»   » ಮಂಜುನಾಥ ಚಿತ್ರದ ಅಭಿನಯಕ್ಕೆ ಅರ್ಜುನ್‌

ಮಂಜುನಾಥ ಚಿತ್ರದ ಅಭಿನಯಕ್ಕೆ ಅರ್ಜುನ್‌

Posted By: Staff
Subscribe to Filmibeat Kannada

ಸಿಪಾಯಿ ಚಿತ್ರದಲ್ಲಿ ರವಿಚಂದ್ರನ್‌ ಬುಲಾವಿಗೆ ಓಗೊಟ್ಟು, 'ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ" ಅಂತ ಹೆಜ್ಜೆ ಹಾಕಿ ಚಪ್ಪಾಳೆ ಗಿಟ್ಟಿಸಿದ್ದ ತೆಲುಗು ಬಿಡ್ಡ ಮೆಗಾಸ್ಟಾರ್‌ ಚಿರಂಜೀವಿ, ಶಿವನ ರೂಪದಲ್ಲಿ ಕನ್ನಡ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಶ್ರೀ ಮಂಜುನಾಥ ಚಿತ್ರದಲ್ಲಿನ ಈ ಪಾತ್ರ ವಿಷ್ಣುವರ್ಧನ್‌ ಒಲ್ಲದ ಕಾರಣಕ್ಕೆ ಚಿರಂಜೀವಿಗೆ ದಕ್ಕಿದೆ. ಅರ್ಜುನ್‌ ಸರ್ಜಾ, ಸೌಂದರ್ಯ, ಅಂಬರೀಶ್‌, ಸುಮಲತಾ, ಮೀನಾ, ಸಾಂಘವಿ ಮೊದಲಾದವರ ತಾರಾಬಳಗದ ಜಯಶ್ರೀದೇವಿ ನಿರ್ಮಾಣದ ಈ ಅದ್ಧೂರಿ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು- ಸುದ್ದಿ ಮಾಡುತ್ತಿದೆ. ಈ ಚಿತ್ರ ತೆಲುಗು ಭಾಷೆಯಲ್ಲೂ ತೆರೆ ಕಾಣಲಿದೆ.

ಎನ್‌ಟಿಆರ್‌, ಎಎನ್‌ಆರ್‌ ಜನಪ್ರಿಯತೆಯ ವಾರಸುದಾರರಾಗಿ ಹೊಮ್ಮಿರುವ ಮೆಗಾಸ್ಟಾರ್‌ ರುದ್ರವೀಣ, ಆಪದ್ಬಾಂಧವುಡು, ಮುಠಾಮೇಸ್ತ್ರಿ, ಶುಭ ಲೇಖ, ಸ್ವಯಂ ಕೃಷಿ ಮೊದಲಾದ ತೆಲುಗು ಚಿತ್ರಗಳಲ್ಲಿ ಮಿಂಚಿದವರು. ಸಿಪಾಯಿ ನಂತರ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೆಗಾಸ್ಟಾರ್‌ ಏನಂತಾರೆ ಕೇಳೋಣವೇ...

ನೀವು ಶ್ರೀ ಮಂಜುನಾಥ ಚಿತ್ರದ ಶಿವನ ಪಾತ್ರ ಒಪ್ಪಿಕೊಂಡದ್ದೇಕೆ ?
ಚಿತ್ರಕತೆ ಹೆಣೆದ ಭಾರವಿ ಹಾಗೂ ನಿರ್ದೇಶಕ ರಾಘವೇಂದ್ರ ರಾವ್‌ ಈ ಯೋಜನೆಯ ಹಿಂದಿರುವ ಪ್ರಮುಖ ವ್ಯಕ್ತಿಗಳು. ನವರಸಗಳಲ್ಲಿ ಭಕ್ತಿರಸವೇ ಪ್ರಧಾನವಾದದ್ದು. ಅದು ದೇವರ ಕುರಿತಂತೆ ಇರಬಹುದು ಅಥವಾ ದೇಶಭಕ್ತಿಯಾಗಿರಬಹುದು. ಒಬ್ಬ ಶಿವಭಕ್ತನ ಭಕ್ತಿರಸ ಚಿತ್ರದ ಕಥಾವಸ್ತು. ಎರಡೂವರೆ ತಾಸು ಪ್ರೇಕ್ಷಕ ತನ್ನ ಸೀಟಿಗಂಟಿಕೊಂಡು ನೋಡುವಂಥಾ ಸರಕು ಇದರಲ್ಲಿ ಖಂಡಿತ ಇದೆ.
ಯಾವುದಾದರೂ ಪುರಾಣದ ಪಾತ್ರ ಮಾಡಬೇಕೆಂಬುದು ನನ್ನ ಬಹು ವರ್ಷಗಳ ಬಯಕೆ. ಎನ್‌ಟಿಆರ್‌ ಪಾತ್ರಗಳನ್ನು ನೋಡಿ ನಾನು ಅವಾಕ್ಕಾಗಿದ್ದೆ. ಜನಮನದಲ್ಲಿ ಉಳಿಯುವಂಥಾ ಪುರಾಣದ ಯಾವುದೇ ಪಾತ್ರ ನಾನು ಮಾಡಲಾಗಲಿಲ್ಲವಲ್ಲ ಎಂಬ ಅತೃಪ್ತಿ ಹೃದಯದಲ್ಲಿ ಉಳಿದಿತ್ತು. ಶ್ರೀ ಮಂಜುನಾಥದಲ್ಲಿ ನನಗೆ ಸಿಕ್ಕ ಚಾನ್ಸ್‌ ಕೊಂಚ ಮಟ್ಟಿಗಾದರೂ ತೃಪ್ತಿ ತಂದಿದೆ.

ನಿಮ್ಮ ಅಭಿಮಾನಿಗಳು ನಿಮ್ಮಿಂದ ಡಿಫರೆಂಟ್‌ ಪಾತ್ರ ನಿರೀಕ್ಷಿಸುತ್ತಾರೆ. ಹೌದಲ್ಲವೇ ?
ನೋಡಿ, ನಾನು ಶಿವನ ಪಾತ್ರ ಮಾಡುತ್ತಿರುವುದು ನನ್ನೊಳಗಿನ ನಟನನ್ನು ತೃಪ್ತಿ ಪಡಿಸಲು, ಅಭಿಮಾನಿಗಳನ್ನು ಆಕರ್ಷಿಸುವುದಕ್ಕಲ್ಲ. ಅಂದಮಾತ್ರಕ್ಕೆ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಕೇವಲ ಭಕ್ತಿಭಾವದ ಒರತೆಯೇ ಸಿಗುತ್ತದೆ ಎಂದಲ್ಲ. ಕೈಲಾಸ ಪರ್ವತದಲ್ಲಿನ ನವಿರು ಹಾಸ್ಯವನ್ನು ರಾಘವೇಂದ್ರರಾವ್‌ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಶಿವನ ಪಾತ್ರ ಹೆಚ್ಚೇನೂ ಇಲ್ಲ. ಆದರೆ ಚಿತ್ರದುದ್ದಕ್ಕೂ ಆತನ ಛಾಯೆ ಬಿಂಬಿಸುತ್ತದೆ.

ಶಿವನ ಪಾತ್ರ ಮಾಡಲು ನೀವು ಸ್ಪೆಷಲ್‌ ಕೇರ್‌ ತೆಗೆದುಕೊಂಡಿರಾ ?
ಇಲ್ಲ, ಅಂಥಾದ್ದೇನೂ ಸ್ಪೆಷಲ್‌ ಕೇರ್‌ ತೆಗೆದುಕೊಂಡಿಲ್ಲ. ಮೊದಲಿನಿಂದಲೂ ನಾನು ಊಟದ ವಿಚಾರದಲ್ಲಿ ಮುಕ್ತವಾಗಿಯೇ ಇದ್ದೇನೆ. ಡಯಟ್‌ ಮಾಡಿದ್ದೇ ಇಲ್ಲ. ಇಂಥಾ ಪಾತ್ರಗಳನ್ನು ಮಾಡಿರುವ ಅನೇಕ ನಟರು ಯಾವುದೇ ಸ್ಪೆಷಲ್‌ ಕೇರ್‌ ತೆಗೆದುಕೊಂಡಿಲ್ಲ. ನನಗೆ ಶಿವನ ಪಾತ್ರ ಹೊಸದೇನಲ್ಲ. ಸಾಕಷ್ಟು ಕಮರ್ಷಿಯಲ್‌ ಸಿನಿಮಾಗಳಲ್ಲಿ ಶಿವನಾಗಿ ನಟಿಸಿದ್ದೇನೆ. ನಿರ್ದೇಶಕರು ಶಿವನ ಪಾತ್ರದಲ್ಲಿ ಹಾಸ್ಯ ಇರುವುದನ್ನು ಮನದಟ್ಟು ಮಾಡಿಸಿದರು. ಭಾರವಿ ಪಾತ್ರದ ಹರಹಿನ ಬಗ್ಗೆ ವಿವರಿಸಿದರು. ಮಾಮೂಲಿನಂತೆಯೇ ನಟಿಸಿದೆ, ಅಷ್ಟೆ.

ಚಿತ್ರಕ್ಕೆ ರಾಘವೇಂದ್ರ ರಾವ್‌ ನಿರ್ದಿಷ್ಟ ಆಕಾರ ಕೊಟ್ಟದ್ದು ಹೇಗೆ ?
ನಾಗುಬಾಬು, ಅರವಿಂದ್‌ ನಂತರ ರಾಘವೇಂದ್ರ ರಾವ್‌ ಅವರನ್ನು ನಾನು ಬಹಳವಾಗಿ ಮೆಚ್ಚಿದ್ದೇನೆ. ಅವರ ಅನ್ನಮಯ್ಯ ನನಗೆ ತುಂಬಾ ಇಷ್ಟ . ಶಿವನ ಪಾತ್ರವನ್ನು ರಾಘವೇಂದ್ರ ರಾವ್‌ ನನಗೆ ಕೊಟ್ಟಾಕ್ಷಣ ಸಂತೋಷವಾಯಿತು. ಅರ್ಜುನ್‌ ಹಾಗೂ ಸೌಂದರ್ಯ ಪಾತ್ರಗಳು ಚಿತ್ರದ ಹೈಲೈಟ್ಸ್‌. ಇಬ್ಬರೂ ಪಾತ್ರಕ್ಕೆ ಹೇಳಿ, ಮಾಡಿಸಿದಂತಿದ್ದಾರೆ. ಅವರ ನಟನೆಗೆ ಖಂಡಿತ ಪ್ರಶಸ್ತಿ ಸಿಗಲಿದೆ.ಅರ್ಜುನ್‌ ಪಾತ್ರವನ್ನು ನನಗೆ ಕೊಟ್ಟಿದ್ದರೆ ಹಿಂದೂಮುಂದೂ ನೋಡದೆ ಒಪ್ಪಿಕೊಳ್ತಿದ್ದೆ. ಅದು ಅಂತಾ ಘನವಾದ ಪಾತ್ರ.
ಹಂಸಲೇಖಾರ ಟ್ಯೂನ್‌ಗಳು ಸ್ಲೋ ಪಾಯ್ಸನ್‌ ಇದ್ದಂತೆ. ನೀವು ಕೇಳಿದಷ್ಟೂ, ಹಾಡುಗಳ ಆಕರ್ಷಣೆ ಇಮ್ಮಡಿಸುವ ಮಾದಕತೆ ಸಂಗೀತದಲ್ಲಿದೆ. ಶಂಕರ್‌ ಮಹಾದೇವನ್‌ ಹಾಡಿರುವ ಹಾಡಂತೂ ಅದ್ಭುತ. ಶಿವನನ್ನು ಮಂಜುನಾಥ ಟೀಕಿಸುವ ಹಾಡು ಮಧುರ. ಭಾರವಿ 52 ಶಿವರೂಪಗಳ ಬಣ್ಣಿಸಿ ಹಾಡೊಂದ ಬರೆದಿದ್ದಾರೆ. 52 ಪದಗಳ ಈ ಹಾಡಿಗೆ ಹಂಸಲೇಖ 52 ರಾಗಗಳನ್ನು ಅಳವಡಿಸಿದ್ದಾರೆ. ನಿರ್ದೇಶಕರು 52 ಲಿಂಗಗಳ ಮೇಲೆ ಹಾಡನ್ನು ಚಿತ್ರೀಕರಿಸಿದ್ದಾರೆ. ಇದು ಗ್ರೇಟ್‌ ಅಲ್ಲವೇ ! ಸಂಗೀತ ಪ್ರೇಮಿಗಳಿಗೆ ಇದೊಂದು ಅನನ್ಯ ಕೊಡುಗೆ.

ನಿಮ್ಮ ಕಾಲ್‌ಷೀಟ್‌ಗಾಗಿ ಎಷ್ಟೋ ಮಂದಿ ಕಾಯುತ್ತಿದ್ದಾರೆ. ಆದರೆ ನೀವು ಜಯಶ್ರೀ ಅವರಿಗೆ ಡೇಟ್ಸ್‌ ಕೊಟ್ಟಿರಿ...
ಭಾರವಿಯವರ ಮಾತಲ್ಲೇ ಹೇಳೋದಾದರೆ ಇವೆಲ್ಲಾ ಮಂಜುನಾಥನ ಇಚ್ಛೆ !!!(ನಗು). ಭಾರವಿ ಕತೆ ಕೇಳಿದಾಗ, ನನಗದು ಮೆಚ್ಚಾಯಿತು. ಅಂಥಾ ಪಾತ್ರ ಮಾಡುವುದು ನನ್ನ ಕನಸೂ ಆಗಿದ್ದರಿಂದ ಇಪ್ಪತ್ತೇ ನಿಮಿಷಗಳಲ್ಲಿ ಒಪ್ಪಿಕೊಂಡೆ. ತೆಲುಗಿನ ಹೆಂಗಸು ಜಯಶ್ರೀ ದೇವಿ ಕನ್ನಡ ಸಿನಿಮಾರಂಗದ ಟಾಪ್‌ ನಿರ್ಮಾಪಕಿ ಅನ್ನೋದು ಹೆಮ್ಮೆ ಅಲ್ಲವೇ?

English summary
chiranjivi back into sandalwood with his dream character

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada