ಚಿರಂಜೀವಿ ಸರ್ಜಾ ಇಲ್ಲದ ಒಂದು ವರ್ಷ: ಪತಿಯ ನೆನಪಿನಲ್ಲಿ ಮೇಘನಾ ರಾಜ್
ಸ್ಯಾಂಡಲ್ ವುಡ್ ನಟ, ಸರ್ಜಾ ಕುಟುಂಬದ ಮಗ ಚಿರಂಜೀವಿ ಸರ್ಜಾ ನಿಧನಹೊಂದಿ ಇವತ್ತಿಗೆ ಒಂದು ವರ್ಷವಾಗಿದೆ. ಇವತ್ತಿಗೆ ಸರಿಯಾಗಿ 365 ದಿನಗಳ ಹಿಂದೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು. 2020, ಜೂನ್ 7 ಮಧ್ಯಾಹ್ನ ಚಿರಂಜೀವಿ ಇಹಲೋಕ ತ್ಯಜಿಸಿದರು.
ಚಿರು ಇನ್ನಿಲ್ಲ ಎನ್ನುವ ಸುದ್ದಿ ಕನ್ನಡ ಚಿತ್ರಪ್ರೇಕ್ಷಕರಿಗೆ ಬರ ಸಿಡಿಲಿನಂತೆ ಬಂದು ಅಪ್ಪಳಿಸಿತ್ತು. ಕುಟುಂಬದವರು ಇನ್ನೂ ಚಿರು ಅಗಲಿಕೆಯ ನೋವಿನಿಂದ ಹೊರಬಂದಿಲ್ಲ. ಮದುವೆಯಾಗಿ ಕೇವಲ 2 ವರ್ಷದಲ್ಲೇ ಮೇಘನಾ ಪತಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಪತಿಯ ನೆನಪಿನಲ್ಲೇ ಒಂದು ವರ್ಷ ಕಳೆದಿದ್ದಾರೆ.
ಪತಿ ಜೊತೆ ಕಳೆದ ಸುಂದರ ನೆನೆಪುಗಳನ್ನು ಮೇಘನಾ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಪತಿಯ ನೆನಪಿನಲ್ಲೇ ಮುದ್ದು ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗನ ನಗುವಿನಲ್ಲಿ ನೋವು ಮರೆಯುತ್ತ ಜೀವಿಸುತ್ತಿದ್ದಾರೆ ಮೇಘನಾ.

ಇಂದು ಚಿರು ಸರ್ಜಾ ಪುಣ್ಯಸ್ಮರಣೆ ದಿನ ಮೇಘನಾ ಪತಿ ಜೊತೆ ಇರುವ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಮೇಘನಾ ಮುಖ ನೋಡಿ ನಗುತ್ತಿರುವ ಚಿರು ಫೋಟೋವನ್ನು ಶೇರ್ ಮಾಡಿ, ನಾವು, ನನ್ನವನು ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಮೇಘನಾ ಪೋಸ್ಟ್ ಗೆ ಚಿತ್ರರಂಗದ ಅನೇಕ ಗಣ್ಯರು ಕಾಮೆಂಟ್ ಮಾಡಿ, ಹಾರ್ಟ್ ಇಮೋಜಿ ಕಳುಹಿಸಿದ್ದಾರೆ.
ಇಂದು ಮೊದಲ ವರ್ಷದ ಪುಣ್ಯಸ್ಮರಣೆ ದಿನ ಮೇಘನಾ ಮತ್ತು ಸರ್ಜಾ ಕುಟುಂಬ ಚಿರಂಜೀವಿ ಸಮಾಧಿಗೆ ತೆರಳಿ ಪೂಜೆ ನೆರವೇರಿಸಲಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಸರಳವಾಗಿ ಕಾರ್ಯ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ. ಇನ್ನು ವಿಶೇಷ ಎಂದರೆ ಮೊದಲ ಬಾರಿಗೆ ಮೇಘನಾ ಪುತ್ರನನ್ನು ಚಿರು ಸಮಾಧಿ ಬಳಿ ಕರೆದುಕೊಂಡು ಹೋಗುತ್ತಿದ್ದಾರೆ. ತಂದೆಯ ಸಮಾಧಿಗೆ ಜೂ.ಚಿರು ಕೂಡ ಪೂಜೆ ಮಾಡಲಿದ್ದಾರೆ.


Click it and Unblock the Notifications











