ಸೆಲೆಬ್ರೇಷನ್ನೋ-ಕಾಂಪಿಟೇಷನ್ನೋ? ಪ್ರೂವ್ ಮಾಡೋ ಅವಶ್ಯಕತೆ ನನಗೆ ಇಲ್ಲ,ಕ್ರಿಸ್ಮಸ್‌ಗೆ ನನ್ನ ಸಿನಿಮಾ ಬರುತ್ತೆ - ಸುದೀಪ್
ಡಿಸೆಂಬರ್ ಕನ್ನಡ ಚಿತ್ರರಂಗಕ್ಕೆ ''ಲಕ್ಕಿ'' ಎನ್ನುವುದು ಹಲವರ ನಂಬಿಕೆ. ಹಾಗೇ ನೋಡಿದರೆ ಈ ಮಾತು ನಿಜಾ ಕೂಡ ಹೌದು. ಯಾಕೆಂದರೆ.. ಡಿಸೆಂಬರ್‌ನಲ್ಲಿ ತೆರೆಗೆ ಬಂದ ಹಲವಾರು ಕನ್ನಡದ ಚಿತ್ರಗಳು ಚಿನ್ನದ ಬೆಳೆ ಬೆಳೆದಿವೆ. ''ಮುಂಗಾರು ಮಳೆ''ಯಿಂದ ಹಿಡಿದು ''ಕಿರಿಕ್ ಪಾರ್ಟಿ''ಯವರೆಗೆ.. ''ಕಾಟೇರ''ದಿಂದ ಹಿಡಿದು ''ಮ್ಯಾಕ್ಸ್''ವರೆಗೆ.. ಡಿಸೆಂಬರ್‌ನಲ್ಲಿ ಬಿಡುಗಡೆಯಾದ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ.
ಈ ಹಿನ್ನೆಲೆ.. ಡಿಸೆಂಬರ್ ಬಂದರೆ ಸಾಕು, ಕನ್ನಡ ಚಿತ್ರದಲ್ಲಿ ನೂಕು ನುಗ್ಗಲಿನ ವಾತಾವರಣ ಸೃಷ್ಟಿಯಾಗುತ್ತೆ. ಅದರಲ್ಲಿಯೂ ಕಳೆದ ಕೆಲ ವರ್ಷಗಳಿಂದಂತೂ ಡಿಸೆಂಬರ್‌ಗೆ ಭಾರೀ ಡಿಮ್ಯಾಂಡ್ ಇದೆ. ದೊಡ್ಡ ದೊಡ್ಡ ಸ್ಟಾರ್‌ಗಳಿಗೆಲ್ಲಾ ತಮ್ಮ ಚಿತ್ರ ಡಿಸೆಂಬರ್‌ನಲ್ಲಿಯೇ ಬಿಡುಗಡೆಯಾಗಬೇಕು ಎಂಬ ಹಂಬಲ.

ಈ ವರ್ಷ ಕೂಡ ಪರಿಸ್ಥಿತಿ ಭಿನ್ನವೇನು ಇಲ್ಲ. ಕೇವಲ ಎರಡೇ ವಾರದಲ್ಲಿ ಮೂರು ದೊಡ್ಡ ಚಿತ್ರಗಳು ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿವೆ. ಈ ಬೆಳವಣಿಗೆ ಕನ್ನಡ ಚಿತ್ರರಂಗಕ್ಕೆ ಎಷ್ಟರ ಮಟ್ಟಿಗೆ ಪೂರಕವಾಗಿರಲಿದೆ.. ಮಾರಕವಾಗಿರಲಿದೆ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಹಲವು ಚಿತ್ರಪ್ರೇಮಿಗಳು ಈ ಸಿನಿ ಸುನಾಮಿ ಅಪ್ಪಳಿಸದಿರಲಿ ಎಂದು ಪ್ರಾರ್ಥನೆ ಮಾಡಿದ್ದರು. ಹರಿಬಿರಿ ಮಾಡದೇ ಕೊನೆ ಪಕ್ಷ ಯಾರಾದರೂ ಒಬ್ಬರಾದರು ಮುಂದೆ ಹೋಗಲಿ ಎಂದು ಆಶಿಸಿದ್ದರು.
ಆದರೆ.. ಅದ್ಯಾಕೋ ಯಾರು ಮನಸು ಮಾಡುತ್ತಿಲ್ಲ. ಬದಲಿಗೆ ಡಿಸೆಂಬರ್‌ನಲ್ಲಿಯೇ ಬರುವ ಹಠವನ್ನು ಹಿಡಿದಿದ್ದಾರೆ. ಇದಕ್ಕೆ ಸುದೀಪ್ ಅವರ ಮಾತುಗಳೇ ಸಾಕ್ಷಿ. ಹೌದು, ಎಲ್ಲರಿಗೆ ಗೊತ್ತಿರುವಂತೆ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇದ್ದರೂ ಕೂಡ ಅವರ ''ಡೆವಿಲ್'' ಚಿತ್ರವನ್ನು ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಡಿಸೆಂಬರ್ 12ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಣೆಯನ್ನು ಕೂಡ ಮಾಡಿದೆ.
ಇನ್ನೂ.. ಡೆವಿಲ್ ತಾನು ಅಖಾಡಕ್ಕಿಳಿಯುವ ದಿನಾಂಕವನ್ನು ಹೇಳುವ ಮೊದಲು ಅರ್ಜುನ್ ಜನ್ಯ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ ''45'' ಚಿತ್ರದ ಬಿಡುಗಡೆಯ ದಿನವನ್ನು ಘೋಷಿಸಿದ್ದರು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದ್ದರು.
ಆದರೆ ಇವರಿಬ್ಬರಿಗಿಂತ ಮೊದಲು ಜುಲೈನಲ್ಲಿಯೇ ಇನ್ನೂ ಹೆಸರಿಡದ ತಮ್ಮ ಚಿತ್ರ ಈ ಕ್ರಿಸ್ಮಸ್ ಹಬ್ಬಕ್ಕೆ ತೆರೆಗೆ ಬರುತ್ತೆ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಅದ್ಯಾಗೂ ಅರ್ಜುನ್ ಜನ್ಯ ಆಗಲಿ ಡೆವಿಲ್ ತಂಡವಾಗಲಿ ಈ ಕುರಿತು ಆಲೋಚನೆ ಮಾಡಿದಂತೆ ಇಲ್ಲ ಅಥವಾ ಮಾಡುವ ಮನಸು ಮಾಡಿರಲಿಕ್ಕಿಲ್ಲ. ಬದಲಿಗೆ ಡಿಸೆಂಬರ್‌ನಲ್ಲಿಯೇ ರಣರಂಗಕ್ಕೆ ಧುಮುಕುವುದಾಗಿ ಹೇಳಿದ್ದರು.

ಹೀಗಾಗಿ ಕನ್ನಡ ಚಿತ್ರರಂಗದಲ್ಲಿರುವ ಕೆಲವೇ ಕೆಲ ಪ್ರಬುದ್ಧ ನಟರಲ್ಲಿ ಒಬ್ಬರಾಗಿರುವ ಸುದೀಪ್, ಈ ಬಾರಿ ಕೂಡ ತಾವೇ ಮುಂದಡಿ ಇಡುತ್ತಾರೆ, ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡುತ್ತಾರೆ ಎಂದು ಎಲ್ಲರೂ ಲೆಕ್ಕಾಚಾರವನ್ನು ಹಾಕಿದ್ದರು. ಆದರೆ ಈ ಲೆಕ್ಕಾಚಾರಗಳನ್ನು ಸುದೀಪ್ ಸದ್ಯ ಬುಡಮೇಲಾಗಿಸಿದ್ದಾರೆ. ಯಾರು ಬಂದ್ರೇನು ನನ್ನ ಚಿತ್ರ ನಾನು ಹೇಳಿದ ದಿನದಂದೇ ಬಿಡುಗಡೆಯಾಗುತ್ತೆ ಎಂಬರ್ಥದಲ್ಲಿ ಮಾತನಾಡಿದ್ಧಾರೆ.
ಈ ಕುರಿತು ಇಂದು (ಸೆಪ್ಟೆಂಬರ್ 1) ಮಾತನಾಡಿರುವ ಸುದೀಪ್, ಸೆಲೆಬ್ರೇಷನ್ನೋ ಅಥವಾ ಕಾಂಪಿಟೇಷನ್ನೋ.. ಅದು ಅವರವರ ದೃಷ್ಟಿಕೋನ. ನೀವು ಹೇಗಾದರೂ ಅಂದುಕೊಳ್ಳಬಹುದು ಎಂದು ಹೇಳಿದ್ದಾರೆ. ನಾನು ಸಿನಿಮಾ ಮಾಡುತ್ತಿರುವುದು ನನ್ನ ನಿರ್ಮಾಪಕರಿಗೆ.. ನನ್ನ ಅಭಿಮಾನಿಗಳಿಗೆ.. ನನ್ನ ಚಿತ್ರಮಂದಿರದವರಿಗೆ.. ನನ್ನ ಚಿತ್ರರಂಗಕ್ಕೆ ಎಂದು ಕೂಡ ಹೇಳಿದ್ದಾರೆ.
ಮುಂದುವರೆದು ಚಾಲೆಂಜ್ ಮಾಡ್ಕೊಂಡು, ಪ್ರೂವ್ ಮಾಡ್ಕೊಂಡು ಕೂರುವ ಸ್ವಭಾವ ನನ್ನದಲ್ಲ ಎಂದು ಹೇಳಿರುವ ಸುದೀಪ್, ಜುಲೈ 5ರಂದೇ ನಾನು ನನ್ನ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ್ದೇ, ಆ ಸಮಯದಲ್ಲಿ ಯಾವೆಲ್ಲ ಸಿನಿಮಾಗಳು ಘೋಷಣೆ ಆಗಿದ್ದವು ಎಂಬುದನ್ನು ನೋಡಿದರೆ ನಿಮಗೆ ಗೊತ್ತಾಗುತ್ತೆ, ಅಲ್ಲಿಯೇ ನಿಮಗೆ ಉತ್ತರ ಸಿಗುತ್ತೆ, ಹೀಗಾಗಿ ಆ ಎಲ್ಲಾ ವಿಚಾರ ಯೋಚನೆ ಮಾಡ್ಕೊಂಡು ಕೂರೋಕೆ ನನಗೆ ಪುರಸೊತ್ತು ಇಲ್ಲ ಎಂದು ಹೇಳಿರುವ ಸುದೀಪ್, ನನ್ನ ನಿರ್ಮಾಪಕರನ್ನು ನಾನು ಕಾಪಾಡಬೇಕು, ನನ್ನ ಸಿನಿಮಾನ ಕಾಪಾಡಬೇಕು, ಅದಕ್ಕೋಸ್ಕರ ಹಗಲು ರಾತ್ರಿ ಕೆಲಸ ಮಾಡಬೇಕು ಎಂಬ ನಿರ್ಧಾರವನ್ನು ನಾನು ಮಾಡಿದ್ದು ಯಾವಾಗಲೋ, ಆ ಧೈರ್ಯದ ಮೇಲೆ ತಾನೇ ಜುಲೈ 5ರಂದು ನಾನು ನಿಮ್ಮೆಲ್ಲರ ಎದುರು ನನ್ನ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದು ಎಂದು ಹೇಳಿದ್ದಾರೆ. ಹೀಗಿರಬೇಕಾದರೆ ಇವೆಲ್ಲಾ ನನಗೆ ಕೌಂಟ್ ಆಗಲ್ಲ ಎಂದು ಕೂಡ ಹೇಳಿದ್ದಾರೆ. ಈ ಮೂಲಕ ಮುಂದೆ ಹೋಗುವ ಪ್ರಶ್ನೆ ಇಲ್ಲ ಕ್ರಿಸ್ಮಸ್ ಹಬ್ಬದಂದೇ ತಮ್ಮ ಚಿತ್ರ ಬಿಡುಗಡೆಯಾಗುತ್ತಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ ಸುದೀಪ್.


Click it and Unblock the Notifications











