ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ; ನಟಿ ಸನ್ನಿ ಲಿಯೋನ್‌ಗೆ CID ನೋಟಿಸ್
ಬೆಳಗಾವಿಯ ಶಿವಂ ಅಸೋಸಿಯೇಟ್ಸ್ 2400 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್‌ಗೆ CID ನೋಟಿಸ್ ನೀಡಿದೆ. ಹೆಚ್ಚು ಬಡ್ಡಿ ಕೊಡುವುದಾಗಿ ನಂಬಿಸಿ ಸಾವಿರಾರು ಹೂಡಿಕೆದಾರರಿಂದ ಕೋಟಿ ಕೋಟಿ ಹಣ ಸಂಗ್ರಹಿಸಿ ವಂಚಿಸಿರುವ ಆರೋಪ ಈ ಕಂಪನಿಯ ಮಾಲೀಕ ಶಿವಾನಂದ ನೀಲಣ್ಣವರ ಮೇಲಿದೆ. ಈ ಸಂಬಂಧ ದೂರು ದಾಖಲಿಸಿಕೊಂಡು CID ತನಿಖೆ ನಡೆಸುತ್ತಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ನೀಲಣ್ಣವರ ಬಂಧನವಾಗಿದ್ದು ಇವತ್ತಿಗೂ ಸಾಕಷ್ಟು ಜನ ಅಧಿಕ ಲಾಭದ ಆಸೆಯಿಂದ ಆತನ ಖಾತೆಗೆ ಹಣ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ 3 ವಾರಗಳಲ್ಲಿ 5 ಕೋಟಿ ರೂ. ಹಣ ಹರಿದುಬಂದಿದೆ. CID ಡಿಐಜಿ ಭೀಮಾಶಂಕರ ಗುಳೇದ ಸುದ್ದಿಗೋಷ್ಠಿ ನಡೆಸಿ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಸಿನಿಮಾ ನಟ-ನಟಿಯರಿಗೆ ವರ್ಗಾವಣೆ ಮಾಡಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ನಟಿ ಸನ್ನಿ ಲಿಯೋನ್ ಅವರಿಗೂ ಹಣ ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ವಿಚಾರಣೆಗೆ ಕರೆಸುತ್ತಿರುವುದಾಗಿ ವಿವರಿಸಿದ್ದಾರೆ.

ಇನ್ನಾದರೂ ಸಾರ್ವಜನಕರು ಎಚ್ಚೆತ್ತುಕೊಳ್ಳಬೇಕು. ಆ ಕಂಪನಿಯನ್ನು ನಂಬಿಕ ಹಣ ಹೂಡಿಕೆ ಮಾಡಬೇಡಿ ಎಂದು ತಿಳಿಸಲು ಸುದ್ದಿಗೋಷ್ಠಿ ನಡೆಸಿದ್ದಾಗಿ ಭೀಮಾಶಂಕರ ಗುಳೇದ ಹೇಳಿದ್ದಾರೆ. ಒಟ್ಟು 40,700 ಜನರಿಂದ ಶಿವಾನಂದ ನೀಲಣ್ಣನವರ 2400 ಕೋಟಿ ರೂ. ಹಣ ಸಂಗ್ರಹಿಸಿ ವಂಚಿಸಿರುವುದು ಗೊತ್ತಾಗಿದೆ. ನೀಲಣ್ಣನವರ ಹಣ ಹೂಡಿಕೆ ಮಾಡಿದವರಿಗೆ ನಿಯಮಿತವಾಗಿ ಹಣ ಕೊಡುತ್ತಿದ್ದಾರೆ. ಜಿಲ್ಲಾಡಳಿತವೇ ಪಿತೂರಿ ನಡೆಸಿ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎನ್ನುವ ಊಹಾಪೋಹಗಳಿಗೆ ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ 20 ಸಾವಿರ ಠೇವಣಿದಾರರ ದಾಖಲೆಗಳನ್ನು ಪರಿಶೀಲಿಸಿದ್ದು ಅದರಲ್ಲಿ 10 ಸಾವಿರ ಜನ ಮಹಾರಾಷ್ಟ್ರದವರು ಎನ್ನುವುದು ಗೊತ್ತಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟು 2400 ಕೋಟಿ ರೂ. ಹಣದಲ್ಲಿ ಒಂದಷ್ಟು ಹಣ ಹಿಂತಿರುಗಿಸಿದ್ದಾರೆ. 540 ಕೋಟಿ ರೂ. ಷೇರು ಮಾರ್ಕೆಟ್ ಅಲ್ಲಿ ಹೂಡಿಕೆ ಮಾಡಿದ್ದು 170 ಕೋಟಿ ನಷ್ಟವಾಗಿದೆ ಎಂದು ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ. ಕಂಪನಿಯಿಂದ ಅಕ್ರಮವಾಗಿ ಬಂದ ಹಣದಲ್ಲಿ 55 ಕೋಟಿ ರೂ. ಹಣವನ್ನು ನೀಲಣ್ಣನವರ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಅದನ್ನೆಲ್ಲಾ ಶೀಘ್ರದಲ್ಲೇ ಜಪ್ತಿ ಮಾಡುತ್ತೇವೆ ಎಂದಿದ್ದಾರೆ.
ನೀಲಣ್ಣನವರ ತನ್ನ ಪ್ರಚಾರಕ್ಕಾಗಿ ಹೂಡಿಕೆದಾರರ ಹಣ ಬಳಸಿ ಬೆಳಗಾಗಿ ಕನ್ನಡ ಹಬ್ಬ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದರು. ಕನ್ನಡ ಸಿನಿಮಾ ತಾರೆಯರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅವರಿಗೆಲ್ಲಾ ಎಷ್ಟು ಹಣ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಅಗತ್ಯಬಿದ್ದರೆ ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ. ಹಾಗಾಗಿ ಅಂದು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಕನ್ನಡ ಸಿನಿಮಾ ತಾರೆಯರಿಗೆ ಢವ ಢವ ಶುರುವಾಗಿದೆ. ಡಾಲಿ ಧನಂಜಯ್, ಸಪ್ತಮಿ ಗೌಡ, ರಾಗಿಣಿ ದ್ವಿವೇದಿ, ದಿಗಂತ್, ಐಂದ್ರಿತಾ ರೇ, ಗಾಯಕ ರಾಜೇಶ್ ಕೃಷ್ಣನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಟಿ ಸನ್ನಿ ಲಿಯೋನ್ ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿಲ್ಲ. ಪತಿ ಹಾಗೂ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಮಾಜಿ ನೀಲಿತಾರೆ ಬಾಲಿವುಡ್ ಅಂಗಳದಲ್ಲಿ ಮಿಂಚಿ ರಂಗೇರಿಸಿದ್ದರು. ಬಿಂದಾಸ್ ಪಾತ್ರಗಳಲ್ಲಿ ನಟಿಸಿದ್ದು ಮಾತ್ರವಲ್ಲ, ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಿದ್ದರು. ಕನ್ನಡದ ಒಂದೆರಡು ಸಿನಿಮಾ ಗೀತೆಗಳಿಗೂ ಕುಣಿದಿದ್ದಾರೆ. ಕ್ರೇಜ್ ಕಮ್ಮಿ ಆಗುತ್ತಿದ್ದತೆ ಸೈಲೆಂಟ್ ಆಗಿಬಿಟ್ಟಿದ್ದಾರೆ.


Click it and Unblock the Notifications