ಪ್ರಥಮ್ ಮೇಲಿನ ಹಲ್ಲೆಯ ಹಿಂದೆ ಬ್ರೆಡ್ -ಚಿಪ್ಸ್- ಖಾರ ಬನ್ ಕಥೆ ಇದೆ ಎಂದ ದರ್ಶನ್ ಹುಡುಗರು, ಕೆರಳಿದ ದೇವ್ರಂಥಾ ಮನುಷ್ಯ
ಬಿಗ್ ಬಾಸ್ ಕಾರ್ಯಕ್ರಮದ ನಾಲ್ಕನೇ ಸೀಸನ್‌ನ ವಿನ್ನರ್ ಆಗಿದ್ದವರು ಪ್ರಥಮ್. ಆ ಸೀಸನ್‌ನಲ್ಲಿ ಪ್ರಥಮ್ ಉಣಬಡಿಸಿದ್ದ ಮನರಂಜನೆಯ ರಸದೌತಣವನ್ನು ಪ್ರೇಕ್ಷಕರು ಇನ್ನೂ ಮರೆತಿರಲಿಕ್ಕಿಲ್ಲ. ಒಂದಿಷ್ಟು ಕಿರಿಕ್ಕು- ಇನ್ನೊಂದಿಷ್ಟು ವಾದ ವಿವಾದಗಳಿಂದ ಸದ್ದು ಮಾಡಿದ್ದ ಪ್ರಥಮ್ ಆ ನಂತರ ಚಿತ್ರಗಳಲ್ಲಿ ಬ್ಯುಸಿಯಾದರು. ''ದೇವ್ರಂಥಾ ಮನುಷ್ಯ'' ಸೇರಿ ಮೂರ್ನಾಲ್ಕು ಚಿತ್ರಗಳನ್ನು ಮಾಡಿದರು. ಸದ್ಯ ಪ್ರಥಮ್ ಅಭಿನಯದ ''ಫಸ್ಟ್ ನೈಟ್ ವಿತ್ ದೆವ್ವ'' ಮತ್ತು ನಿರ್ದೇಶಿಸಿ ಅಭಿನಯಿಸಿರುವ ''ಕರ್ನಾಟಕದ ಅಳಿಯ'' ಚಿತ್ರಗಳು ಬಿಡುಗಡೆಯಾಗಬೇಕಿವೆ.
ಇಂಥಾ ಪ್ರಥಮ್ ಕಂಡರೆ ಅದ್ಯಾಕೋ ಏನೋ ದರ್ಶನ್ ಅಭಿಮಾನಿಗಳಿಗೆ ವಿಪರೀತ ಪ್ರೀತಿ. ಪ್ರಥಮ್‌ಗೂ ಕೂಡ ಅಷ್ಟೇ. ಹೀಗಾಗಿಯೇ ಪ್ರಥಮ್ ಹೋದಲ್ಲಿ ಬಂದಲ್ಲಿ ದರ್ಶನ್ ಅಭಿಮಾನಿಗಳು ''ಡಿ ಬಾಸ್'' ಎಂದು ಕೂಗಿದರೆ ಪ್ರಥಮ್ ಅಷ್ಟೇ ಸಮಾಧಾನದಿಂದ ಉತ್ತರ ಕೊಡುತ್ತಾರೆ.

ಕೆಲವೊಮ್ಮೆ ಗುಡುಗುತ್ತಾರೆ. ಇನ್ನೂ ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ವಿಷ ಕಾರುವ ವ್ಯಕ್ತಿಗಳಿಗೆ ಪೊಲೀಸ್ ಠಾಣೆಗೆ ಕರೆಸಿ ಬುದ್ದಿವಾದವನ್ನೂ ಹೇಳುವ ಕಾರ್ಯಕ್ರಮವನ್ನು ಕೂಡ ಪ್ರಥಮ್ ಆಗಾಗ ಹಮ್ಮಿಕೊಳ್ಳುತ್ತಾ ಇರುತ್ತಾರೆ. ಸಮಯ ಸಿಕ್ಕಾಗ ಅಲ್ಲಲ್ಲಿಯೇ ತಿರುಗೇಟನ್ನು ಕೂಡ ನೀಡುತ್ತಾರೆ.
ಆದರೆ ಈಗ ಈ ವಾದ..ವಿವಾದ..ವಾಗ್ಯುದ್ದ.. ಬೇರೆ ಹಂತಕ್ಕೆ ತಲುಪಿದೆ. ಪ್ರೀತಿಯ ಒಲವಿನ ಬದಲು ದ್ವೇಷದ ಅಲೆ ಪ್ರಥಮ್ ಮತ್ತು ದರ್ಶನ್ ಅವರ ಹುಡುಗರಲ್ಲಿ ಎದ್ದಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.
ಇದಕ್ಕೆ ಕೈಗನ್ನಡಿ ಎಂಬಂತೆ ತೀರಾ ಇತ್ತೀಚೆಗೆ ದರ್ಶನ್ ಅವರ ಅಭಿಮಾನಿಗಳು ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಪ್ರಥಮ್ ಆರೋಪ ಮಾಡಿದ್ದಾರೆ. ವಕೀಲ್ ಸಾಬ್ ಜಗದೀಶ್ ಅವರ ''ನಂಬಿಕೆ ದ್ರೋಹ''ದ ಕುರಿತು ಮಾತನಾಡುತ್ತಲೇ ದರ್ಶನ್ ಅಭಿಮಾನಿಗಳ ವಿರುದ್ದ ಸಮರ ಸಾರಿರುವ ರಮ್ಯಾ ಪರ ಬೆಂಬಲದ ಬಾವುಟವನ್ನು ಕೂಡ ಹಾರಿಸಿದ್ದಾರೆ. ಗೂಂಡಾಗಳನ್ನು ಸಾಕಬೇಡಿ ಸಾಧ್ಯವಾದರೆ ಮನೆಯಲ್ಲಿ ನಾಯಿಗಳನ್ನು ಸಾಕಿ ಎಂದು ಮಾಧ್ಯಮದವರ ಮೂಲಕ ದರ್ಶನ್‌ಗೆ ಪ್ರಥಮ್ ತಿರುಗೇಟನ್ನೂ ಕೂಡ ನೀಡಿದ್ದಾರೆ.
ಪ್ರಥಮ್ ಅವರ ಈ ಆರೋಪಗಳಿಗೆ.. ಮಾತುಗಳಿಗೆ ಈಗ ದರ್ಶನ್ ಅವರ ಅಧಿಕೃತ ಫ್ಯಾನ್ ಸಂಸ್ಥೆ ''ಡಿ ಕಂಪನಿ'' ಪ್ರತ್ಯುತ್ತರ ನೀಡಿದೆ. ಪ್ರಕರಣ ಅಲ್ಲ ಪ್ರಹಸನ ಎಂದು ಹೇಳಿದೆ. ಹಾಗಿದ್ದರೆ ''ಡಿ ಕಂಪನಿ'' ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

ಡಿ ಕಂಪನಿ ಪೋಸ್ಟ್
''ಪ್ರಥಮ್ ಮೇಲೆ ಹಲ್ಲೆ ಪ್ರಕರಣ ಸತ್ಯ ಹೊರ ಬಂದಿದೆ. ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು, ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ ಖಾರ ಬನ್ ತಿಂದ ಪ್ರಕರಣವಿದು.
ನಮ್ಮ ಪ್ರಶ್ನೆ ದರ್ಶನ ಅವರು ಜೈಲಲ್ಲಿ ಇದ್ದಾಗ ಅಭಿಮಾನಿಗಳಿಗೆ ಪ್ರಚೋದನೆ ಹೇಳಿಕೆ ನೀಡಿ ಕಾಮೆಂಟ್ ಮಾಡಿದವರ ವಿರುದ್ಧ ಸಾಲು ಸಾಲು ದೂರು ದಾಖಲಿಸಿದ ಕುತಂತ್ರಿಗೆ ? ಹಲ್ಲೆ ನಡೆದರೂ ದೂರು ನೀಡಿದಷ್ಟು ಒಳ್ಳೆ ಮನಸ್ಸು ಇದೆಯಾ?
ಕಾರಣ ಇಷ್ಟೇ ಅಂದು ಪೊಲೀಸ್ ದೂರು ನೀಡಲು ವೈದ್ಯರ ವರದಿ ಬೇಕು ಸರ್ಕಾರಿ ಆಸ್ಪತ್ರೆಗೆ ಹೋದರೆ ವೈದ್ಯರ ಪರೀಕ್ಷೆಯಲ್ಲಿ ಕುಡಿದಿರುವುದು ಬೆಳಕಿಗೆ ಬರುತ್ತದೆ ಕುಡುಕರ ಗಲಾಟೆ ಎಂದು ವರದಿ ನೀಡುತ್ತಾರೆ. ಎರಡು ಮೂರು ದಿನ ಕಳೆದರೆ ಸತ್ಯ ಯಾರಿಗೂ ತಿಳಿಯುವುದಿಲ್ಲ. ಇದು ನಿಮ್ಮ ಗೇಮ್ ಹಾಗೂ ನಿಮಗೆ ಪ್ರೋತ್ಸಾಹ ಧನ ಸಹಾಯ ಮಾಡುವವರ ಹುನ್ನಾರ. ಹೇಗಿದ್ರು ನೀವು ನಿರ್ದೇಶಕರು ಅಲ್ಲವೇ ಸ್ವಾಮಿ ಕಥೆ ಚಿತ್ರಕಥೆ ಸಂಭಾಷಣೆ ಚೆನ್ನಾಗಿ ರಚನೆ ಮಾಡಿದ್ದೀರಿ.
ರೌಡಿಗಳ ಕಾರ್ಯಕ್ರಮದಲ್ಲಿ ನಿಮಗೆ ಏನು ಕೆಲಸ ? ನೀವು ಸಭ್ಯರು ತಾನೆ ರೌಡಿಗಳು ಅಂತ ತಿಳಿದ ಕೂಡಲೇ ಕಾರು ಹತ್ತಿ ಹೋಗಬೇಕಿತ್ತು ಅವರ ಜೊತೆ ಸಮಯ ಕಳೆದು ಮತ್ತಿನಲ್ಲಿ ಮಾಡಿಕೊಂಡ ಎಡ್ಡವಟಿಗೆ ಬಾಸ್ ಹೆಸರು ತಳುಕು ಯಾಕೆ ? ದರ್ಶನ್ ಅವರ ಅಧಿಕೃತ ಸಂಘಟನೆಗಳು ನೂರಾರಿವೆ ? ರಿಜಿಸ್ಟರ್ ಪಟ್ಟಿ ನಮ್ಮತ್ರ ಇದೆ ನಮ್ಮ ಸಂಘದ ಸದಸ್ಯರು ? ಪದಾಧಿಕಾರಿಗಳು ಯಾರಾದ್ರೂ ಬೆದರಿಕೆ ಹಾಕಿದರೆ ಹೇಳಿ ಸ್ವಾಮಿ ಪ್ರೈವೇಟ್ ತೋಟದಲ್ಲಿ ಅಮಲಿನ ನಡೆದ ಜಗಳಕ್ಕೆ ನಮ್ಮ ನಟ ಆಗಲಿ ನಮ್ಮ ಅಭಿಮಾನಿಗಳು ಆಗಲಿ ಹೊಣೆ ಯಾಕೆ ಸ್ವಾಮಿ ? ಗೂಂಡಾಗಳನ್ನು ಸಾಕಬೇಡಿ ಮನೆಯಲ್ಲಿ ನಾಯಿ ಸಾಕಿ ಅಂದ ನಟನಿಗೆ ಸಿನಿಮಾ ಪ್ರಚಾರಕ್ಕೆ ದುಡಿಲ್ಲ ಅಂದರೆ ಹೇಳಿ ದರ್ಶನ್ ಅಣ್ಣ ಪ್ಲೀಸ್ ನಿಮ್ಮ ಮನೆ ನಾಯಿಗೆ ಹಾಕುವ ಊಟದಲ್ಲಿ ಚೂರು ಹಾಕಿ'' ಎಂದು ''ಡಿ ಕಂಪನಿ'' ಪೋಸ್ಟ್ ಮಾಡಿದೆ.
ಇನ್ನು ''ಡಿ ಕಂಪನಿ'' ಮಾಡಿದ ಈ ಆರೋಪಕ್ಕೆ ಪ್ರಥಮ್ ಸುಮ್ಮನೆ ಕುಂತಿಲ್ಲ. ಬದಲಿಗೆ ವಾಪಸ್ ತಿರುಗೇಟು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರಥಮ್ ಸುಳ್ಳು ಸುದ್ದಿ ನಿಲ್ಲಿಸಿದರೆ ಸರಿ ಇಲ್ಲಾ ಅಂದರೆ ಯಾವ ನಟನ ''ಕಂಪನಿ'' ಆದರೂ ಆ ನಟನ ವಿರುದ್ದ ದೂರು ದಾಖಲು ಮಾಡುವುದಾಗಿ ಹೇಳಿದ್ದಾರೆ. ಕೆರಳಿ ಕೆಂಡವಾಗಿದ್ದಾರೆ.
ಪ್ರಥಮ್ ಫೋಸ್ಟ್
''ನೋಡ್ರಪ್ಪ ರಾಷ್ಟ್ರೀಯ ತನಿಖಾ ಸಂಸ್ಥೆ NIA, interpoleಗಿಂತಲೂ ದೊಡ್ಡ ತನಿಖಾ ಸಂಸ್ಥೆ ಈ ಬೇವರ್ಸಿಗಳ D company ಥೂ ನಿನ್ third classಜನ್ಮಕ್ಕಿಷ್ಟು! ಚಿಪ್ಸು, ಪಪ್ಸು ತಿನ್ನೋಕೆ ರೌಡಿ ಹತ್ತಿರ ಹೋಗಿದ್ನಂತೆ ನಾನು..enquiry ಮಾಡೋರಂತೆ. Education important ನಾಳೆ SP ನಿಮಗೆ ಅಧಿಕೃತ ಕಾರಣ ಏನಾಯ್ತು ಅಂತ ಹೇಳ್ತಾರೆ!ಕಾಯಿರಿ.
Morning ತನಕ time ಇದೆ! ಸುಳ್ಳು ಸುದ್ಧಿ ನಿಲ್ಲಿಸಿದ್ರೆ ಸರಿ!ನಾಳೆ ಅಧಿಕೃತವಾಗಿ SP ತಪ್ಪು ಮಾಡಿದವರ ಮೇಲೆactionತಗೊಳೋ ತನಕ ಸುಮ್ಮನಿದ್ರೆ ಸರಿ! ನಾನು ಸುಮ್ಮನಿದ್ರೂsocial mediaಲಿ ಏನೇನೋ ಹಾಕ್ತಿದೀರಾ! ಹೀಗೇ ಸುಳ್ಳು ಸುದ್ಧಿ ಹಬ್ಬಿಸ್ತಾ ಇದ್ರೆ ಯಾವ ನಟರcompany ಆ ನಟರ ಮೇಲೆ FIR ಮಾಡ್ತೀನಿ;ನನ್ನ ಪಾಡಿಗೆ ಸುಮ್ನೆ ಬಿಟ್ಟುಬಿಡಿ''! ಎಂದು ಪ್ರಥಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪ್ರಥಮ್ ಅವರ ಈ ಬರಹಕ್ಕೆ, ಮಾತುಗಳಿಗೆ ಕೂಡ ''ಡಿ ಕಂಪನಿ'' ಉತ್ತರವನ್ನು ನೀಡಿದ್ದು ಅಭಿಮಾನಿಗಳಿಗೆ ಮೊದಲು ಬೆಲೆ ಕೊಡುವುದನ್ನು ಕಲಿಯಿರಿ ಎಂದು ಹೇಳಿದೆ. ಪ್ರಚಾರಕ್ಕೆ ನೀವು ಮಾಡುತ್ತಿರುವ ಕೆಲಸಗಳು ಎಲ್ಲವೂ ನಮ್ಮ ಗಮನಕ್ಕೆ ಬಂದಿವೆ ಎಂದು ಕೂಡ ಹೇಳಿದೆ. ಇಷ್ಟೇ ಅಲ್ಲ ಪ್ರಥಮ್ ಅವರ ಹಳೆಯ ಪುರಾಣಗಳನ್ನು ಕೂಡ ಹೆಕ್ಕಿ ತೆಗೆಯುತ್ತಿದೆ.
ಒಟ್ನಲ್ಲಿ ಸದ್ಯ ಪ್ರಥಮ್ ಮತ್ತು ದರ್ಶನ್ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಮರ ಶುರುವಾಗಿದೆ. ಪರಸ್ಪರ ಆರೋಪ-ಪ್ರತ್ಯಾರೋಪವನ್ನು ಇಬ್ಬರು ಮಾಡುತ್ತಿದ್ದಾರೆ. ಮುಂದೆ ಈ ಪ್ರಕರಣ ಎಲ್ಲಿ ಹೋಗಿ ತಲುಪುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಹಲ್ಲೆಯ ಪ್ರಕರಣ ನಿಜಕ್ಕೂ ಪ್ರಕರಣನಾ..? ಅಥವಾ ಪ್ರಹಸನನಾ ? ಎನ್ನುವುದಕ್ಕೂ ಉತ್ತರ ಕೆಲವೇ ದಿನಗಳಲ್ಲಿ ಸಿಗಲಿದೆ. ಪೊಲೀಸ್‌ರಿಗೆ ಈ ಕೂಡ ಈ ಪ್ರಕರಣ ತಲೆ ನೋವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ.


Click it and Unblock the Notifications










