»   » ನಿಮ್ಮ ಮೆಚ್ಚಿನ ಕನ್ನಡ ಚಿತ್ರರಂಗ 2001: ಶುಭಂ !

ನಿಮ್ಮ ಮೆಚ್ಚಿನ ಕನ್ನಡ ಚಿತ್ರರಂಗ 2001: ಶುಭಂ !

Posted By: Staff
Subscribe to Filmibeat Kannada

2001 ಕನ್ನಡ ಚಿತ್ರರಂಗದಲ್ಲಿ ಹೊಸ ಮುಖಗಳ ಶಕೆ ಆರಂಭವಾದ ವರ್ಷ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಹಲವಾರು ಹೊಸಮುಖಗಳು ನಾಯಕ, ನಾಯಕಿಯ ಪಟ್ಟಕ್ಕೇರಿದರು. ಮೋಹನ್‌, ಅನಿರುದ್ಧ, ಪ್ರಸಾದ್‌, ಧ್ಯಾನ್‌, ದೀಪಾಲಿ, ಚಿತ್ರಾ, ರೇಖಾ... ಹೀಗೆ ಪಟ್ಟಿ ಬೆಳೆಯುತ್ತಾ ಸಾಗತ್ತೆ.

ಈ ಮಧ್ಯೆ ಚಿತ್ರನಗರಿಯ ಸುತ್ತ ವಿವಾದಗಳ ಹುತ್ತವೂ ಬೆಳೆಯಿತು. ಸಾಕ್ಷಿ ಶಿವಾನಂದ್‌ರ ಅವಳಿ ಪ್ರಕರಣದಿಂದ ಆರಂಭವಾದ ಕನ್ನಡ ಚಿತ್ರರಂಗದ ಕಾಂಟ್ರವರ್ಸಿ, ಚಿತ್ರಪ್ರಶಸ್ತಿಗಳನ್ನೂ ಕಾಡಿತು, ಸ್ವಪ್ನ ಚಿತ್ರಮಂದಿರಕ್ಕಾಗಿ ಬಹಿರಂಗ ಕದನ ನಡೆಯಿತು, ದಿನೇಶ್‌ ಬಾಬು - ರಾಕ್‌ಲೈನ್‌ ಮುನಿಸು, ವಾಣಿಜ್ಯ ಮಂಡಳಿ ಕಟಕಟೆ ಏರಿತು. ಸ್ಯಾಂಡಲ್‌ವುಡ್‌ ಕಿರಿಕಿರಿಗಳು ಪ್ರೇಮಾ-ಶಿಲ್ಪ ಶ್ರೀನಿವಾಸ್‌ ಹಾಗೂ ಉಪೇಂದ್ರ ಮತ್ತು ಧನರಾಜ್‌ರ ಜಗಳದೊಂದಿಗೆ ಕೊನೆಗಂಡಿತು.

ಕಳೆದ ವರ್ಷ ರಾಜ್‌ ಅಪಹರಣದಿಂದ ಸೊರಗಿದ್ದ ಕನ್ನಡ ಚಿತ್ರರಂಗ ಈ ವರ್ಷದ ಆರಂಭದಿಂದ ಲಗುಬಗೆಯ ಕಾರ್ಯಚಟುವಟಿಕೆಯಲ್ಲಿ ತೊಡಗಿತ್ತು. ಚಿತ್ರಗಳ ಮೇಲೆ ಚಿತ್ರಗಳು (ಒಟ್ಟು 70) ಬಿಡುಗಡೆಯಾದವು. ಆದರೆ, ಯಶಸ್ಸು ಕಂಡಿದ್ದು ಮಾತ್ರ ಬೆರಳೆಣಿಕೆಯಷ್ಟು. ಶತ ದಿನೋತ್ಸವ ಆಚರಿಸಿದ್ದು ಕೇವಲ 6. ಇದಕ್ಕೆ ಕಾರಣ ಏನು? ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಪ್ರವೃತ್ತಿ .

ಕಳೆದ ವರ್ಷ ರಾಜ್‌ ಅಭಿನಯದ ಒಂದೇ ಒಂದು ಚಿತ್ರ ಶಬ್ಧವೇದಿ ಬಿಡುಗಡೆ ಆಗಿತ್ತು. ಈ ವರ್ಷ 'ಭಕ್ತ ಅಂಬರೀಶ" ತೆರೆಕಾಣುತ್ತದೆ ಎಂದು ನಿರೀಕ್ಷಿಸಿದ್ದ ರಾಜ್‌ ಅಭಿಮಾನಿಗಳಿಗೆ ನಿರಾಶೆಯಾಯಿತು. ಮಂಡಿ ನೋವಿನಿಂದ ಅಣ್ಣಾವ್ರ ಈ ವರ್ಷ ಬಣ್ಣ ಹಚ್ಚಲೇ ಇಲ್ಲ.

ವಿಷ್ಣುವರ್ಧನ್‌ ಮಾತ್ರ ವರ್ಷವಿಡೀ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಅಂಬರೀಶ್‌ ನಟಿಸಿದ್ದು ಕೆಲವೇ ಚಿತ್ರದಲ್ಲಿ. ಬಹು ನಿರೀಕ್ಷೆ ಹುಟ್ಟಿಸಿದ್ದ ವಿಷ್ಣು -ಅಂಬರೀಶ್‌ ಜೋಡಿಯಾಗಿ ನಟಿಸಿದ 'ದಿಗ್ಗಜರು" ಕೂಡ ಗೆಲ್ಲರಾರದೆ ಹೋಯಿತು. ಫೈರ್‌ಬ್ರಾಂಡ್‌ ವಿಜಯಶಾಂತಿ ಜತೆ ಅಂಬಿ ನಟಿಸಿದ 'ವಂದೇ ಮಾತರಂ", ಹಲವು ಹೀರೋಗಳ 'ಶ್ರೀಮಂಜುನಾಥ" ಕೂಡ ಅಂಬರೀಶ್‌ಗೆ ಬ್ರೇಕ್‌ ಕೊಡಲಾರದೆ ಹೋಯಿತು. ಆದರೆ, ರವಿಚಂದ್ರನ್‌ 'ಉಸಿರೆ", 'ಕನಸುಗಾರ" ಮೂಲಕ ಇದ್ದಿದ್ದರಲ್ಲಿ ತಮ್ಮ ನೆಲೆ ಕಂಡುಕೊಂಡರು.

ಉಪ್ಪಿ ಈ ಬಾರಿ ಸುದ್ದಿ ಮಾಡಿದ್ದೇ ಬೇರೆ ರೀತಿ. 'ಎಚ್‌2ಓ" ಬಿಡುಗಡೆಗೆ ಮೊದಲೆ ಸಾಕಷ್ಟು ಸುದ್ದಿ ಮಾಡಿತು. ವರ್ಷಾಂತ್ಯದಲ್ಲಿ ಧನರಾಜ್‌ರೊಂದಿಗಿನ ಹಾದಿರಂಪ ಬೀದಿ ರಂಪದಿಂದ ಮತ್ತಷ್ಟು ಸುದ್ದಿ ಮಾಡಿದರು. ಶಿವರಾಜ್‌ ಕುಮಾರ್‌ 7ಚಿತ್ರಗಳಲ್ಲಿ ನಟಿಸಿದರೂ ಭಾರಿ ಯಶಸ್ಸಿನ ಕುದುರೆ ಸವಾರಿ ಮಾಡಲಾರದೇ ಹೋದರು.

 ರಮೇಶ್‌ ಕೂಡ 7 ಚಿತ್ರಗಳಲ್ಲಿ ಅಭಿನಯಿಸಿದರು. ಆದರೆ, ಶತದಿನೋತ್ಸವ ಆಚರಿಸಿದ ಕುರಿಗಳ ಹೊರತಾಗಿ ಮತ್ತಾವ ಚಿತ್ರವೂ ರಮೇಶ್‌ಗೆ ಒಲಿಯಲಿಲ್ಲ. ರಮೇಶರ 'ಹೂಂ ಅಂತೀಯಾ, ಊಹೂಂ ಅಂತೀಯಾ" ಮೊದಲಾದ ಚಿತ್ರಗಳಿಗೆ ಪ್ರೇಕ್ಷಕರೂ ಊಹ್ಞೂಂ ಎಂದರು. 'ಹುಚ್ಚ", 'ವಾಲಿ"ಯಿಂದ ಸ್ಪರ್ಶದ ಸುದೀಪ್‌ ತಮ್ಮ ಇಮೇಜ್‌ ಉಳಿಸಿಕೊಂಡರು.

ಜಗ್ಗೇಶ್‌ ಅಂತೂ ಸಂಪೂರ್ಣವಾಗಿ ನೆಲಕಚ್ಚಿದರು. ಉಪೇಂದ್ರನಿಗೆ ತಿರುಗೇಟು ನೀಡಲು 'ಜಿತೇಂದ್ರ"ನಾಗಿ ಬಂದ ಜಗ್ಗೇಶ್‌ ಅಭಿನಯದ 'ಶುಕ್ರದೆಸೆ", 'ಜಿಪುಣ ನನ್ನ ಗಂಡ" ಬಿಟ್ಟರೆ ಉಳಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲೂ ಸೋತವು. ಸದ್ದೇ ಇಲ್ಲದೆ ಬಿಡುಗಡೆ ಆದ ರಾಜೇಂದ್ರ ಅಭಿನಯದ 'ಕಳ್ಳ ಪೋಲೀಸ್‌" ಎಲ್ಲರ ನಿರೀಕ್ಷೆಯನ್ನೂ ಮೀರಿ ಯಶಸ್ಸು ಕಂಡಿದ್ದು ಸ್ಯಾಂಡಲ್‌ವುಡ್‌ ಅನ್ನೇ ಬೆಚ್ಚಿ ಬೀಳಿಸಿತು.

ಸಾಯಿಕುಮಾರ್‌, ವಿನೋದ್‌ ಆಳ್ವ, ವಿನೋದ್‌ರಾಜ್‌, ಥ್ರಿಲ್ಲರ್‌ ಮಂಜು, ದೇವರಾಜ್‌, ಚರಣ್‌ರಾಜ್‌ ಅಭಿನಯದ ಹಲವಾರು ಮಾರಾಮಾರಿ ಚಿತ್ರಗಳು ಹೇಳು ಹೆಸರಿಲ್ಲದಂತೆ ಹೋದವು.

 ಹೊಸ ನಟರಾದ ಧ್ಯಾನ್‌- ದೀಪಾಲಿ ಅಭಿನಯದ ನಾಗತಿಹಳ್ಳಿಯವರ 'ನನ್ನ ಪ್ರೀತಿಯ ಹುಡುಗಿ", ರೇಖಾ-ಅನಿರುದ್ಧ್‌ ಮೊದಲಾದ ಹೊಸಮುಖಗಳ 'ಚಿತ್ರಾ", ಛಾಯಾಸಿಂಗ್‌ರ 'ಚಿಟ್ಟೆ " ಮೊದಲಾದ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೊಸಮುಖಗಳ ಶಕೆಗೆ ನಾಂದಿ ಹಾಡಿತು.

ಹಾಸ್ಯ ಪ್ರಧಾನ ಎನಿಸಿಕೊಂಡು ವಿವಾದಗಳ ನಡುವೆಯೇ ಪ್ರಶಸ್ತಿಯನ್ನೂ ಬಾಚಿಕೊಂಡ 'ಕುರಿಗಳು ಸಾರ್‌ ಕುರಿಗಳು" ಗೆದ್ದರೆ, ಆ ಚಿತ್ರದ ಮೂಲಕ ನಾಯಕನಟನಾಗುವ ಕುರುಹು ತೋರಿದ ಮೋಹನ್‌ ಅಭಿನಯದ 'ಮಿಸ್ಟರ್‌ ಹರಿಶ್ಚಂದ್ರ" ಹೇಳ ಹೆಸರಿಲ್ಲದೆ ಹೋಯಿತು. ಕೆಲವು ಚಿತ್ರಗಳಂತೂ ಒಂದೇ ವಾರದಲ್ಲಿ ಚಿತ್ರಮಂದಿರದಿಂದ ಎತ್ತಂಗಡಿ ಆದವು.

ಈ ಮಧ್ಯೆ ತೆರೆಕಂಡ ಬಿ.ಸಿ. ಪಾಟೀಲರ 'ಲಂಕೇಶ" ಸೈ ಎನಿಸಿಕೊಂಡರೂ, ಪ್ರಶಸ್ತಿ ಪಡೆದ 'ಶಾಪ" ಕೈ ಸುಡುವಂತೆ ಮಾಡಿತು. ನಾಯಕಿಯರ ಮಟ್ಟಿಗೆ ಪ್ರೇಮಾ, ಅನು ಪ್ರಭಾಕರ್‌ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡರು. ಶ್ರುತಿ, ಭಾವನಾ ನೆಲೆ ಕಾಣದೆ ನಲುಗಿದರು. 'ಗಟ್ಟಿಮೇಳ" ಕೂಡ ಶ್ರುತಿ ಗಟ್ಟಿಯಾಗಿ ನಿಲ್ಲಲಾರದಂತೆ ಮಾಡಿತು. ಭರವಸೆಯ ನಟಿ ವಿಜಯಲಕ್ಷ್ಮೀ ಕನ್ನಡ ಚಿತ್ರರಂಗದಿಂದ ಕಳೆದೇ ಹೋದರು.

ರೀಮೇಕ್‌ದೇ ರಾಜ್ಯ: ಈ ವರ್ಷ ತೆರೆಕಂಡದ್ದು 70 ಚಿತ್ರಗಳು. ಇವುಗಳಲ್ಲಿ 34 ಮಾತ್ರ ಸ್ವಮೇಕ್‌ ಉಳಿದ 36 ರೀಮೇಕ್‌. ಬಾಕ್ಸ್‌ ಆಫಿಸ್‌ನಲ್ಲಿ ಗೆದ್ದದ್ದೂ ಕೂಡ ರೀಮೇಕ್‌ ಚಿತ್ರಗಳೇ. ರೀಮೇಕ್‌ ರಾಜ್ಯಬಾರದಲ್ಲಿ ಸ್ವಮೇಕ್‌ ಚಿತ್ರಗಳು ಸೊರಗಿಹೋದವು. ರೀಮೇಕ್‌ ಬೇಕೆ ಬೇಡವೇ ಎಂಬ ಬಗ್ಗೆ ಕೂಡ ಚಿತ್ರನಗರಿಯಲ್ಲಿ ಚರ್ಚೆ ನಡೆದೇ ಇತ್ತು. ಸರಕಾರ ರೀಮೇಕ್‌ಗೆ ನೀಡುವ ಸಬ್ಸಿಡಿಯನ್ನು ಮಾರ್ಚ್‌ 2002ರಿಂದ ನೀಡುವುದಿಲ್ಲ ಎಂದೂ ಪ್ರಕಟಿಸಿತು.

ಬರದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವೂ ನಿಂತು ಹೋಯಿತು. ಕಾಟಾಚಾರಕ್ಕೆ ಸರಕಾರ ಡಿಸೆಂಬರ್‌ ಮಧ್ಯಭಾಗದಲ್ಲಿ ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ನಡೆದ ನೀರಸ ಕಾರ್ಯಕ್ರಮದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ವಿತರಿಸಿ ಕೈ ತೊಳೆದುಕೊಂಡಿತು.

ಮನ್ನಣೆ : ಈ ಬಾರಿ ಕನ್ನಡ ಚಿತ್ರರಂಗಕ್ಕೆ ಕೊಂಚ ನೆಮ್ಮದಿ ತಂದದ್ದು 'ಮುನ್ನುಡಿ", 'ಮುಸ್ಸಂಜೆ", 'ಮತದಾನ" ಮಾತ್ರ. ಮತ್ತೊಮ್ಮೆ ಕನ್ನಡಕ್ಕೆ ಪ್ರತಿಷ್ಠಿತ ಅರವಿಂದನ್‌ ಪ್ರಶಸ್ತಿ ತಂದುಕೊಟ್ಟ ಯುವ ನಿರ್ದೇಶಕ ಪಿ. ಶೇಷಾದ್ರಿ ಅವರ 'ಮುನ್ನುಡಿ" ಕಳೆದ ಬಾರಿ ದೇವೀರಿ ತಂದು ಕೊಟ್ಟ ಹಿರಿಮೆಯನ್ನು ಇಮ್ಮುಡಿಗೊಳಿಸಿತು. ಮತದಾನ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು ರಾಷ್ಟ್ರಮಟ್ಟದಲ್ಲೂ ಸೈ ಎನಿಸಿಕೊಂಡಿತು. ಶಾಪ ಹಾಗೂ ಮುಸ್ಸಂಜೆ ಸದಭಿರುಚಿಯ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಯ್ತು. ಈ ಮಧ್ಯೆ ದಕ್ಷಿಣ ಭಾರತ ಚಿತ್ರಮಂಡಳಿ ಅಧ್ಯಕ್ಷರಾಗಿ ಕೆ.ಸಿ.ಎನ್‌. ಚಂದ್ರ ಆಯ್ಕೆ ಆದದ್ದು ಕನ್ನಡಕ್ಕೆ ಸಿಕ್ಕ ಮತ್ತೊಂದು ಮನ್ನಣೆ.

ಮದುವೆ ಮರುಮದುವೆ : ಈ ಮಧ್ಯೆ ಸುಧಾರಾಣಿ ಮರು ಮದುವೆ ಆದರು, ಅವಿನಾಶ್‌ - ಮಾಳವಿಕರ ಕೈಹಿಡಿದರು, ಅನು ಪ್ರಭಾಕರ್‌ ನಿಶ್ಚಿತಾರ್ಥವೂ ಆಯಿತು, ಸುದೀಪ್‌ ಚತುರ್ಭುಜರಾದರು, ಜನುಮದ ಜೋಡಿಯ ಶಿಲ್ಪ ಮತ್ತು ಅಚ್ಚ ಕನ್ನಡದ ನಟಿ ಸುಮನ್‌ ನಗರ್‌ಕರ್‌ ಗೃಹಸ್ಥಾಶ್ರಮ ಪ್ರವೇಶಿಸಿದರು. ಮಾಲಾಶ್ರೀ ಹಾಗೂ ಸುಧಾರಾಣಿ ಒಂದು ಮಗುವಿನ ತಾಯಿಯೂ ಆದರು.

ಅಗಲಿಕೆ : ಮಾತಿನ ಮಲ್ಲ ಧೀರೇಂದ್ರ ಗೋಪಾಲ್‌, ಅಪ್ಪಟ ಚಿತ್ರ ಸಾಹಿತಿ ವಿಜಯ ನಾರಸಿಂಹ, ರಾಜನ್‌ - ನಾಗೇಂದ್ರ ಸಂಗೀತ ನಿರ್ದೇಶಕ ಜೋಡಿಯ ನಾಗೇಂದ್ರ, ನಾಯಕ ನಟ ಟೈಗರ್‌ ಪ್ರಭಾಕರ್‌ ಇಹಕ್ಕೇ ವಿದಾಯ ಹೇಳಿದರು.

English summary
Kannada film industry and controversy - year 2001

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada