ಪುನೀತ್ ರಾಜ್‌ಕುಮಾರ್ ಮನೆ ಮನೆಗೂ ಮಗ, ನಾಡಿನಲ್ಲಿ ಅವರನ್ನು ಗೌರವಿಸದವರೇ ಇಲ್ಲ: ಸಿದ್ದರಾಮಯ್ಯ
ಪುನೀತ್ ರಾಜ್ ಕುಮಾರ್ ಮನೆ ಮನೆಯ ಮಗ. ಅವರನ್ನು ಗೌರವಿಸದವರೇ ಇಲ್ಲ. ಅವರನ್ನು ಕಳೆದುಕೊಂಡಿರುವುದು ಇಡೀ ಕರುನಾಡಿಗೆ ಆಗಿರುವ ನಷ್ಟ. ಆ ನಷ್ಟವನ್ನು ತುಂಬಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಸೋಮವಾರ ಅಕ್ಟೋಬರ್ 16 ರಂದು ಪಿ.ಆರ್.ಕೆ. ಸ್ಟುಡಿಯೋಸ್ ಹಾಗೂ N3K ಡಿಸೈನ್ ಸ್ಟುಡಿಯೋ ವತಿಯಿಂದ ಬೆಂಗಳೂರಿನಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರ ಸಂಗ್ರಹಣೀಯ ಶಿಲ್ಪಗಳನ್ನು ಅನಾವರಣಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪುನೀತ್ ರಾಜ್ ಕುಮಾರ್ ಅವರ ಸ್ಮಾರಕ ಪುನರಾಭಿವೃದ್ಧಿ ಸಂಬಂಧ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಮನವಿಗೆ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಉತ್ತಮ ನಟ ಹಾಗೂ ಮಾನವೀಯತೆಯುಳ್ಳ ವ್ಯಕ್ತಿಯನ್ನು ನಾಡು ಕಳೆದುಕೊಂಡಿದೆ
ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, "ನನಗೂ ಪುನೀತ್ ರಾಜ್‌ಕುಮಾರ್ ಅವರು ಬಹಳ ಗೌರವದಿಂದ ಕಾಣುತ್ತಿದ್ದರು. ದೊಡ್ಡವರನ್ನು ,ಸಹಕಲಾವಿದರನ್ನು ಗೌರವದಿಂದ ಕಾಣುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಕಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರನ್ನು ಕಳೆದುಕೊಂಡಿರುವುದು ಇಡೀ ಕರುನಾಡಿಗೆ ಆಗಿರುವ ನಷ್ಟ. ಆ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಉತ್ತಮ ನಟ ಹಾಗೂ ಮಾನವೀಯತೆಯುಳ್ಳ ವ್ಯಕ್ತಿಯನ್ನು ನಾಡು ಕಳೆದುಕೊಂಡಿದೆ. ಅವರ ಪ್ರತಿಮೆಯಿಂದ ಪುನೀತ್ ಅವರನ್ನು ಇನ್ನಷ್ಟು ಸ್ಮರಿಸುವ ಕೆಲಸವಾಗಿದೆ" ಎಂದು ಹೇಳಿದ್ದಾರೆ.
ಡಾ.ಪುನೀತ್ ರಾಜ್‌ಕುಮಾರ್ ಅವರದ್ದು ಅಪರೂಪದ ವ್ಯಕ್ತಿತ್ವ
"ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನು ಇಂದು ಅನಾವರಣ ಮಾಡಲಾಗಿದೆ. ಡಾ.ಪುನೀತ್ ರಾಜ್‌ಕುಮಾರ್ ಅವರು ಅಪರೂಪದ ವ್ಯಕ್ತಿತ್ವ. ಸರಳ, ಸಜ್ಜನಿಕೆ, ವಿನಯ ಕಾಣುವುದು ವಿರಳ. ಸಾಮಾನ್ಯ ಜನರು, ಸಂಕಷ್ಟದಲ್ಲಿದವರಿಗೆ ಸ್ಪಂದಿಸುವ ಉದಾತ್ತ ಭಾವನೆಯ ಪುನೀತ್ ರಾಜ್‌ಕುಮಾರ್ ಅವರಿಗಿದ್ದ ಅಭಿಮಾನಿ ಬಳಗ ಬಹಳ ದೊಡ್ಡದು. ಇವರ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾಗ ಜನರು ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡಷ್ಟು ದು:ಖಿಸಿದ್ದರು" ಎಂದು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.
"ಪುನೀತ್ ಕರ್ನಾಟಕ ಜನರ ಮನಸ್ಸನ್ನು ಗೆದಿದ್ದರು. ರಾಜ್ಯದ ಪ್ರತಿ ಮನೆಯಲ್ಲಿಯೂ ಕೂಡ ಪುನೀತ್‌ರ ಭಾವಚಿತ್ರವಿದ್ದು, ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಬಹುಶ: ಪುನೀತ್ ತರಹದ ಇನ್ನೊಬ್ಬ ವ್ಯಕ್ತಿಯನ್ನು ಕಾಣುವುದು ಕಷ್ಟ. ರಾಜಕುಮಾರ್ ಕುಟುಂಬದವರು ಸದಾ ವಿನಯವಂತರು. ರಾಜಕುಮಾರ್ ಮತ್ತು ಅವರ ಮಕ್ಕಳು ಮಾನವೀಯತೆಯ ಪ್ರತಿರೂಪವಾಗಿದ್ದಾರೆ. ಮಾನವೀಯತೆಯುಳ್ಳವರು ಮತ್ತೊಬ್ಬರನ್ನು ಪ್ರೀತಿ ಗೌರವಗಳಿಂದ ಕಾಣುತ್ತಾರೆ" ಎಂದಿದ್ದಾರೆ.

ರಾಜ್‌ಕುಮಾರ್ ಕುಟುಂಬ ಕೆಟ್ಟದ್ದನ್ನು ಬಯಸಿಲ್ಲ
ವರನಟ ರಾಜ್ ಕುಮಾರ್ ಕುಟುಂಬದ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, " ರಾಕ್ ಕುಮಾರ್ ಕುಟುಂಬ ಎಂದಿಗೂ ಕೆಟ್ಟದ್ದನ್ನು ಬಯಸಿಲ್ಲ. ಕೆಟ್ಟ ಪದ ಬಳಸಿಲ್ಲ. ಪುನೀತ್ ರಾಜಕುಮಾರ್ ಅವರು, ಅವರ ತಂದೆ ರಾಜ್ ಕುಮಾರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದರು. ರಾಜ್ ಕುಮಾರ್ ಜನಪ್ರಿಯ ಮೇರು ನಟ. ಪುನೀತ್ ತೀರಿಕೊಂಡಾಗ ಜನರ ಭಾವನೆಗಳನ್ನು ಕಂಡಾಗ, ರಾಜ್ ಕುಮಾರ್ ಅವರಿಗಿಂತಲೂ ಜನಪ್ರಿಯರಾಗಿದ್ದರು ಎಂಬ ಭಾವನೆ ಬಂದಿತು" ಎಂದು ಸಿಎಂ ಹೇಳಿದ್ದಾರೆ.
'ಪುನೀತ್ ಮರಣ ಹೊಂದಿದಾಗ ನಮ್ಮ ಮನೆಯಲ್ಲಿಯೇ ಯಾರೋ ಒಬ್ಬರು ತೀರಿಕೊಂಡಿದ್ದಾರೆ ಎಂಬಂತಿತ್ತು. ಎಲ್ಲಾ ಊರುಗಳಲ್ಲಿ ಪ್ರತಿಮೆ ಸ್ಥಾಪಿಸಿ, ಕಟೌಟ್ ಹಾಕಿ ಗೋಳಾಡಿದ್ದು ಕಂಡಾಗ ಪುನೀತ್ ಅವರ ಜನಪ್ರಿಯತೆ, ಅಪಾರ ಅಭಿಮಾನಿಗಳನ್ನು ಪಡೆದಿದ್ದರು ಎಂದು ತಿಳಿಯುತ್ತದೆ. ಬಹಳ ಬೇಗ ನಮ್ಮನ್ನು ಅಗಲಿದರು. ಅವರು ಬದುಕಿದ್ದರೆ, ನಾವು ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು. ಅವರ ಕುಟುಂಬದವರಿಗೆ ಅವರ ಸಾವಿನಿಂದಾದ ನೋವನ್ನು ಭರಿಸುವ ಶಕ್ತಿ ದೇವರು ನೀಡಬೇಕು. ಪುನೀತ್ ರಾಜ್ ಕುಮಾರ್ ಮನೆ ಮನೆಯ ಮಗ. ಅವರನ್ನು ಗೌರವಿಸದವರೇ ಇಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


Click it and Unblock the Notifications











