ಅತ್ತ ವಿನಯ್ ಮಾರ್ಕಂಡೇಯ.. ಇತ್ತ ಅಜಯ್ ಮಾರ್ಕಂಡೇಯ.. ಎಂಥಾ ಕಾಕತಾಳೀಯ
ಕ್ರಿಸ್‌ಮಸ್ ಸಂಭ್ರಮದಲ್ಲಿ ಕನ್ನಡದ ಎರಡು ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಿವೆ. ಪ್ರೇಕ್ಷಕರನ್ನು ರಂಜಿಸುತ್ತಿದೆ. ಭರ್ಜರಿ ಓಪನಿಂಗ್ ಪಡೆದು ಮುನ್ನುಗ್ಗುತ್ತಿವೆ. ಒಂದ್ಕಡೆ 'ಶಿವ'ತಾಂಡವ ಜೋರಾಗಿದೆ. ಮತ್ತೊಂದು ಕಡೆ 'ಮಾರ್ಕ್' ಆರ್ಭಟ ನಡೀತಿದೆ.
ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಸಿನಿರಸಿಕರ ಮನಗೆದ್ದಿದೆ. ಹಬ್ಬದ ರೀತಿ ಪ್ರೇಕ್ಷಕರು ಸಿನಿಮಾವನ್ನು ಅಭಿಮಾನಿಗಳು ಸೆಲೆಬ್ರೇಟ್ ಮಾಡ್ತಿದ್ದಾರೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟನೆ ಸೊಗಸಾಗಿದೆ. ಮೊದಲ ಪ್ರಯತ್ನದಲ್ಲೇ ಜನ್ಯಾ ವಿಭಿನ್ನ ಕಾನ್ಸೆಪ್ಟ್ ತೆರೆಗೆ ತಂದು ಅಚ್ಚರಿ ಮೂಡಿಸಿದ್ದಾರೆ. ಗರುಡ ಪುರಾಣದ ಸುತ್ತ ಕಥೆ ಹೇಳಿ ಪ್ರಯೋಗ ಮಾಡಿದ್ದಾರೆ. ಅತ್ತ 'ಮ್ಯಾಕ್ಸ್' ಛಾಯೆಯಲ್ಲೇ ಬಂದು 'ಮಾರ್ಕ್' ಸಿನಿಮಾ ಅಭಿಮಾನಿಗಳನ್ನು ರಂಜಿಸ್ತಿದೆ. ಆದರೆ ಎರಡೂ ಸಿನಿಮಾಗಳಲ್ಲಿ ಒಂದು ಇಂಟ್ರೆಸ್ಟಿಂಗ್ ಸಂಗತಿಯಿದೆ.

'ಮಾರ್ಕ್' ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರು ಅಜಯ್ ಮಾರ್ಕಂಡೇಯ. ಅಮಾನತುಗೊಂಡ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಧಿಕಾರಿ. ಆತನನ್ನು ಎಲ್ಲರೂ ಆಗಿ 'ಮಾರ್ಕ್' ಎಂದು ಕರೆಯುತ್ತಾರೆ. ಮತ್ತೊಂದು ಕಡೆ ಭಕ್ತ ಮಾರ್ಕಂಡೇಯನ ಕಥೆಯಿಂದ ಪ್ರೇರಣೆಗೊಂಡು '45' ಚಿತ್ರದ ಕಥೆ ಮಾಡಿದಂತೆ ಭಾಸವಾಗುತ್ತದೆ. ಯಥಾವತ್ ಕಥೆ ಅಲ್ಲದೇ ಇದ್ದರೂ ವಿನಯ್(ರಾಜ್ ಬಿ ಶೆಟ್ಟಿ) ಇಲ್ಲಿ ರಾಯಪ್ಪನಿಂದ ಸಂಕಷ್ಟಕ್ಕೆ ಸಿಲುಕಿ ಕೊನೆಗೆ 'ಶಿವ'ಪ್ಪನಿಂದ ಬಚಾವ್ ಆಗುವ ಕಥೆಯಿದೆ. ರಾಯಪ್ಪನೇ ಯಮ, ಶಿವಪ್ಪನೇ ಪರಶಿವ. ಅದು ಯಾಕೆ? ಏನು? ಪ್ಯಾರಲಲ್ ವರ್ಲ್ಡ್ ಕಥೆಯೇನು ಎನ್ನುವುದನ್ನು ತೆರೆಮೇಲೆ ನೋಡಬೇಕು.
ನಮ್ಮ ಪುರಾಣಗಳಲ್ಲಿ ಮಾರ್ಕಂಡೇಯನ ಕಥೆ ಬಹಳ ಪ್ರಸಿದ್ಧಿ. ಮೃಕಂಡು ಮಹರ್ಷಿ ಮಗನಾಗಿದ್ದ ಮಾರ್ಕಂಡೇಯನು 16 ವರ್ಷಗಳ ಅಲ್ಪಾಯುಸ್ಸನ್ನು ಹೊಂದಿರುತ್ತಾನೆ. ಯಮ ಬಂದು ಆತನನ್ನು ಕರೆದೊಯ್ಯಲು ಮುಂದಾಗುತ್ತಾನೆ. ಆದರೆ ಮಾರ್ಕಂಡೇಯ ಶಿವನ ಭಕ್ತಿಯಿಂದ ಯಮನನ್ನು ಗೆದ್ದು, ಚಿರಂಜೀವಿ ಆಗುತ್ತಾನೆ. ಆಯಸ್ಸು ಮುಗಿದಾಗ ಶಿವಲಿಂಗದ ಮುಂದೆ ಮಾರ್ಕಂಡೇಯ ತಪ್ಪಸ್ಸಿಗೆ ಕೂರುತ್ತಾನೆ. ಯಮನೇ ಬಂದು ಕರೆದುಕೊಂಡು ಹೋಗಲು ಮುಂದಾದಾಗ ಶಿವನು ಪ್ರತ್ಯಕ್ಷನಾಗಿ ಯಮನನ್ನು ಹಿಮ್ಮೆಟ್ಟಿಸುತ್ತಾನೆ. ಭಕ್ತಿಯ ಶಕ್ತಿ ಎಂಥದ್ದು ಎಂದು ಸಾರಿ ಹೇಳುವ ಕಥೆಯಿದು. '45' ಟೀಸರ್ ಬಂದಾಗಲೇ ಕಥೆಯ ಬಗ್ಗೆ ಇಂಥಾದೊಂದು ಅನುಮಾನ ಮೂಡಿತ್ತು.

ಸದ್ಯ 'ಮಾರ್ಕ್' ಹಾಗೂ '45' ಮಾರ್ಕಂಡೇಯ ಸದ್ದು ಮಾಡುವಂತಾಗಿದೆ. ಒಂದು ದಿನ ಮೊದ್ಲೆ '45' ಚಿತ್ರದ ಪ್ರೀಮಿಯರ್ ಶೋಗಳು ನಡೆದು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇಂದು(ಡಿಸೆಂಬರ್ 25) ಬೆಳ್ಳಂ ಬೆಳಗ್ಗೆ 'ಮಾರ್ಕ್' ಆರ್ಭಟ ಶುರುವಾಗಿದೆ. ಸುದೀಪ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಎರಡೂ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಗುತ್ತಿದೆ. ಫಸ್ಟ್ ವೀಕೆಂಡ್‌ನಲ್ಲೇ ಭರ್ಜರಿ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ.
ಮಲ್ಟಿಸ್ಟಾರರ್ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಶಿವಣ್ಣ ಹಾಗೂ ಉಪೇಂದ್ರ ಇಬ್ಬರನ್ನು ಸೇರಿ ಒಂದು ಪ್ರಯೋಗಾತ್ಮಕ ಸಿನಿಮಾ ಮಾಡುವುದು. ಅಭಿಮಾನಿಗಳನ್ನು ಒಪ್ಪಿಸುವುದು ಸುಲಭವಲ್ಲ. ಸ್ಟಾರ್ ನಟರು ಒಟ್ಟಿಗೆ ನಟಿಸಿದ್ದಾಗ ಯಾರಿಗೆ ತೆರೆಮೇಲೆ ಎಷ್ಟು ಅವಕಾಶ ಸಿಕ್ತು ಎನ್ನುವ ಪ್ರಶ್ನೆ ಮೂಡುತ್ತದೆ. ಇದು ಫ್ಯಾನ್ಸ್ ವಾರ್‌ಗೆ ಕೂಡ ಕಾರಣವಾಗುತ್ತದೆ. ಆದರೆ ಶಿವಣ್ಣ- ಉಪ್ಪಿ ಅಭಿಮಾನಿ ಆಗಿರುವ ಜನ್ಯಾ ಅದನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ.
ಶಿವಣ್ಣ ಇಂಟರ್‌ವಲ್ ವೇಳೆಗೆ ಬಂದರೂ ಸೆಕೆಂಡ್ ಹಾಫ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಫಸ್ಟ್ ಹಾಫ್‌ನಲ್ಲಿ ಉಪ್ಪಿ ದರ್ಬಾರ್ ಜೋರಾಗಿದೆ. ಅಂತಿಮವಾಗಿ ಕ್ಲೈಮ್ಯಾಕ್ಸ್ ಅದ್ಭುತ ಅನುಭವ ನೀಡುತ್ತದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಕೂಡ ಚೆನ್ನಾಗಿದೆ. ಯಾವುದೇ ಹಾಡು ಇಲ್ಲದೇ ಬಹಳ ಬೇಗ ಕಥೆ ಹೇಳಿ ಮುಗಿಸುವ ಪ್ರಯತ್ನ ಮಾಡಿದ್ದಾರೆ.


Click it and Unblock the Notifications











