ಮೇಡ್ ಇನ್ ಕರ್ನಾಟಕ.. ಸಂಭಾವನೆ ಪಡೆಯದೇ ಲಿಡ್ಕರ್ ಉತ್ಪನ್ನ ಪ್ರದರ್ಶನ ರಾಯಭಾರಿಯಾಗಿ ಧನಂಜಯ್ ಆಯ್ಕೆ
ನಟನೆ, ಸಿನಿಮಾ ನಿರ್ಮಾಣ, ಸಿನಿಮಾ ಬರವಣಿಗೆ ಎಂದು ಬ್ಯುಸಿಯಾಗಿರು ನಟ ಧನಂಜಯ ಈಗ ಸರ್ಕಾರದ ಉತ್ಪನ್ನಕ್ಕೆ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ. ಲಿಡ್ಕರ್ ಉತ್ಪನ್ನಗಳ ರಾಯಭಾರಿಯಾಗಿ ಧನಂಜಯ ಅವರನ್ನು ಸರ್ಕಾರ ಇತ್ತೀಚೆಗೆ ಆಯ್ಕೆ ಮಾಡಿತ್ತು. ವಿಧಾನಸೌಧ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ಕ್ಕೆ ಧನಂಜಯ್ ರಾಯಭಾರಿಯಾಗಿದ್ದು ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡಲಿದ್ದಾರೆ. ಮೊದಲ ಬಾರಿಗೆ ಸರ್ಕಾರದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಲಿಡ್ಕರ್ ಉತ್ಪನ್ನಕ್ಕೆ ಸರ್ಕಾರ ರಾಯಭಾರಿಯನ್ನು ನೇಮಿಸಿದೆ. ಲಿಡ್ಕಡ್ ಉದ್ಯಮವನ್ನು ನಂಬಿಕೊಂಡು ಸುಮಾರು 50 ಸಾವಿರ ಕುಟುಂಬಗಳಿವೆ.

ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ನಟ ಧನಂಜಯ್ "ನಾನು ಮೊದಲ ಬಾರಿಗೆ ರಾಯಭಾರಿ ಆಗುತ್ತಿದ್ದೇನೆ. ಅದು ಕೂಡ ಈ ರೀತಿಯ ಉದ್ದೇಶಕ್ಕೆ ಲಿಡ್ಕರ್ ಉತ್ಪನ್ನಗಳಿಗೆ ರಾಯಭಾರಿಯಾಗಿರುವುದು ಖುಷಿ ಇದೆ. ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ ಅವರು ಈ ಉದ್ಯಮ ನಂಬಿಕೊಂಡು 50 ಸಾವಿರ ಕುಟುಂಬಗಳಿವೆ ಎಂದಾಗ ಖುಷಿಯಾಯಿತು. ಲಿಡ್ಕರ್ ಸಂಸ್ಥೆಗಳಿಂದ ಹಾಕಿಕೊಟ್ಟಿರುವ ಅಂಗಡಿಗಳನ್ನು ನೋಡಿದ್ದೇನೆ. ಲಿಡ್ಕರ್ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ಕಲ್ಯಾಣಮ್ಮ ಮತ್ತು ಹರಳಯ್ಯ ಅವರ ಭಾವಚಿತ್ರ ಹಾಕಿದ್ದರು. ನಮ್ಮ ಕರ್ನಾಟಕದಲ್ಲಿ ಕಲ್ಯಾಣಮ್ಮ ಮತ್ತು ಹರಳಯ್ಯರಂತಹ ಸಾವಿರಾರು ಜನ ಕುಶಲಕರ್ಮಿಗಳಿದ್ದಾರೆ"
"ಇದು ಸರ್ಕಾರದಿಂದಲೇ ಮಾಡಿರುವಂತಹ ಉತ್ಪನ್ನ. ಇದರಿಂದ ಏನೇ ಬಂದರೂ ಅಷ್ಟೂ ಬಡ ಕುಟುಂಬಗಳಿಗೆ ಹೋಗುತ್ತೆ. ಇಂತಹ ಕಾರ್ಯಕ್ರಮಕ್ಕೆ ನನ್ನನ್ನು ರಾಯಭಾರಿಯಾಗಿ ಮಾಡಿದ್ದು ಖುಷಿ ಇದೆ. ಸಿಎಂ ಹಾಗೂ ಸಚಿವರಾದ ಮಹದೇವಪ್ಪ ಅವರಿಗೆ ಧನ್ಯವಾದ ಹೇಳುತ್ತೇನೆ. ಇವೆಲ್ಲಾ ನಮ್ಮದೇ ಪ್ರಾಡಕ್ಟ್‌ಗಳು. ನಂದಿನಿ, ಮೈಸೂರ್ ಸಿಲ್ಕ್, ಮೈಸೂರ್ ಸ್ಯಾಂಡಲ್, ಲಿಡ್ಕರ್ ಇದು ನಮ್ಮದೇ ಉದ್ಯಮ. ಇದನ್ನು ಎಷ್ಟು ಬಳಸುತ್ತೇವೆ ಅದು ನಮಗೆ ವಾಪಸ್ ಬರುತ್ತದೆ. ಇದು ಮೇಡ್ ಇನ್ ಕರ್ನಾಟಕ" ಎಂದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ "ನಟ ಡಾಲಿ ಧನಂಜಯ ಅವರನ್ನು ಲಿಡ್ಕರ್ ಉತ್ಪನ್ನ ಪ್ರದರ್ಶನ ರಾಯಭಾರಿಯಾಗಿ ಆಯ್ಕೆ ಮಾಡಿದ್ದೀವಿ. ಉಚಿತವಾಗಿ ಅವರು ರಾಯಭಾರಿಯಾಗಿ ಕೆಲಸ ಮಾಡಲಿದ್ದಾರೆ. ಧನಂಜಯ ಉದಯೋನ್ಮುಖ ನಟ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ನಟ, ಸಾಮಾಜಿಕ ಕಳಕಳಿ ಇರುವಂತಹವರು. ಅವರನ್ನು ರಾಯಭಾರಿಯಾಗಿ ಮಾಡಿರುವುದು ಅರ್ಥಪೂರ್ಣವಾಗಿದೆ ಎನಿಸುತ್ತಿದೆ. ಇದರಿಂದ ಲಿಡ್ಕರ್ ಉತ್ಪನ್ನಗಳು ಹೆಚ್ಚಾಗುತ್ತದೆ. ಮತ್ತು ಚರ್ಮ ಉದ್ಯಮಕ್ಕೆ ಉತ್ತೇಜನ ಸಿಗುತ್ತದೆ" ಎಂದರು.


Click it and Unblock the Notifications











