ಅಭಿವಾ ಪಾರ್ಟಿಯಲ್ಲಿ ಜೋಡೆತ್ತು ಡ್ಯಾನ್ಸ್: 'ಹೇ ಜಲೀಲಾ' ಎಂದು ಕುಣಿದ ದರ್ಶನ್, ಯಶ್, ಸುಮಲತಾ
ಅಂಬಿ ಕನಸಿನಂತೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಮದುವೆ ಮಾಡಿ ಮುಗಿಸಿದ್ದಾರೆ. ಆದರೆ ಮದುವೆ ಸಂಭ್ರಮ ಮಾತ್ರ ಇನ್ನು ಕಮ್ಮಿ ಆಗಿಲ್ಲ. ಸೋಮವಾರ ಮಾಂಗಲ್ಯಧಾರಣೆ, ಬುಧವಾರ ಆರತಕ್ಷತೆ ಕಾರ್ಯಕ್ರಮದ ನಂತರ ನಿನ್ನೆ(ಜೂನ್ 10) ನಗರದ ಖಾಸಗಿ ಹೋಟೆಲ್‌ನಲ್ಲಿ ಆಪ್ತರಿಗಾಗಿ ಸುಮಲತಾ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ದರ್ಶನ್, ಯಶ್ ಸೇರಿದಂತೆ ಸಾಕಷ್ಟು ತಾರೆಯರು ಭಾಗಿಯಾಗಿದ್ದರು.
ಕ್ಲಬ್ ಅಭಿವಾ ಹೆಸರಿನಲ್ಲಿ ಆಯೋಜನೆಗೊಂಡಿದ್ದ ಸಂಗೀತ್ ಪಾರ್ಟಿಯಲ್ಲಿ ಎಲ್ಲರೂ ಬಿಂದಾಸ್ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ. ಅದರ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. 'ಬುಲ್ ಬುಲ್' ಚಿತ್ರದ 'ಜ್ಯೂನಿಯರ್ ಸೀನಿಯರ್' ಸಾಂಗ್‌ಗೆ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಆ ವಿಡಿಯೋ ಸದ್ದು ಮಾಡುತ್ತಿದ್ದಂತೆ ಇದೀಗ 'ಹೇ ಜಲೀಲಾ' ಹಾಡಿಗೆ ದರ್ಶನ್, ಯಶ್, ಸುಮಲತಾ ಅಂಬರೀಶ್ ಡ್ಯಾನ್ಸ್ ಮಾಡಿರೋ ವಿಡಿಯೋ ಹರಿದಾಡ್ತಿದೆ.

ಅಭಿಷೇಕ್ ಹಾಗೂ ಅವಿವಾ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ. ಸೋಮವಾರ ಧಾರೆಗೆ ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು, ಸುಹಾಸಿನಿ, ಯಶ್, ಸುದೀಪ್ ಸೇರಿದಂತೆ ಸಾಕಷ್ಟು ಗಣ್ಯರು ಬಂದು ಶುಭ ಕೋರಿದ್ದರು. ಬುಧವಾರ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ, ನಟ ದರ್ಶನ್ ಸೇರಿದಂತೆ ಚಿತ್ರರಂಗ ತಾರೆಯರು, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿಎಂ ಸಿದ್ಧರಾಮಯ್ಯ ಸೇರಿದಂತೆ ರಾಜಕೀಯ ಮುಖಂಡರು ಆಗಮಿಸಿಸಿದ್ದರು.
ಜೋಡೆತ್ತು ಡ್ಯಾನ್ಸ್ ಸೂಪರ್
ಕ್ಲಬ್ ಅಭಿವಾ ಪಾರ್ಟಿಯಲ್ಲಿ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ 'ಹೇ ಜಲೀಲಾ' ಹಾಡಿಗೆ ದರ್ಶನ್, ಯಶ್ ಹೆಜ್ಜೆ ಹಾಕಿದ್ದಾರೆ. ಸುಮಲತಾ ಅವರಿಗೆ ಸಾಥ್ ಕೊಟ್ಟಿದ್ದಾರೆ. ಯಶ್ ಕಪ್ಪು ಬಣ್ಣದ ಶೇರ್ವಾನಿ- ಧೋತಿ ಧರಿಸಿ ಕಾಣಿಸಿಕೊಂಡಿದ್ದಾರೆ. ದರ್ಶನ್ ತೊಟ್ಟಿದ್ದ ಸೂಟ್ ಬ್ಲೇಸರ್ ತೆಗೆದು ಕಪ್ಪು ಬಣ್ಣದ ಟೀಶರ್ಟ್- ಪ್ಯಾಂಟ್‌ನಲ್ಲಿ ಮಿಂಚಿದ್ದಾರೆ. ಮೂರು ಜನ ಸ್ಟೇಜ್ ಮೇಲೆ ಅಂಬಿ ಮ್ಯಾನರಿಸಂ ಟ್ರೈ ಮಾಡಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಖತ್ ಸದ್ದು ಮಾಡ್ತಿದೆ.
ವೇದಿಕೆ ಮೇಲೆ ಒಟ್ಟಿಗೆ ಸ್ಟೆಪ್ಸ್
ದರ್ಶನ್ ಹಾಗೂ ಯಶ್ ವೇದಿಕೆ ಮೇಲೆ ಒಟ್ಟಿಗೆ ಎಂದೂ ಹೆಜ್ಜೆ ಹಾಕಿರಲಿಲ್ಲ. ಇನ್ನು ಇಬ್ಬರು ವೇದಿಕೆ ಮೇಲೆ ಹೆಜ್ಜೆ ಹಾಕಿ ಕೂಡ ಬಹಳ ದಿನಗಳಾಗಿತ್ತು. ಕ್ಲಬ್ ಅಭಿವಾ ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಜೋಶ್‌ನಲ್ಲಿ ಕುಣಿದಿದ್ದಾರೆ. ಅಭಿಮಾನಿಗಳು ಜೋಡೆತ್ತು ಡ್ಯಾನ್ಸ್ ಬೊಂಬಾಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಯಶ್, ದರ್ಶನ್, ಸುಮಲತಾ ಜೊತೆಗೆ ಬಹುಭಾಷಾ ನಟಿಯರಾದ ಮಾಲಾಶ್ರೀ, ರಮ್ಯಾಕೃಷ್ಣ ಸಹ ಹೆಜ್ಜೆ ಹಾಕಿ ಖುಷಿಪಟ್ಟಿದ್ದಾರೆ.

ಶಿವಣ್ಣ- ಪ್ರಭುದೇವಾ ಭಾಗಿ
ಅಣ್ಣಾವ್ರ ಸೂಪರ್ ಹಿಟ್ ಸಾಂಗ್ಸ್‌ಗೆ ಅಭಿಷೇಕ್ ಅಂಬರೀಶ್ ಜೊತೆ ಸುಮಲತಾ ಅಂಬರೀಶ್ ಹೆಜ್ಜೆ ಹಾಕಿದ್ದಾರೆ. ಆ ವಿಡಿಯೋ ಸಹ ವೈರಲ್ ಆಗ್ತಿದೆ. ಶಿವಣ್ಣ, ಪ್ರಭುದೇವಾ, ಪ್ರಿಯಾಂಕ ಉಪೇಂದ್ರ ಸೇರಿದಂತೆ ಹಲವರು ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ರಾಗಿಣಿ ಪ್ರಜ್ವಲ್ ಕೂಡ ವೇದಿಕೆ ಏರಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ರಂಗು ರಂಗಿನ ಪಾರ್ಟಿಯಲ್ಲಿ ತಾರೆಯರು ಕುಣಿದು ಸಂಭ್ರಮಿಸಿದ್ದಾರೆ.
ಸುಮಲತಾಗೆ ಜೋಡೆತ್ತು ಸಾಥ್
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ಹಾಗೂ ಯಶ್ ಸುಮಲತಾ ಪರ ಪ್ರಚಾರ ಮಾಡಿದ್ದರು. ಸುಮಲತಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಾವಿಬ್ಬರು ಜೋಡೆತ್ತು ಎಂದು ದರ್ಶನ್ ಹೇಳಿದ್ದರು. ಆ ನಂತರ ಜೋಡೆತ್ತು ಪದ ಸಖತ್ ಸದ್ದು ಮಾಡಿತ್ತು. ದರ್ಶನ್- ಯಶ್‌ರನ್ನು ಅಭಿಮಾನಿಗಳು ಜೋಡೆತ್ತು ಎಂದೇ ಕರೆಯಲು ಆರಂಭಿಸಿದರು. ಇದೀಗ ಅಭಿವಾ ಮದುವೆ ಪಾರ್ಟಿಯಲ್ಲಿ ಮತ್ತೆ ಇಬ್ಬರು ಒಟ್ಟಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಮನ ಗೆದ್ದಿದ್ದಾರೆ.


Click it and Unblock the Notifications











