ಸ್ಟಾರ್ಸ್ ಅಂದ ಚೆಂದ ಹೆಚ್ಚಿಸಿದ್ದ ಛಾಯಾಗ್ರಾಹಕ ವಿಷ್ಣುವರ್ಧನ್ ವಿಧಿವಶ
ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಕೆ ಎಂ ವಿಷ್ಣುವರ್ಧನ್ ಅವರು ವಿಧಿವಶರಾಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಅನುಭವಿ ಕ್ಯಾಮೆರಾ ನಿರ್ದೇಶಕ ಇನ್ನಿಲ್ಲ ಎಂಬ ಸುದ್ದಿ ಚಿತ್ರರಂಗಕ್ಕೆ ಆಘಾತ ತಂದಿದೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ವಿಷ್ಣುವರ್ಧನ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ವಿಷ್ಣುವರ್ಧನ್ ಅವರ ನಿಧನಕ್ಕೆ ಚಿತ್ರರಂಗದ ತಾಂತ್ರಿಕ ವರ್ಗ ತೀವ್ರ ಸಂತಾಪ ಸೂಚಿಸಿದೆ. ನಿರ್ದೇಶಕ ಸುಮನ್ ಕಿತ್ತೂರ್, ಗುರಿರಾಜು ಬಿಎಂ ಸೇರಿದಂತೆ ಹಲವು ಬೇಸರ ವ್ಯಕ್ತಪಡಿಸಿದ್ದಾರೆ.
ಸುದೀಪ್ ಅವರ ಹುಬ್ಬಳಿ, ದರ್ಶನ್ ಯೋಧ, ಶಿವಣ್ಣನ ಸುಗ್ರೀವ, ಯಶ್ ಅಭಿನಯದ ರಾಜಾಹುಲಿ, ಸೇರಿದಂತೆ ಕನ್ನಡದ ಕಿರಣ್ ಬೇಡಿ, ಸ್ನೇಹಾಂಜಲಿ, ನೀನ್ಯಾರೇ, ನಾರಿಯ ಸೀರೆ ಕದ್ದ, ಗನ್, ಪಂಗನಾಮ, ಹರಾ, ಬರ್ತ್, ಟೈಸನ್ ಅಂತಹ ಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.
ಇನ್ನು ಸುಮನ್ ಕಿತ್ತೂರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಎದೆಗಾರಿಕೆ' ಸಿನಿಮಾದ ಕಷ್ಟದ ಸಂದರ್ಭದಲ್ಲಿ ಇದೇ ವಿಷ್ಣುವರ್ಧನ್ ಅವರು ಜೊತೆಯಾಗಿದ್ದನ್ನೆ ನೆನಪಿಸಿಕೊಂಡು ಸುಮನ್ ಸಂತಾಪ ಸೂಚಿಸಿದ್ದಾರೆ.

''ಎದೆಗಾರಿಕೆ' ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ರಾಕೇಶ್, ಸಿನಿಮಾದ ಆರಂಭದಲ್ಲೇ ಸಣ್ಣ ಅಪಘಾತಕ್ಕೀಡಾಗಿ ಕೈ fracture ಆಗಿತ್ತು. ಹಾಗೆಯೇ ಶೂಟಿಂಗ್ ನಿಲ್ಲಿಸಿಬಿಟ್ಟರೆ, ಕಲಾವಿದರುಗಳ ಡೇಟ್ ಹೊಂದಾಣಿಕೆ ಹೇಗೆ.... ಎನ್ನುವ ಧಾವಂತದಲ್ಲಿ ಇಡೀ ಚಿತ್ರ ತಂಡವಿದ್ದಾಗ ಇದೇ ರಾಕೇಶ್ ಅವರ ಮೇಲಿನ ಸ್ನೇಹಕ್ಕಾಗಿ ಮತ್ತು ತಮ್ಮ ಹೆಸರಿಗಿಂತಲೂ ನಿರ್ಮಾಪಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು 'ಎದೆಗಾರಿಕೆ' ಚಿತ್ರವನ್ನು ಕಟ್ಟಿಕೊಟ್ಟವರು ಛಾಯಾಗ್ರಾಹಕರಾದ ಸುಜ್ಞಾನ್ ಮತ್ತು ಈ ವಿಷ್ಣುವರ್ಧನ್ ಅವರು.
ಇಂದು ಮುಂಜಾನೆ ವಿಷ್ಣು ಸರ್ ತೀರಿಕೊಂಡ ಸುದ್ದಿ ಕಂಗಾಲಾಗಿಸಿದೆ. ಛೆ ಕ್ಯಾಮೆರಾ ಕಣ್ಣಿನ ವಿಷ್ಣು ಅವರು ಅಪ್ಪಟ ಪ್ರತಿಭಾವಂತ. ಇನ್ನೂ ಕನಸುಗಳಿದ್ದಾಗಲೇ ಅವರ ಅಗಲಿಕೆ ನೋವಿನ ಸಂಗತಿ. ಕನ್ನಡ ಚಿತ್ರರಂಗಕ್ಕೆ ನಷ್ಟವೇ ಸರಿ..'' ಎಂದು ಫೇಸ್ಬುಕ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











