»   » ಪ್ರೀತಿ ಜಿಂಟಾ- ರಾಣಿ ಮುಖರ್ಜಿ ಮುಖದಲ್ಲಿ ಬೆವರು !

ಪ್ರೀತಿ ಜಿಂಟಾ- ರಾಣಿ ಮುಖರ್ಜಿ ಮುಖದಲ್ಲಿ ಬೆವರು !

Posted By: Staff
Subscribe to Filmibeat Kannada

ಬೈ : ಬಾಲಿವುಡ್‌ನಲ್ಲಿ ಈ ಹೊತ್ತು ಬಹುತೇಕ ನಟ- ನಟಿಯರು, ನಿರ್ಮಾಪಕರು ನರಕದಲ್ಲಿ ಅದ್ದು ತಂದು ನಿಲ್ಲಿಸಿದಂತೆ -ಕಂ-ಗಾ-ಲಾ-ಗಿದ್ದಾರೆ. ಪ್ರೀತಿ ಜಿಂಟಾ ಮತ್ತು ರಾಣಿ ಮುಖರ್ಜಿ ಮುಖದಲ್ಲಿ ಬೆವರಿಳಿಯುತ್ತಿದೆ. ಇನ್ನೇನು ಇವತ್ತೋ ನಾಳೆಯೋ ಈ ಇಬ್ಬರೂ ನಾಯಕಿಯರೆದುರು ಮುಂಬೈ ಪೊಲೀಸರು ಧುತ್ತೆಂದು ನಿಂತು, ಪ್ರಶ್ನೆಗಳ ಮಳೆಗರೆಯಲಿದ್ದಾರೆ.

'ಚೋರಿ ಚೋರಿ ಚುಪ್ಕೆ ಚುಪ್ಕೆ" ಸಿನೆಮಾದಲ್ಲಿ ನಟಿಸಿರುವ ಈ ನಟಿಯರಿಗೆ ಅದರ ನಿರ್ಮಾಪಕ ಹಾಗೂ ಈಗ ಪೊಲೀಸರ ಅತಿಥಿಯಾಗಿರುವ ನಜೀಂ ರಿಜ್ವಿ ಪರಿಚಯ ಇದೆ. ಆತನಿಗೂ ಭೂಗತ ಜಗತ್ತಿನವರಿಗೂ ಯಾವ ರೀತಿಯ ಸಂಬಂಧವಿದೆ ಎಂಬುದರ ಬಗ್ಗೆ ಸಾಕಷ್ಟು ಮಾಹಿತಿ ಹೆಕ್ಕಲು ಟೊಂಕಕಟ್ಟಿ ನಿಂತಿರುವ ಮುಂಬೈ ಅಪರಾಧಿ ವಿಭಾಗದ ಜಂಟಿ ಆಯುಕ್ತ ಡಿ.ಶಿವಾನಂದ್‌ ನೇತೃತ್ವದ ಪಡೆ ಇಂಚಿಂಚೂ ತಡಕುತ್ತಿದೆ.

ಈಗಾಗಲೇ ನಾಯಕ ನಟ ಸ-ಲ್ಮಾನ್‌ ಖಾನ್‌ ವಿಚಾರಣೆ ನಡೆಸಿರುವ ಪೊಲೀಸರಿಗೆ ಆತನಿಂದಲೂ ಕೆಲ ಮಹತ್ವ ಸುಳಿವುಗಳು ಸಿಕ್ಕಿವೆ. ನಜೀಂ ರಿಜ್ವಿ ತನ್ನ ಸಿನಿಮಾಗೆ ಛೋಟಾ ಶಕೀಲ್‌ ಹಣ ಕೊಟ್ಟಿರುವುದಾಗಿ ಹೇಳಿದ್ದಾರೆ. ಭೂಗತದೊರೆ ದಾವೂದ್‌ ಇಬ್ರಾಹಿಂ ಭಂಟ ಎನ್ನಲಾದ ಛೋಟಾ ಶಕೀಲ್‌ ಇತ್ತೀಚೆಗೆ ಬಿಡುಗಡೆಯಾಗಿರುವ ಡಜನ್ನುಗಟ್ಟಲೆ ಚಿತ್ರಗಳ ಮೇಲೆ ದುಡ್ಡು ಸುರಿದಿರುವುದು ಬಯಲಾಗಿದೆ.

ಯಾರೂ ದೂರಿತ್ತಿಲ್ಲ : ಬಾಲಿವುಡ್‌- ಭೂಗತ ದೊರೆಗಳ ಬಿಗಿ ಕೊಂಡಿ ಬಗ್ಗೆ ಈವರೆಗೆ ಯಾವ ಸಿನಿಮಾ ನಟರೂ ಪೊಲೀಸರಿಗೆ ದೂರಿತ್ತಿಲ್ಲ ; ಕಳೆದ ವರ್ಷ ಹತ್ಯೆ ಸಂಚಿಗೆ ಬಲಿಯಾಗಬೇಕಿದ್ದ ರಾಕೇಶ್‌ ರೋಷನ್‌ ಕೂಡ. ಆದರೆ ಮೈಯೆಲ್ಲಾ ಕಣ್ಣಾಗಿಸಿಕೊಂಡಿರುವ ಪೊಲೀಸರು ಕೂದಲೆಳೆಯಷ್ಟು ವಿಷಯ ಸಿಕ್ಕಿದರೂ ಅದರ ಬೆನ್ನಲ್ಲೇ ಬೆಟ್ಟ ಕಡಿಯುವಷ್ಟು ಚುರುಕಾಗಿ ಬಿಟ್ಟಿದ್ದಾರೆ.

ಅನಿಲ್‌ ಕಪೂರ್‌ ನಟನೆಯ 'ಬುಲಂದಿ" ನಿರ್ಮಾಪಕ ಆಬಿ ಆನಂದ್‌, ಬಾಲಿವುಡ್‌ನ ಮುಂಚೂಣಿ ಫೈನಾನ್ಷಿಯರ್‌ಗಳಾದ ಝಾಮು ಮತ್ತು ಹರೀಶ್‌ ಸುಗಂಧ್‌ ಮೇಲೆ ಪೊಲೀಸರ ಶಂಕೆಯಿದೆ. ದಾವೂದ್‌ ಇಬ್ರಾಹಿಂನ ಒಂದು ಅಡ್ಡೆಯ ನಾಯಕ ಅಬು ಸಲೀಂ ಜೊತೆ ಆನಂದ್‌ ಸಂಬಂಧ ಇಟ್ಟು ಕೊಂಡಿರುವ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದೆ.

ಕಳೆದ ಶುಕ್ರವಾರ ಮುಂಬೈ ಅಪರಾಧಿ ಪೊಲೀಸ್‌ ದಳ ಸುಗಂಧ್‌ ಸಹೋದರರ ಮನೆ ಮೇಲೆ ಹಠಾತ್‌ ದಾಳಿ ನಡೆಸಿ, ಕೆಲವು ಮಹತ್ತರ ದಾಖಲೆಗಳು ಹಾಗೂ ಡೈರಿಗಳನ್ನು ವಶಪಡಿಸಿಕೊಂಡಿದೆ. ಸೋಮವಾರ ಪೊಲೀಸ್‌ ಠಾಣೆಗೆ ಹಾಜರಾಗುವಂತೆ ಸುಗಂಧ್‌ ಸಹೋದರರಿಗೆ ಬುಲಾವನ್ನೂ ಕೊಟ್ಟಿದೆ. ಆದರೆ ಕಳೆದ ಎರಡು ಮೂರು ದಿನಗಳಿಂದ ಸುಗಂಧ್‌ ಸಹೋದರರು ನಾಪತ್ತೆ.

ತಲಾಷಿನಲ್ಲಿ ಅನುಮಾನಗಳ ಬೆನ್ನು ಹತ್ತಿ...

ಚೋರಿ ಚೋರಿ ಚುಪ್ಕೆ ಚುಪ್ಕೆ ನಿರ್ಮಾಪಕರಾದ ನಜೀಂ ರಿಜ್ವಿ ಹಾಗೂ ರಹೀಂ ಖಾನ್‌ ವಿರುದ್ಧ ಕ್ರಮ ಜರುಗಿಸಲು ಪಕ್ಕಾ ಆಡಿಯೋ ಕೆಸೆಟ್ಟುಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದು, ಅನುಮಾನ ಬರುವ ಬಾಲಿವುಡ್‌ನ ಎಲ್ಲರನ್ನೂ ವಿಚಾರಣೆಗೆ ಒಳಪಡಿಸುತ್ತಿದೆ. ಈಗಾಗಲೇ ಸಿಕ್ಕಿರುವ ಮಾಹಿತಿಯಂತೆ ಭೂಗತ ದೊರೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ಕೆಲ ನಿರ್ಮಾಪಕರ ಹೆಸರುಗಳು ಬಯಲಿಗೆ ಬಂದಿವೆ. ಅದಕ್ಕೆ ಪಕ್ಕಾ ಸಾಕ್ಷಿ ಬೇಕಷ್ಟೆ.

ನಟ- ನಟಿಯರ ಸ್ಥಿತಿ ಅಡಿಕೆ ಕತ್ತರಿ ಕೈಲಿ ಸಿಲುಕಿದಂತಾಗಿದೆ. ಯಾರು ತಮ್ಮ ಹಿತ ಕಾಯುವರೋ ಎಂಬ ಅಳಲು. ಪೊಲೀಸರಿಗೆ ಎಲ್ಲಾ ಹೇಳಿಬಿಟ್ಟರೆ ಮರುಕ್ಷಣ ಪ್ರಾಣಪಕ್ಷಿ ಹಾರುವುದೋ ಏನೋ ಎಂಬ ಆತಂಕ. ಹೇಳದಿದ್ದರೆ ಪೊಲೀಸರು ಜುಟ್ಟು ಹಿಡಿಯುತ್ತಾರೆ. ಒಟ್ಟಿನಲ್ಲಿ ಹಿಂದಿ ಚಿತ್ರರಂಗ ಮುಷ್ಟಿಯಲ್ಲಿ ಜೀವ ಹಿಡಿದು ಕೂತಿದೆ.

English summary
Bollywood panics as Mumbai police plan raids, arrests

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada