ರೆಸಾರ್ಟ್‌ನಲ್ಲಿ ದರ್ಶನ್ ಫ್ಯಾನ್- ಪುನೀತ್ ಫ್ಯಾನ್ ಮಧ್ಯೆ ನಡೆದಿದ್ದೇನು?: CCTV ಫುಟೇಜ್ ರಿಲೀಸ್
ನಟ ದರ್ಶನ್ ಫ್ಯಾನ್ಸ್ ಹಾಗೂ ನಟ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಮಧ್ಯೆ ಪದೇ ಪದೇ ಸಂಘರ್ಷ ನಡೀತಾನೆ ಇದೆ. ಶನಿವಾರ ರಾತ್ರಿ ಮೈಸೂರಿನ ಸೋಶಿಯಲ್ ರೆಸಾರ್ಟ್‌ನಲ್ಲಿ ದರ್ಶನ್ ಅಭಿಮಾನಿ ಅಪ್ಪು ಅಭಿಮಾನಿ ಯಶ್ವಂತ್ ಕುಮಾರ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಯಶ್ವಂತ್ ದೂರು ಕೂಡ ದಾಖಲಿಸಿದ್ದರು.
ಪ್ರಕರಣ ಸಂಬಂಧ ಈಗ ದರ್ಶನ್ ಟೀಂ ಸ್ಪಷ್ಟನೆ ನೀಡಿದೆ. ಅಂದು ರಾತ್ರಿ ರೆಸಾರ್ಟ್‌ನಲ್ಲಿ ಏನೆಲ್ಲಾ ನಡೀತು ಎನ್ನುವುದನ್ನು ಸಿಸಿಟಿವಿ ಫುಟೇಜ್ ಸಮೇತ ವಿವರಿಸಿದ್ದಾರೆ. ಈ ಸಂಬಂಧ ದರ್ಶನ್ ಆಪ್ತ ನಾಗರಾಜ್ ಅಂದು ಏನೆಲ್ಲಾ ನಡೀತು ಎನ್ನುವುದನ್ನು ಹೇಳಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ದರ್ಶನ್ ಅಭಿಮಾನಿ ಎಂದು ಕೇಳಿಕೊಂಡು ಫೋಟೊ ಕ್ಲಿಕ್ಕಿಸಿಕೊಂಡವರು ಯಾಕೆ ಹೀಗೆ ಮಾಡಿದ್ರು ಗೊತ್ತಿಲ್ಲ ಎಂದಿದ್ದಾರೆ.

ಯಶ್ವಂತ್, ಡಿಜೆ ಆಪರೇಟರ್ ಬಳಿ ಅಪ್ಪು ಹಾಡು ಹಾಕಲು ಕೇಳಿದ್ದರಂತೆ. ನಂತರ ಹಾಕುತ್ತೇನೆ ಎಂದು ಆತ ಹೇಳಿದ್ದನಂತೆ. ಅಪ್ಪು ಹಾಡು ಕೇಳಿದ್ದಕ್ಕೆ ಸ್ಥಳದಲ್ಲೇ ಇದ್ದ ದರ್ಶನ್ ಅಭಿಮಾನಿ ಏಕಾಏಕಿ ಹಲ್ಲೆಗೆ ಮುಂದಾಗಿದ್ದ ಎಂದು ಯಶ್ವಂತ್ ಆರೋಪಿಸಿದ್ದರು. ಅಪ್ಪು ಮತ್ತು ಅಣ್ಣಾವ್ರ ಹಾಡನ್ನು ಕೇಳಿದ್ದಕ್ಕೆ ಥಳಿಸಿದರು ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಡೆದ ವೇಳೆ ದರ್ಶನ್ ಕೂಡ ಇದ್ದರು. ಆದರೂ ಗಲಾಟೆ ಬಿಡಿಸುವ ಗೋಜಿಗೆ ಹೋಗಲಿಲ್ಲ ಎನ್ನಲಾಗಿತ್ತು.
ನಾಗರಾಜ್ ಮಾತನಾಡಿ "ಅಂದು ರಾತ್ರಿ ನಾವು ಊಟ ಮಾಡುತ್ತಾ ಕೂತಿದ್ದೆವು. ಆಗ ಒಬ್ಬರು ಲೇಡಿ ಬಂದರು. ಇಂದು ನನ್ನ ಹುಟ್ಟುಹಬ್ಬ ಎಂದು ತಾವೇ ದರ್ಶನ್ ಬಳಿ ಪರಿಚಯ ಮಾಡಿಕೊಂಡಿದ್ದರಂತೆ. ದರ್ಶನ್ ಅವರು ಆಕೆಗೆ ಶುಭ ಕೋರಿ ಫೋಟೊ ಕೂಡ ಕೊಟ್ಟಿದ್ದರಂತೆ. ಅದೇ ಖುಷಿ ಆ ಮಹಿಳೆ ಹೋಗಿ ತಮ್ಮ ಟೇಬಲ್‌ನಲ್ಲಿ ಕೂತಿದ್ದ ಅವರ ಪತಿಯನ್ನು ಕರೆದುಕೊಂಡು ಬಂದರು. ಅವರು ಡ್ರಿಂಕ್ಸ್ ಮಾಡಿದ್ದರು. ನನ್ನ ಗಂಡ ಆಕೆ ಎಂದು ಪರಿಚಯಿಸಿದರು. ದರ್ಶನ್ ಅವರೊಟ್ಟಿಗೆ ಫೋಟೊ ಕೂಡ ತೆಗೆಸಿಕೊಂಡಿದ್ದರಂತೆ."
"ಆ ಮಹಿಳೆ ನಂತರ ತಮ್ಮ ಕುಟುಂಬದ ಸದಸ್ಯರನ್ನೆಲ್ಲಾ ಕರೆದುಕೊಂಡು ಬಂದು ದರ್ಶನ್ ಅವರ ಜೊತೆ ಫೋಟೊ ತೆಗೆಸಿಕೊಂಡರು. ದರ್ಶನ್ ಅವರು ಕೂಡ ಖುಷಿಯಿಂದಲೇ ಎಲ್ಲರನ್ನು ಮಾತನಾಡಿಸಿ ಫೋಟೊ ಕೊಟ್ಟಿದ್ದರು. ಅದೆಲ್ಲಾ ಆದಮೇಲೆ ಅವರು ಡಿಜೆ ಬಳಿ ಹೋಗಿದ್ದಾರೆ. ಡಿಜೆ ನಮ್ಮ ಟೇಬಲ್ ಇಂದ ದೂರ ಇದ್ದರು. ಡಿಜೆ ಬಳಿ ಏನೋ ಮಾತುಕತೆ ನಡೆದಿದೆ. ಆದರೆ ಪ್ರಚಾರಕ್ಕಾಗಿ ದರ್ಶನ್ ಸರ್ ಹೆಸರು ತಂದಿದ್ದಾರೆ"

"ಡಿಜೆ ಬಳಿ ಪುನೀತ್ ಹಾಡು ಬೇಕು ಎಂದು ಮಾತನಾಡಿರುವುದು. ಅದು ದೂರದಲ್ಲಿ ಇದ್ದ ನಮಗಾಗಲಿ, ದರ್ಶನ್ ಅವರಿಗಾಗಲಿ ಹೇಗೆ ಗೊತ್ತಾಗುತ್ತದೆ. ಪಬ್ ಡಿಜೆ ಸೌಂಡ್‌ನಲ್ಲಿ ಯಾರು ಯಾರೊಟ್ಟಿಗೆ ಏನು ಮಾತನಾಡಿದರು ಎನ್ನುವುದು ನಮಗೆ ಹೇಗೆ ಗೊತ್ತಾಗಬೇಕು. ಮಾಲೀಕರು ಗಲಾಟೆ ನಿಲ್ಲಿಸಲಿಲ್ಲ ಎಂದು ಯಶ್ವಂತ್ ಹೇಳಿದ್ದಾರೆ. ಆದರೆ ಗಲಾಟೆಯೇ ಆಗದೇ ಇದ್ದಾಗ ನಾವು ಹೇಗೆ ಬಿಡಿಸುವುದು. ನಾವು ಹಾಗೂ ಹರ್ಷ ಮೆಲಂಟ ಎಲ್ಲರೂ ಒಟ್ಟಿಗೆ ಇದ್ದೆವು. ನಾವೇ ಅವರ ಫೋಟೊ ಹಿಡಿದು ಕೊಟ್ಟಿದ್ದೆವು"
"ಮಾಲೀಕರಾದವರು ಗಲಾಟೆ ಆಗಿದ್ದರೆ ಬಿಡಿಸುತ್ತಿದ್ದರು ಅಲ್ಲವೇ? ಶನಿವಾರ ಎಲ್ಲವೂ ಫೋಟೊ ತೆಗೆಸಿಕೊಂಡು ಹೋಗಿದ್ದೀರಾ? ಒಂದು ವೇಳೆ ಗಲಾಟೆ ಆಗಿದ್ದರೆ ಅಂದೇ ಏಕೆ ದೂರು ನೀಡಲಿಲ್ಲ. ಭಾನುವಾರದ ರಾತ್ರಿವರೆಗೂ ಕಾದಿದ್ದು ಯಾಕೆ? ಮೊದಲೇ ದೂರು ಯಾಕೆ ಕೊಡಲಿಲ್ಲ. ನಿಮಗೆ ಭಯ ಇದ್ದಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಬೇಕಿತ್ತು ಅಲ್ಲವೇ? ಭಾನುವಾರ ದೂರಿನಲ್ಲಿ ದರ್ಶನ್ ಸರ್, ಅವರ ಸಂಗಡಿಗರ ಹೆಸರು ಸೇರಿಸುತ್ತೀರಾ? 24 ಗಂಟೆಯಲ್ಲಿ ನಿಮಗೆ ಯಾರು ಏನು ಹೇಳಿಕೊಟ್ಟರು? ಎಂದು ನಾಗರಾಜ್ ಕೇಳಿದ್ದಾರೆ.

"ಇದೆಲ್ಲಾ ಬೇಕು ಅಂತ ಮಾಡುತ್ತಿರುವ ಪಿತೂರಿ. ದರ್ಶನ್ ಅವರ ಹೆಸರಿಗೆ ಕಳಂಕ ತರಲು ಮಾಡುತ್ತಿರುವ ಷಡ್ಯಂತ್ರ. ದರ್ಶನ್ ಅವರ ಹೆಸರು ತಂದರೆ ನಿಮಗೆ ಮೈಲೇಜ್ ಸಿಗುತ್ತೆ ಅಂತನಾ? ಅವ್ರು ಸೈಲೆಂಟ್ ಆಗಿ ಇರುವೇ ತಪ್ಪಾ? ನಿಮ್ಮ ಉದ್ದೇಶ ಏನು ಎನ್ನುವುದು ಗೊತ್ತಾಗಬೇಕು. ನಾವೆಲ್ಲಾ ಸುಮ್ಮನಿದ್ದೇವೆ ಎಂದುಕೊಂಡಿದ್ದರೆ ನಿಮ್ಮ ಭ್ರಮೆ. ಇದು ಹೀಗೆ ಮುಂದುವರಿದರೆ ಅದರ ಪರಿಣಾಮ ಏನಾಗುತ್ತದೆ ಎಂದು ತೋರಿಸುತ್ತೇವೆ. ಹೆಸರು ಬೇಕಿದ್ದರೆ ಒಳ್ಳೆ ಕೆಲಸ ಮಾಡಿ. ಅಪ್ಪು ಸರ್ ಹೆಸರಲ್ಲೂ ಮಾಡಿ, ದರ್ಶನ್ ಸರ್ ಹೆಸರಲ್ಲೂ ಮಾಡಿ. ಸುಮಾರು ದಿನಗಳಿಂದ ಹೀಗೆ ಆಗುತ್ತಿದೆ. ನಿಮ್ಮ ಬೇಳೆ ಬೇಯಿಸಿಕೊಳ್ಳಲು ಇಬ್ಬರು ನಟರ ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದೀರಾ, ಇದು ಬೇಡ" ಎಂದಿದ್ದಾರೆ.


Click it and Unblock the Notifications











