ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಲೋಗೋ ಅನಾವರಣ: ಎಂದು ಪ್ರಾರಂಭ?
ವಿಶ್ವದ ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಸ್ಥಾನ ಪಡೆಯಲು ಸಜ್ಜಾಗಿರುವ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಮತ್ತೆ ಬಂದಿದೆ. ಸಿನಿಮೋತ್ಸವದ ಲೋಗೋವನ್ನು ಸಿಎಂ ಬಸವರಾಜ ಬೊಮ್ಮಾಯಿ ಇತರ ಸಚಿವರು ಇಂದು ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು 100 ಫೀಟ್ ರಿಂಗ್ ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರು ನಾಮಕಾರಣ ಮಾಡುವ ಕಾರ್ಯಕ್ರಮದಲ್ಲಿ, ಈ ಬಾರಿಯ ಬೆಂಗಳೂರು ಸಿನಿಮೋತ್ಸವದ ಲೋಗೋವನ್ನು ಸಹ ಅನಾವರಣ ಮಾಡಲಾಯಿತು.
14ನೇ ಬೆಂಗಳೂರು ಸಿನಿಮೋತ್ಸವದ ಲೋಗೋವನ್ನು ಸಿಎಂ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ರಾಕ್‌ಲೈನ್ ವೆಂಕಟೇಶ್, ರಾಘವೇಂದ್ರ ರಾಜ್‌ಕುಮಾರ್, ಅಶೋಕ್ ಕಶ್ಯಪ್ ಇತರರು ಲೋಕಾರ್ಪಣೆ ಮಾಡಿದರು.

ಈ ಬಾರಿಯ ಸಿನಿಮೋತ್ಸವವು ಮಾರ್ಚ್ 23 ರಿಂದ 30 ರ ವರೆಗೆ ನಡೆಯಲಿದೆ. ಎಲ್ಲಿ ಉದ್ಘಾಟನೆ ನಡೆಯಲಿದೆ, ಸಿನಿಮಾ ಪ್ರದರ್ಶಿಸುವ ಸ್ಥಳ ಯಾವುದು? ಅತಿಥಿಗಳು, ಯಾವ ಸಿನಿಮಾಗಳು ಪ್ರದರ್ಶಿತಗೊಳ್ಳಲಿವೆ ಇತ್ಯಾದಿ ವಿಷಯಗಳು ಇನ್ನಷ್ಟೆ ತಿಳಿಯಬೇಕಿದೆ.
ನಿನ್ನೆಯಷ್ಟೆ ಫಿಲಂ ಚೇಂಬರ್‌ನಲ್ಲಿ ಮಾತನಾಡಿದ್ದ ಕಂದಾಯ ಸಚಿವ ಆರ್.ಅಶೋಕ್, ಸಿನಿಮೋತ್ಸವಕ್ಕೆ ನಾಲ್ಕು ಕೋಟಿ ರು ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಬಾಲಿವುಡ್ ಹಿರಿಯ ನಟಿ ರೇಖಾ, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಕೆಲವು ಹೆಸರುಗಳನ್ನು ಸೂಚಿಸಲಾಗಿದ್ದು ಇವರಲ್ಲಿ ಯಾರಾದರೂ ಒಬ್ಬರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗುವುದು. ಚಿತ್ರೋತ್ಸವದ ಉದ್ಘಾಟನೆ ಕಾರ್ಯಕ್ರಮವನ್ನು ವಿಧಾನಸೌಧದ ಮುಂಭಾಗ ಮಾಡಬೇಕಾ? ಅಥವಾ ಇಂಡೋರ್‌ನಲ್ಲಿ ಮಾಡಬೇಕಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ ಈ ಬಾರಿ ಹೆಚ್ಚಿಗೆ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲು ಸೂಚಿಸಲಾಗಿದೆ'' ಎಂದಿದ್ದರು.


Click it and Unblock the Notifications











