"25 ವರ್ಷಗಳಲ್ಲಿ ಕಚ್ಚೋಕೆ, ಬೊಗಳೊಕೆ ಬಂದ ನಾಯಿಗಳನ್ನು ತುಳ್ಕೊಂಡು ಆನೆ ನಡೀತಿದೆ": ಧನ್ವೀರ್
ಚಿತ್ರರಂಗದಲ್ಲಿ ನಟ ದರ್ಶನ್ 25 ವರ್ಷ ಪೂರೈಸಿದ ಸಂಭ್ರಮವನ್ನು ಶ್ರೀರಂಗಪಟ್ಟದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಬಹಳ ದೊಡ್ಡಮಟ್ಟದಲ್ಲಿ ನಡೆದ ಸಮಾರಂಭದಲ್ಲಿ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿದ್ದರು. ಈ ಸಂಭ್ರಮದಲ್ಲಿ ದರ್ಶನ್ ಆಪ್ತರಾದ ಧನ್ವೀರ್ ಗೌಡ, ಚಿಕ್ಕಣ್ಣ, ಝೈದ್‌ಖಾನ್, ವಿನೋದ್ ಪ್ರಭಾಕರ್ ಸೇರಿದಂತೆ ಹಲವರು ಭಾಗಿ ಆಗಿದ್ದರು.
ಅಸಿಸ್ಟೆಂಟ್ ಕ್ಯಾಮರಾಮನ್ ಆಗಿ ಚಿತ್ರರಂಗ ಪ್ರವೇಶಿಸಿದ ದರ್ಶನ್ ಇವತ್ತು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಈ ಹಾದಿಯಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ತಮ್ಮ ಹಾದಿಯಲ್ಲಿ ಸಾಗಿಬಂದಿದ್ದಾರೆ. ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಪುತ್ರ ಆಗಿದ್ದರೂ ದರ್ಶನ್‌ಗೆ ಅಷ್ಟು ಸುಲಭವಾಗಿ ಅವಕಾಶಗಳು ಸಿಗಲಿಲ್ಲ.

ಸಾಕಷ್ಟು ಅವಮಾನ, ನೋವು ಎದುರಿಸಿ'ಮೆಜೆಸ್ಟಿಕ್' ಚಿತ್ರದಲ್ಲಿ ಹೀರೊ ಆಗಿ ನಟಿಸಿ ಗೆದ್ದರು. ಬಳಿಕ ಹಿಂತಿರುಗಿ ನೋಡದೇ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೇರಿದರು. ದರ್ಶನ್ ಪರಮಾಪ್ತ ಇಂಡುವಾಳು ಸಚ್ಚಿದಾನಂದ ಈ ಬೆಳ್ಳಿಪರ್ವ ಕಾರ್ಯಕ್ರಮ ಆಯೋಜಿಸಿದ್ದರು. ಚಿಕ್ಕಣ್ಣ, ಧನ್ವೀರ್, ವಿನೋದ್ ಪ್ರಭಾಕರ್ ಎಲ್ಲರೂ ತಮ್ಮದೇ ಶೈಲಿಯಲ್ಲಿ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದನ್ನು ವಿಶ್ಲೇಷಿಸಿದ್ದರು.
ಯುವ ನಟ ಧನ್ವೀರ್ ಗೌಡ ಮಾತನಾಡಿ "ಅಣ್ಣ ಚಿತ್ರರಂಗದಲ್ಲಿ 25 ಪೂರೈಸಿದ್ದಕ್ಕೆ ಅಭಿನಂದನೆಗಳು. ನಮ್ಮಂತ ಯುವ ನಟರಿಗೆ ಒಡಹುಟ್ಟಿದ ಅಣ್ಣನ ಪ್ರೀತಿ ಕೊಟ್ಟು ಬೆಂಬಲವಾಗಿ ನಿಂತಿದ್ದೀರಾ ಅದಕ್ಕೆ ಧನ್ಯವಾದ. ಒಂದು ಬಿಳಿ ಆನೆ ನಡೆಯಲು ಶುರುಮಾಡಿ ಇವತ್ತಿಗೆ 25 ವರ್ಷ ತುಂಬಿದೆ. ಅದರ ಮಧ್ಯದಲ್ಲಿ ಸಾವಿರಾರು ನಾಯಿಗಳು ಕಚ್ಚೋಕೆ ಬಂದ್ರು, ಬೊಗಳೋಕೆ ಬಂದ್ರು ಎಲ್ಲರನ್ನು ತುಳ್ಕೊಂಡು ಅದ ಪಾಡಿಗೆ ಅದು ಜರ್ನಿ ಮುಂದುವರೆಸಿಕೊಂಡು ಹೋಗ್ತಾ ಇದೆ. ಈ 25 ವರ್ಷ ಅಲ್ಲ ಇನ್ನು 25 ವರ್ಷ ಈ ಆನೆ ಇದೇ ನಡೆದುಕೊಂಡು ಹೋಗಲಿ ಎಂದು ಕೇಳಿಕೊಳ್ಳುತ್ತೇನೆ" ಎಂದಿದ್ದಾರೆ.
"25 ವರ್ಷ ಚಿತ್ರರಂಗದಲ್ಲಿ ಜರ್ನಿ ಮಾಡುವುದು ತಮಾಷೆ ವಿಷಯ ಅಲ್ಲ. ಅಂತಾದ್ರಲ್ಲಿ ಸಕ್ಸಸ್‌ಫುಲ್ ಆಗಿ 25 ವರ್ಷ ಪೂರ್ತಿ ಮಾಡಿದ್ದಾರೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಯಾವಾಗಲೂ ಅವರಿಗೆ ಇರಲಿ. ಭಗವಂತ ನಮಗೆ 50ನೇ ವರ್ಷದ ಕಾರ್ಯಕ್ರಮಕ್ಕೂ ಬರುವಂತಹ ಶಕ್ತಿ ಕೊಡಲಿ. ತೂಗುದೀಪ ಶ್ರೀನಿವಾಸ್ ಮಗ ಆಗಿದ್ದರೂ ಅವಕಾಶಗಳಿಲ್ಲದೇ ಲೈಟ್ ಬಾಯ್ ಆಗಿ ಇಂಡಸ್ಟ್ರಿಗೆ ಬಂದು 'ಮೆಜೆಸ್ಟಿಕ್' ಮೂಲಕ ಹೀರೋ ಆಗಿ ಮುಂದೆ ಎಂಥೆಂತ ಪಾತ್ರ ಮಾಡಿದರು. ಅದೆಲ್ಲವನ್ನು ಮೀರಿದ ಒಳ್ಳೆ ಗುಣ ಇದೆ" ನಾ ಕಂಡ ಡಿ ಬಾಸ್ ಎಂದು 'ಯಜಮಾನ' ಚಿತ್ರದ ಟೈಟಲ್ ಸಾಂಗ್ ಹಾಡಿ ದರ್ಶನ್ ಬಗ್ಗೆ ಚಿಕ್ಕಣ್ಣ ಹಾಡಿ ಹೊಗಳಿದರು.

ಯಶಸ್ ಸೂರ್ಯ ಮಾತನಾಡಿ "ದರ್ಶನ್ ಸರ್ ಯಾವಾಗಲೂ ಹೇಳುತ್ತಿರುತ್ತಾರೆ ನನಗೆ ವಯಸ್ಸಾಯ್ತು ಅಂತ. ಅವರಿಗೆ 25 ವರ್ಷ ಮಾತ್ರ ವಯಸ್ಸಾಗಿರುವುದು. ಅವರು 25 ವರ್ಷ ಬೆಳೆದು ನಿಂತು ದೊಡ್ಡ ಆಲದ ಮರ ಆಗಿದ್ದಾರೆ. ಆ ಆಲದ ಮರದ ಕೆಳಗೆ ನಾವೆಲ್ಲಾ ಇದ್ದೀವಿ. ಅವರ ಋಣ ತೀರಿಸೋಕೆ ಆಗಲ್ಲ. ಋಣದ ಬಗ್ಗೆ ಮಾತನಾಡುವಾಗಿ ದರ್ಶನ್ ಸರ್ ಹೇಳ್ತಾರೆ, ಹೀರೊ ನೀವು ನಾಳೆ ಬೆಳೆದಾಗ ನಾಲ್ಕು ಜನರಿಗೆ ಸಹಾಯ ಮಾಡಿ ಅದರಿಂದ ನನ್ನ ಋಣ ತೀರಿಸಿದಂತೆ ಅಂತ. ಅಂತಹ ದೊಡ್ಡ ಗುಣ ಅವರದ್ದು. ಅವರು ಅಭಿಮಾನಿಗಳ ಬಗ್ಗೆ ಹೇಳ್ತಾರೆ, ನನ್ನ ಚರ್ಮ ಸುಳಿದು ನಿಮಗೆ ಚಪ್ಪಲಿ ಮಾಡಿಕೊಟ್ಟರು ಋಣ ತೀರಿಸೋಕೆ ಆಗಲ್ಲ ಅಂತ. ಅದೇ ರೀತಿ ನನ್ನ ಚರ್ಚೆ ಸುಲಿದು ಅವರಿಗೆ ಚಪ್ಪಲಿ ಮಾಡಿಕೊಟ್ಟರೂ ಅವರ ಋಣ ತೀರಿಸೋಕೆ ಆಗಲ್ಲ" ಎಂದಿದ್ದಾರೆ.


Click it and Unblock the Notifications











