆ. ಶ್ರೀಮಂತರಿಗೆ ಸ್ಮಾರಕ ಕಟ್ಟಿಕೊಡಲು ಸರ್ಕಾರವೇಕೆ ತೆರಿಗೆದಾರರ ಕೋಟಿ ಕೋಟಿ ಹಣವನ್ನು ನೀಡಬೇಕು, ಅವರೇ ತಮ್ಮ್ ಸ್ವಂತ ಹಣದಿಂದ ಕಟ್ಟಿಸಿಕೊಳ್ಳಬಹುದಲ್ವಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಚೇತನ್ ಅಹಿಂಸಾ ವಿರುದ್ಧ ಕಿಡಿಕಾರಿದ್ದಾರೆ. ಅಂಬರೀಶ್ ಕುಟುಂಬದ ಬಗ್ಗೆಯೇ ಇಷ್ಟು ಕೆಳಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ ಎಂದೆಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications











