"ಅತ್ತಿಗೆಯನ್ನು ಭೇಟಿ ಮಾಡಿದೆ": ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಜಾನಿ ಮಾಸ್ಟರ್
ತೆಲುಗಿನ ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಕನ್ನಡ ಸಿನಿಮಾಗಳಲ್ಲೂ ಕೆಲಸ ಮಾಡುತ್ತಿದ್ದಾರೆ. 'ಅಪ್ಪು ಡ್ಯಾನ್ಸ್ ಡ್ಯಾನ್ಸ್', 'ರಾ ರಾ ರಕ್ಕಮ್ಮ' ಸೇರಿದಂತೆ ಹಿಟ್ ಗೀತೆಗಳಿಗೆ ಕೊರಿಯೋಗ್ರಫಿ ಮಾಡಿ ಗೆದ್ದಿದ್ದಾರೆ. ಇದೀಗ ಮತ್ತೊಂದು ಸ್ಪೆಷಲ್ ಸಾಂಗ್ ಶೂಟಿಂಗ್‌ಗಾಗಿ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಇದೇ ವೇಳೆ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಆಗಮಿಸಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ಮಾಡಿದ್ದಾರೆ.
ಅಕಿರ, ರಾಜಕುಮಾರ, ರಾಜರಥ, ನಟಸಾರ್ವಭೌಮ, ಯುವರತ್ನ, ವಿಕ್ರಾಂತ್ ರೋಣ ಸಿನಿಮಾದಲ್ಲಿ ಜಾನಿ ಮಾಸ್ಟರ್ ನಟರನ್ನು ಕುಣಿಸಿದ್ದಾರೆ. ಅಪ್ಪು ಜೊತೆ 3 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಪುನೀತ್ ಕೂಡ ಅದ್ಭುತ ಡ್ಯಾನ್ಸರ್. ಹಾಗಾಗಿ ಇವರಿಬ್ಬರ ನಡುವೆ ಬಹಳ ಆತ್ಮೀಯ ಒಡನಾಟ ಇತ್ತು. 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಸಾಂಗ್‌ನಿಂದ ಕನ್ನಡದಲ್ಲಿ ಜಾನಿ ಮಾಸ್ಟರ್ ಕ್ರೇಜ್ ಹೆಚ್ಚಾಗಿತ್ತು. ಸದ್ಯ 'ಕಬ್ಜ' ಚಿತ್ರದ ಐಟಂ ಸಾಂಗ್ ಶೂಟಿಂಗ್‌ಗಾಗಿ ತೆಲುಗು ಡ್ಯಾನ್ಸ್ ಮಾಸ್ಟರ್ ಕನ್ನಡಕ್ಕೆ ಬಂದಿದ್ದಾರೆ.

ನೈಸ್ ರೋಡ್ ಬಳಿ ಅದ್ಧೂರಿ ಸೆಟ್ ಹಾಕಿ 'ಕಬ್ಜ' ಸಾಂಗ್ ಶೂಟಿಂಗ್ ಮಾಡಲಾಗುತ್ತಿದೆ. ಹಾಡಿಗೆ ಉಪೇಂದ್ರ ಜೊತೆ ತಾನ್ಯಾ ಹೋಪ್ ಹೆಜ್ಜೆ ಹಾಕುತ್ತಿದ್ದಾರೆ. ರಾತ್ರಿ ವೇಳೆ ಸಾಂಗ್ ಚಿತ್ರೀಕರಣ ನಡೀತಿದೆ. ಸಾಂಗ್ ಶೂಟಿಂಗ್‌ಗಾಗಿ ಬೆಂಗಳೂರಿಗೆ ಬಂದಿರುವ ಜಾನಿ ಮಾಸ್ಟರ್ ಮೊದಲು ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಪುನೀತ್ ರಾಜ್‌ಕುಮಾರ್ ಸರ್ ನಿವಾಸದಲ್ಲಿ ನಮ್ಮ ಅತ್ತಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿದೆ, ಅವರು ಸದಾ ನಮ್ಮ ಬೆಂಬಲವಾಗಿ ನಿಲ್ಲುತ್ತಾರೆ. ರಾಜ್‌ಕುಮಾರ್ ಸರ್ ಹಾಗೂ ಅಪ್ಪು ಸರ್ ನೆನಪುಗಳನ್ನು ಮೆಲುಕು ಹಾಕಿದೆ. ಅವರ ಆಶಿರ್ವಾದ ಸದಾ ಇರುತ್ತದೆ" ಎಂದು ಪೋಸ್ಟ್ ಮಾಡಿದ್ದಾರೆ.

ಸದಾಶಿವ ನಗರದ ಪುನೀತ್ ರಾಜ್‌ಕುಮಾರ್ ನಿವಾಸದಿಂದ ಜಾನಿ ಮಾಸ್ಟರ್ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ನಮಿಸಿದ್ದಾರೆ. ಅಲ್ಲಿಂದ 'ಕಬ್ಜ' ಸಾಂಗ್ ಶೂಟಿಂಗ್‌ಗೆ ತೆರಳಿದ್ದಾರೆ. ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಉಪೇಂದ್ರ ಗ್ಯಾಂಗ್‌ಸ್ಟರ್ ಆಗಿ ನಟಿಸಿದ್ದಾರೆ. ಕಿಚ್ಚ ಸುದೀಪ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಮಾರ್ಚ್ 17ಕ್ಕೆ ಅಪ್ಪು ಹುಟ್ಟುಹಬ್ಬದ ಸಂಭ್ರಮದಲ್ಲೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











