ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಅಭಯ ನೀಡಿದ ಸಿಎಂ ಬೊಮ್ಮಾಯಿ
ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಕಮರ್ಶಿಯಲ್ ಸಿನಿಮಾ 'ಜೇಮ್ಸ್' ಅನ್ನು ಚಿತ್ರಮಂದಿರಗಳಿಂದ ಬಲವಂತವಾಗಿ ಎತ್ತಂಗಡಿ ಮಾಡಲಾಗುತ್ತಿದೆ ಎಂದು ಅಪ್ಪು ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಮೈಸೂರು ಸೇರಿದಂತೆ ಹಲವೆಡೆ ಈ ಬಗ್ಗೆ ಪ್ರತಿಭಟನೆಗಳನ್ನು ಸಹ ನಡೆಸಲಾಗಿದೆ.
'ಜೇಮ್ಸ್' ಸಿನಿಮಾ ಎತ್ತಂಗಡಿ ಮಾಡಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಪ್ರದರ್ಶಿಸಬೇಕೆಂದು ಬಿಜೆಪಿಯ ಕೆಲ ಶಾಸಕರು, ಸಚಿವರು ಚಿತ್ರಮಂದಿರಗಳ ಮಾಲೀಕರ ಮೇಲೆ ಒತ್ತಾಯ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಅಪ್ಪು ಅಭಿಮಾನಿಗಳಿಗೆ ಅಭಯ ನೀಡಿದ್ದಾರೆ.
''ಜೇಮ್ಸ್' ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಪಡಿಸಲು ಅವಕಾಶ ನೀಡುವುದಿಲ್ಲ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವ ಬಗ್ಗೆ ಇಂದು ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
Recommended Video

"ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯವರೊಂದಿಗೆ ಮಾತನಾಡಿದ್ದೇನೆ. ತೊಂದರೆಯಾಗಿರುವಲ್ಲಿ ಕೂಡಲೇ ಸರಿಪಡಿಸಿ, ಅನಾವಶ್ಯಕವಾಗಿ 'ಜೇಮ್ಸ್' ಸಿನಿಮಾವನ್ನು ಯಾರೂ ಚಿತ್ರಮಂದಿರಗಳಿಂದ ತೆಗೆಯತಕ್ಕದ್ದಲ್ಲ. ಸಂಬಂಧಪಟ್ಟ ನಿರ್ಮಾಪಕರು, ಚಿತ್ರಮಂದಿರದವರಿಗೆ ಇದನ್ನು ಸರಿಪಡಿಸುವ ಅಧಿಕಾರವಿದೆ. ನಟ ಶಿವರಾಜ್ ಕುಮಾರ್ ಅವರ ಬಳಿಯೂ ಮಾತನಾಡಿದ್ದೇನೆ. ತೊಂದರೆ ಇದ್ದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಥವಾ ನನ್ನ ಗಮನಕ್ಕೆ ತರಬೇಕೆಂದು ತಿಳಿಸಿದ್ದೇನೆ. ಅವರೂ ಸಹ ಒಪ್ಪಿದ್ದಾರೆ. ಕಾಂಗ್ರೆಸ್ ನವರು ಸಿನಿಮಾದಲ್ಲಿಯೂ ರಾಜಕಾರಣ ಮಾಡುವಷ್ಟು ಕೆಳಮಟ್ಟಕ್ಕೆ ಹೋಗಿದ್ದಾರೆ" ಎಂದರು.
ಬಿಜೆಪಿ ಶಾಕರು, ಸಚಿವರುಗಳು 'ಜೇಮ್ಸ್' ಸಿನಿಮಾದ ಪ್ರದರ್ಶನವನ್ನು ಬಲವಂತವಾಗಿ ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನಲ್ಲಿ ಇಂದು ಕಾಂಗ್ರೆಸ್ ಮಾಜಿ ಶಾಸಕರು, ಕಾರ್ಯಕರ್ತರು 'ಜೇಮ್ಸ್' ಸಿನಿಮಾ ವಿಷಯವಾಗಿ ಪ್ರತಿಭಟಿಸಿ ಸರ್ಕಾರವನ್ನು ಟೀಕಿಸಿದ್ದಾರೆ.
ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಇದೇ ವಿಷಯವಾಗಿ ಮಾಧ್ಯಮಗಳ ಬಳಿ ಮಾತನಾಡಿ, 'ಜೇಮ್ಸ್' ಸಿನಿಮಾ ಪ್ರದರ್ಶನವಾಗುತ್ತಿದ್ದ ಕೆಲವು ಕಡೆಗಳಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರು, ಶೋ ಅನ್ನು ಬಂದ್‌ಗೊಳಿಸಿ ಅಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನ ಮಾಡುತ್ತಿದ್ದಾರೆ ಎಂದು 'ಜೇಮ್ಸ್' ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡು ನನ್ನನ್ನು ಭೇಟಿಯಾಗಿ ಬೇಸರ ಹೇಳಿಕೊಂಡರು. ನಿರ್ಮಾಪಕರು ಈಗಾಗಲೇ ಚಿತ್ರಮಂದಿರಗಳಿಗೆ ಅಡ್ವಾನ್ಸ್, ಬಾಡಿಗೆ ನೀಡಿ ಸಿನಿಮಾ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ಈಗ ಬಿಜೆಪಿಯವರು ಬಲವಂತದಿಂದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಪ್ರದರ್ಶನ ಮಾಡುವುದು ದೌರ್ಜನ್ಯ ಎನಿಸಿಕೊಳ್ಳುತ್ತದೆ'' ಎಂದಿದ್ದರು.
ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಸಹ ಮಾತನಾಡಿ, ''ಕೆಲವೆಡೆ 'ಜೇಮ್ಸ್' ಸಿನಿಮಾವನ್ನು ತೆಗೆದು ಬೇರೆ ಸಿನಿಮಾ ಹಾಕಲು ಹುನ್ನಾರ ನಡೆಯುತ್ತಿದೆ. 'ಜೇಮ್ಸ್' ಸಿನಿಮಾವನ್ನು ತೆಗೆಯುವಂತೆ ಯಾರಿಂದ ಒತ್ತಡ ಬರುತ್ತಿದೆ ಎಂದು ನನಗೆ ಗೊತ್ತಿಲ್ಲ. ಆದರೆ ಒತ್ತಡವಂತೂ ಇದೆ'' ಎಂದಿದ್ದರು.
ಆದರೆ ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ವತಃ ಈ ಬಗ್ಗೆ ಪ್ರತಿಕ್ರಿಯಿಸಿ ಅನವಶ್ಯಕವಾಗಿ 'ಜೇಮ್ಸ್' ಸಿನಿಮಾವನ್ನು ತೆಗೆಯುವುದು ಸರಿಯಲ್ಲ. ಹೀಗಾಗಲು ಬಿಡುವುದಿಲ್ಲ'' ಎಂದಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಸ್ವತಃ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಆಗಿದ್ದಾರೆ. ಪುನೀತ್ ಅಗಲಿಕೆ ಬಳಿಕ ಸಿಎಂ ಅವರು ಸ್ಥಳದಲ್ಲಿಯೇ ಹಾಜರಿದ್ದು ಅಂತಿಮ ದರ್ಶನ ಹಾಗೂ ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ನಡೆಸಿಕೊಟ್ಟಿದ್ದರು.


Click it and Unblock the Notifications











