ಚಿರು, ಧ್ರುವ ಸರ್ಜಾ ಜೊತೆ ಕೂತು 'ಇರುವುದೆಲ್ಲವ ಬಿಟ್ಟು' ಸಿನಿಮಾ ನೋಡಿ
ಈ ಶುಕ್ರವಾರ ಸಿನಿಮಾ ನೋಡುವ ಪ್ಲಾನ್ ಇದ್ದರೆ 'ಇರುವುದೆಲ್ಲವ ಬಿಟ್ಟು' ಸಿನಿಮಾ ನೋಡಿ. ಯಾಕೆಂದರೆ, ನೀವು ನಟ ಚಿರು ಸರ್ಜಾ, ಧ್ರುವ ಸರ್ಜಾ ಜೊತೆಗೆ ಕೂತು ಈ ಸಿನಿಮಾ ನೋಡಬಹುದು.
ನಟಿ ಮೇಘನಾ ರಾಜ್ ನಟನೆಯ ನಿರೀಕ್ಷಿತ ಸಿನಿಮಾ 'ಇರುವುದೆಲ್ಲವ ಬಿಟ್ಟು' ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಅವರ ಇಡೀ ಕುಟುಂಬ ವೀಕ್ಷಿಸಲಿದೆ. ಫಸ್ಟ್ ಡೇ ಫಸ್ಟ್ ಶೋ ಪತ್ನಿಯ ಚಿತ್ರವನ್ನ ಚಿರು ಕಣ್ಣು ತುಂಬಿಕೊಳ್ಳಲಿದ್ದಾರೆ.

'ಇರುವುದೆಲ್ಲವ ಬಿಟ್ಟು' ಈಗಾಗಲೇ ಹಾಡುಗಳ ಹಾಗೂ ಟ್ರೇಲರ್ ಮೂಲಕ ನಂಬಿಕೆ ಹುಟ್ಟಿಸಿದೆ. ಸಂಬಂಧಗಳ ಮೇಲೆ ನಿಂತಿರುವ ಈ ಚಿತ್ರದಲ್ಲಿ ಲಿವಿಂಗ್ ರಿಲೇಷನ್ ಶಿಪ್, ತಂದೆ ಮಗಳ ಪ್ರೀತಿ ಎರಡೂ ಇದೆ. ಅಪ್ಪ ಮಗಳು ಕೂತು ಒಟ್ಟಿಗೆ ಸಿನಿಮಾ ನೋಡಬೇಕು ಎಂಬುದು ನಿರ್ದೇಶಕರ ಆಸೆ ಆಗಿದೆ.

ಅಂದಹಾಗೆ, ಕಾಂತ ಕನ್ನಲ್ಲಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ದೇವರಾಜ್ ದಾವಣಗೆರೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿ ಶ್ರೀಧರ್ ಸಂಭ್ರಮ್ ನಾಲ್ಕು ಸುಂದರ ಹಾಡುಗಳನ್ನು ನೀಡಿದ್ದಾರೆ.
ನಟಿ ಮೇಘನಾ ರಾಜ್, ತಿಲಕ್, ಶ್ರೀ ಮಹದೇವ್, ಅಚ್ಚುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. 'ಇರುವುದೆಲ್ಲವ ಬಿಟ್ಟು' ಸಿನಿಮಾ ನಾಳೆ (ಸಪ್ಟೆಂಬರ್ 21)ಕ್ಕೆ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.


Click it and Unblock the Notifications











