ಸೆನ್ಸಾರ್ ನಲ್ಲಿ ಕ್ಲೀನ್ ಸರ್ಟಿಫಿಕೇಟ್ ಪಡೆದ 'ಚಿಲ್ರೆ ಶೋಕಿ'
ಶೋಕಿಗಿಂತ ಪ್ರೀತೀನೇ ದೊಡ್ಡದು ಎನ್ನುವ ಎಳೆಯೊಂದನ್ನಿಟ್ಟುಕೊಂಡು ಯುವ ನಿರ್ದೇಶಕ ಜಾನ್‍ಪದ 'ಚಿಲ್ರೆ ಶೋಕಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎಸ್. ನಾರಾಯಣ್, ಶ್ರೀನಿವಾಸ್ ಕೌಶಿಕ್, ಜಿಮ, ಮೂರ್ತಿ ಸೇರಿ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿರುವ ಜಾನ್ಪದ ನಿರ್ದೇಶನದ ಮೊದಲ ಚಿತ್ರವಿದು.
'ಸಿಲ್ಕ್ ಸಖತ್ ಹಾಟ್' ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟಿದ್ದ ಅಕ್ಷಯ್ ನಾಯಕ ನಟನಾಗಿರುವ ಈ ಚಿತ್ರ ಸೆನ್ಸಾರ್ ನಲ್ಲಿ ಪಾಸ್ ಆಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಯು' ಸರ್ಟಿಫಿಕೇಟ್ ನೀಡಿದೆ. ಶ್ರೀ ನಿಮಿಷಾಂಭ ಕಮುನಿಕೇಷನ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ‘ಚಿಲ್ರೆ ಶೋಕಿ' ಚಿತ್ರಕ್ಕೆ ಕಳೆದ ವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ 'ಯು' ಸರ್ಟಿಫಿಕೇಟ್ ನೀಡಿದೆ. [ಸಿಲ್ಕ್ ಖ್ಯಾತಿಯ ಶೋಕಿಲಾಲ ಅಕ್ಷಯ್ 'ಚಿಲ್ರೆಶೋಕಿ'ಗಳು]

ಚಿತ್ರದಲ್ಲಿ ಐದು ಹಾಡುಗಳಿದ್ದು ಸದ್ಯದಲ್ಲೇ ಹಾಡುಗಳ ಧ್ವನಿಸುರುಳಿ ಬಿಡುಗಡೆಯಾಗಲಿದ್ದು ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಜಾನ್ಪದ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣವಿದೆ.
ಕಿರಣ್ ಡ್ಯಾನಿಯಲ್ ಸಂಗೀತ, ಮಂಜು ಭಗಾಡೆ ಕಥೆ, ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು ಸಾಹಸ, ಜಗದೀಶ್ ಸಂಕಲನ, ಪ್ರಸಾದ್ ನೃತ್ಯ ನಿರ್ದೇಶನ, ಜಾನಪದ ಸಾಹಿತ್ಯ, ಜಿ.ಮೂರ್ತಿ ಕಲಾನಿರ್ದೇಶನವಿದೆ. ಪಾತ್ರವರ್ಗದಲ್ಲಿ ಅಕ್ಷಯ್, ಸಂಜನಾ ಪ್ರಕಾಶ್, ಮಧನ್, ಅವಿನಾಶ್, ಸತ್ಯಜಿತ್, ಸಂಗೀತ, ಯತಿರಾಜ್, ಎಂ.ಆರ್.ರಘುವೀರ್, ಗಣೇಶ್ ರಾವ್, ಅಶ್ವಿನ್, ರೋಹಿತ್, ಪ್ರಜ್ವಲ್ ತಾರಾಗಣದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications