Appu Makkala Chitrotsava : ಐದು ದಿನಗಳ ಕಾಲ 'ಅಪ್ಪು ಮಕ್ಕಳ ಚಲನಚಿತ್ರೋತ್ಸವ': 60ಕ್ಕೂ ಹೆಚ್ಚು ಸಿನಿಮಾ ಪ್ರದರ್ಶನ
ಬೆಂಗಳೂರಿನಲ್ಲಿ ಮಕ್ಕಳ ಚಲನ ಚಿತ್ರೋತ್ಸವ ಆರಂಭಗೊಂಡಿದೆ. ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಸಂಸ್ಥೆ 'ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ'ವನ್ನು ಆರಂಭಿಸಿದ್ದಾರೆ. ವಿಶೇಷ ಅಂದ್ರೆ, ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಈ ಬಾರಿ 'ಅಪ್ಪು ಮಕ್ಕಳ ಚಲನಚಿತ್ರೋತ್ಸವ' ಎಂಬ ಶೀರ್ಷಿಕೆಯಡಿ ಆರಂಭ ಆಗಿದೆ.ಸಚಿವ ವಿ.ಸೋಮಣ್ಣ, ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಹಲವು ಗಣ್ಯರು, ಪುನೀತ್ ರಾಜಕುಮಾರ್ ಹೆಸರಿನಲ್ಲಿ 'ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ'ಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಸಚಿವ ವಿ ಸೋಮಣ್ಣ ಸ್ಮರಿಸಿದ್ದಾರೆ."ಪುನೀತ್ ರಾಜಕುಮಾರ್ ತಾವು ಮಾಡಿರುವ ಉತ್ತಮ ಕೆಲಸಗಳಿಂದ ಎಲ್ಲರ ಮನಸ್ಸಿನಲ್ಲೂ ಇದ್ದಾರೆ. ಅವರು ಮಾಡಿರುವ ಸತ್ಕಾರ್ಯಗಳು ಎಲ್ಲರಿಗೂ ಸ್ಪೂರ್ತಿಯಾಗಬೇಕು. ಅಂತಹ ಪುನೀತ್ ರಾಜಕುಮಾರ್ ಅವರ ಹೆಸರಿನಿಂದ ಈ ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ(ಅಪ್ಪು ಮಕ್ಕಳ ಚಲನಚಿತ್ರೋತ್ಸವ) ಆರಂಭವಾಗಿರುವುದು ನಿಜಕ್ಕೂ ಖುಷಿಯಾಗಿದೆ. ಇದಕ್ಕೆ ನಾನು ಚಲನಚಿತ್ರೋತ್ಸವದ ರುವಾರಿ ಉಲ್ಲಾಸ್ ಅವರನ್ನು ಅಭಿನಂದಿಸುತ್ತೇನೆ. ಸದಾ ಅವರ ಜೊತೆ ನಾನು ಇರುತ್ತೇನೆ" ಎಂದು ಸಚಿವ ವಿ.ಸೋಮಣ್ಣ ಹರ್ಷ ವ್ಯಕ್ತಪಡಿಸಿದ್ರು.
ಇದೇ ವೆಳೆ ಅಶ್ವಿನಿ ಪುನೀತ್ ರಾಜಕುಮಾರ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು 'ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ'ಕ್ಕೆ ಶುಭ ಕೋರಿದ್ದಾರೆ. "ನಾನು 'ನಿರ್ಮಲ' ಎಂಬ ಮಕ್ಕಳ ಸಿನಿಮಾ ಮಾಡಿದ್ದೆ. ಆ ಚಿತ್ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಬಿಟ್ಟು ಬೇರೆ ಯಾವ ಚಲನಚಿತ್ರೋತ್ಸವದಲ್ಲೂ ಪ್ರದರ್ಶನ ಮಾಡಲಯ ಅವಕಾಶ ಸಿಗಲಿಲ್ಲ. ಆಗ ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಚಲನಚಿತ್ರೋತ್ಸವ ಪ್ರಾರಂಭಿಸಿದ್ದೇನೆ. ಈ ಬಾರಿ ಅಪ್ಪು ಮಕ್ಕಳ ಚಲನಚಿತ್ರೋತ್ಸವ ಎಂಬ ಹೆಸರಿನಿಂದ ಆರಂಭವಾಗಿದೆ. ಮುಂದೆ ಸಹ ಅದೇ ಹೆಸರಿನಲ್ಲಿ ಮುಂದುವರೆಸಿಕೊಂಡು ಹೋಗಲಾಗುತ್ತದೆ" ಎಂದು ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ನ ಉಲ್ಲಾಸ್ ಹೇಳಿದ್ದಾರೆ.

"ಮಕ್ಕಳ ಚಿತ್ರಕ್ಕೆ ಹೆಚ್ಚು ವೇದಿಕೆಗಳು ಇಲ್ಲ. ಮಕ್ಕಳ ಚಿತ್ರಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಈ ಮಕ್ಕಳ ಚಲನಚಿತ್ರೋತ್ಸವ ಆರಂಭಿಸಲಾಗುತ್ತಿದೆ" ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ತಿಳಿಸಿದ್ದಾರೆ. ಈ ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವದಲ್ಲಿ ವಿವಿಧ ಭಾಷೆಗಳ 60ಕ್ಕೂ ಹೆಚ್ಚು ಸಿನಿಮಾಗಳು ಬಂದಿದ್ದು, ಇವುಗಳ ಪೈಕಿ 12 ಚಿತ್ರಗಳನ್ನು ಆಯ್ಕೆ ಮಾಡಿ ಪ್ರದರ್ಶನ ಮಾಡಲಾಗುತ್ತಿದೆ. ಈ ಚಿತ್ರಗಳು ಫೆಬ್ರವರಿ 22ರಿಂದ 26ವರೆಗೆ ಐದು ದಿನಗಳ ಕಾಲ 'ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ' ದಲ್ಲಿ ಪ್ರದರ್ಶನವಾಗಲಿದೆ. .


Click it and Unblock the Notifications











