»   » ಅಕ್ಕಿನೇನಿಗೆ ನಾಗೇಶ್ವರರಾವ್‌ಗೆ ಜೀವಮಾನದ ಸಾಧನೆ ಪ್ರಶಸ್ತಿ

ಅಕ್ಕಿನೇನಿಗೆ ನಾಗೇಶ್ವರರಾವ್‌ಗೆ ಜೀವಮಾನದ ಸಾಧನೆ ಪ್ರಶಸ್ತಿ

Posted By: Staff
Subscribe to Filmibeat Kannada

ಚೆನ್ನೈ: ಚಿತ್ರರಂಗದ ಜೀವಿತಾವಧಿಯ ಸಾಧನೆಗಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ಬಳಗ ನೀಡುವ ಸಿನಿಮಾ ಎಕ್ಸ್‌ಪ್ರೆಸ್‌ ಪ್ರಶಸ್ತಿ ಗೆ ಈ ಬಾರಿ ತೆಲುಗು ಚಿತ್ರರಂಗದ ಮೇರು ನಟ ಅಕ್ಕಿನೇನಿ ನಾಗೇಶ್ವರ್‌ ಪಾತ್ರರಾಗಿದ್ದಾರೆ. ಚೆನ್ನೈನ ಜವಾಹರಲಾಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಎಕ್ಸ್‌ಪ್ರೆಸ್‌ ಬಳಗದ ಅಧ್ಯಕ್ಷ ಮನೋಜ್‌ ಕುಮಾರ್‌ ಸೊಂತಾಲಿಯಾ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಕ್ಕಿನೇನಿ ಅವರು, 60 ವರ್ಷಗಳ ಹಿಂದೆ ಮದರಾಸಿನ ಬೀದಿಗಳಲ್ಲಿ ಬರಿಗಾಲಿನಲ್ಲಿ ನಡೆಯುತ್ತಿದ್ದ ದಿನಗಳನ್ನು ನೆನೆಸಿಕೊಂಡರು. ತಮ್ಮ 60 ವರ್ಷದ ಸಾಧನೆಗೆ ಸಿನಿಮಾ ಎಕ್ಸ್‌ಪ್ರೆಸ್‌ ನೀಡಿದ ಗೌರವಕ್ಕೆ ಧನ್ಯವಾದ ಅರ್ಪಿಸಿದರು.


15ನೇ ಬಾರಿ ವಿಷ್ಣುಗೆ ಪ್ರಶಸ್ತಿ : ಯಜಮಾನ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಷ್ಣುವರ್ಧನ್‌, 'ನಾನು ಸಿನಿಮಾ ಎಕ್ಸ್‌ಪ್ರೆಸ್‌ ಪ್ರಶಸ್ತಿ ಪಡೆಯುತ್ತಿರುವುದು ಇದು 15ನೇ ಬಾರಿ. ಪ್ರಶಸ್ತಿ ನೀಡಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಸಿನಿಮಾ ಎಕ್ಸ್‌ಪ್ರೆಸ್‌ಗೆ ನಾನು ಆಭಾರಿ" ಎಂದರು.

ನಿಜವಾಗಿ ಈ ಗೌರವ ಸಲ್ಲಬೇಕಾದ್ದು, ಯಜಮಾನ ಚಿತ್ರದ ನಿರ್ದೇಶಕ ಆರ್‌. ಶೇಷಾದ್ರಿಗೆ. ದುರದೃಷ್ಟವಶಾತ್‌ ಅವರು ನಮ್ಮೊಂದಿಗಿಲ್ಲ. ಅವರು ಮೇಲೆ ನಿಂತು ನನ್ನನ್ನು ಹರಸುತ್ತಿದ್ದಾರೆ ಎಂದು ಭಾವೋದ್ವೇಗಕ್ಕೆ ಒಳಗಾಗಿದ್ದ ವಿಷ್ಣುವರ್ಧನ್‌ ಕಂಬನಿ ಮಿಡಿದರು.

 ಶಾಪ ಚಿತ್ರದ ಅಭಿನಯಕ್ಕಾಗಿ ಅನು ಪ್ರಭಾಕರ್‌ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರೆ, ಸರೋವರ್‌ ಸಂಜೀವ್‌ ಹಾಗೂ ಸುನಿಲ್‌ ಕುಮಾರ್‌ ದೇಸಾಯಿ ಅವರು ಸ್ಪರ್ಶ ಚಿತ್ರಕ್ಕಾಗಿ ಅತ್ಯುತ್ತಮ ನಿರ್ಮಾಪಕ ಹಾಗೂ ನಿರ್ದೇಶಕ ಪ್ರಶಸ್ತಿ ಗಳಿಸಿದರು.

ತೆಲುಗು ವಿಭಾಗದಲ್ಲಿ ಬಾಲಕೃಷ್ಣ ಅತ್ಯುತ್ತಮ ನಟ ಎನಿಸಿಕೊಂಡರೆ, ವಿಜಯಶಾಂತಿ ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡರು. ಮಲಯಾಳಂನ ಅತ್ಯುತ್ತಮ ನಟ ಪ್ರಶಸ್ತಿ ಕಲಾಭವನ್‌ ಮಣಿ ಅವರಿಗೂ, ನಟಿ ಪ್ರಶಸ್ತಿ ನಂದಿನಿ ಅವರಿಗೂ ಲಭಿಸಿತು.

ತಮಿಳು ವಿಭಾಗದ ಅತ್ಯುತ್ತಮ ನಟ ಪ್ರಶಸ್ತಿ ಅಜಿತ್‌ ಪಾಲಾದರೆ, ನಟಿ ಪ್ರಶಸ್ತಿ ಮೀನಾ ಅವರಿಗೆ ದಕ್ಕಿತು. ಈ ವರ್ಷ ಹೊಸದಾಗಿ ಸ್ಥಾಪಿಸಲಾದ ಶಿವಾಜಿ ಗಣೇಶನ್‌ ಪ್ರಶಸ್ತಿಗೆ ತಮಿಳು ನಟ ಶರತ್‌ ಕುಮಾರ್‌ ಪಾತ್ರರಾದರು. ಇದಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮನೋಜ್‌ ಕುಮಾರ್‌ ಸೊಂತಾಲಿಯಾ, ಅಕ್ಕಿನೇನಿ ನಾಗೇಶ್ವರರಾವ್‌, ವಿ. ರಾಮಮೂರ್ತಿ, ಹೀರೋಹೋಂಡಾ ಮೋಟಾರ್ಸ್‌ನ ಉಪಾಧ್ಯಕ್ಷ ಅತುಲ್‌ ಸೋಬ್ತಿ ಜ್ಯೋತಿ ಬೆಳಗಿಸಿ ವರ್ಣರಂಜಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರಶೇಖರ್‌, ನಟ ಬಸಂತ್‌ಕುಮಾರ್‌ ಪಾಟೀಲ್‌ ಹಾಗೂ 8 ಕೋಟಿ ರುಪಾಯಿ ಖರ್ಚು ಮಾಡಿ ಎಚ್‌2ಓ ನಿರ್ಮಿಸಿರುವ ಅದ್ಧೂರಿ ನಿರ್ಮಾಪಕ ಧನರಾಜ್‌ ಸಹ ಪಾಲ್ಗೊಂಡಿದ್ದರು.

English summary
Vishnuvardhan, Anu prabhakar, Sunil kumar Desai bags 21st Hero Honda - Cinema Express awards

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada